ಮುಂಬೈ: ವಂಚನೆ ನಡೆಯದಂತೆ ನೋಡಿಕೊಳ್ಳುವ ಜತೆಗೆ ವಂಚನೆ ನಡೆಯಲಿದೆ ಎನ್ನುವ ಸುಳಿವು ಕಂಡುಕೊಂಡು ಆರಂಭದಲ್ಲಿಯೇ ಅದನ್ನು ಹತ್ತಿಕ್ಕಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.
ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಬ್ಯಾಂಕಿಂಗ್ ವ್ಯವಸ್ಥೆ ದೃಢ ಮತ್ತು ಸ್ಥಿರವಾಗಿ ಮುಂದುವರಿಯಲಿದೆಯಾದರೂ ಕೋವಿಡ್–19 ಬಿಕ್ಕಟ್ಟಿನಿಂದಾಗಿ ಬ್ಯಾಂಕ್‌ಗಳು ಬಂಡವಾಳ ನಷ್ಟ ಅನುಭವಿಸುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸವಾಲುಗಳಿಂದ ದೂರ ಉಳಿದರೆ ತಾವಾಗಿಯೇ ಸೋಲು ಒಪ್ಪಿಕೊಂಡಂತೆ ಆಗಲಿದೆ ಎಂದು ಹೇಳಿದ್ದಾರೆ. ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಮಾಣವು ಶೇಕಡ 6ಕ್ಕಿಂತಲೂ ಕಡಿಮೆ ಇದೆ.
ಆರ್‌ಬಿಐನ ವಾರ್ಷಿಕ ವರದಿಯ ಪ್ರಕಾರ, 2019–20ರಲ್ಲಿ ಬ್ಯಾಂಕಿಂಗ್ ವಲಯದಲ್ಲಿನ ವಂಚನೆಯ ಮೊತ್ತ ₹ 1.85 ಲಕ್ಷ ಕೋಟಿ.
‘ವಂಚನೆ ನಡೆಯುವುದಕ್ಕೂ ಮೊದಲು ಅದರ ಸುಳಿವು ಕಂಡುಕೊಳ್ಳಲು ಸಾಧ್ಯವಾಗುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಗಂಡಾಂತರ ನಿರ್ವಹಣೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ’ ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ, ಗಂಡಾಂತರ ನಿರ್ವಹಣೆ, ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕುರಿತು ಹೆಚ್ಚಿನ ಗಮನ ನೀಡುವಂತೆ ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.