ADVERTISEMENT

ಉಕ್ಕಿನ ಬೆಲೆ ಶೇ 15ರವರೆಗೆ ಇಳಿಕೆ ಸಾಧ್ಯತೆ

ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ ಹೇಳಿಕೆ

ಪಿಟಿಐ
Published 23 ಮೇ 2022, 13:25 IST
Last Updated 23 ಮೇ 2022, 13:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆಯು ಶೇಕಡ 10ರಿಂದ ಶೇ 15ರವರೆಗೂ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಸೋಮವಾರ ಹೇಳಿದೆ.

ಕೆಲವು ಉಕ್ಕು ಉತ್ಪನ್ನಗಳ ರಫ್ತಿನ ಮೇಲೆ ಸುಂಕ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಮಂಡಳಿಯ ಭಾರತದ ಅಧ್ಯಕ್ಷ ಮಹೇಶ್‌ ದೇಸಾಯಿ ಸೋಮವಾರ ಪ್ರತಿಕ್ರಿಯೆ ನೀಡಿದ್ದಾರೆ. ‘ಎಂಜಿನಿಯರಿಂಗ್‌ ಸರಕುಗಳ ತಯಾರಕರು ಮತ್ತು ರಫ್ತುದಾರರಿಗೆ ಇದರಿಂದ ಪ್ರಯೋಜನ ಆಗಲಿದೆ. ದೇಶಿ ಕಂಪನಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಸ್ಪರ್ಧಾತ್ಮಕ ಆಗಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಉಕ್ಕು ಉದ್ಯಮದಲ್ಲಿ ಬಳಸುವ ಕೋಕಿಂಗ್‌ ಕಲ್ಲಿದ್ದಲು ಮತ್ತು ಫೆರಾನಿಕಲ್‌ ಮೇಲಿನ ಆಮದು ಸುಂಕವನ್ನು ಸರ್ಕಾರ ತೆಗೆದುಹಾಕಿದೆ. ಅಲ್ಲದೆ, ಕಬ್ಬಿಣದ ಅದಿರು ರಫ್ತು ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿದೆ.

ADVERTISEMENT

‘ಉಕ್ಕಿನ ಕಚ್ಚಾ ಸಾಮಗ್ರಿಗಳ ಆಮದು ಸುಂಕ ಕೈಬಿಡುವ ನಿರ್ಧಾರದಿಂದ ದೇಶಿ ಮಾರುಕಟ್ಟೆಯಲ್ಲಿ ಉಕ್ಕಿನ ಬೆಲೆ ಕಡಿಮೆ ಆಗಲಿದೆ. ಕಬ್ಬಿಣದ ಅದರಿನ ರಫ್ತು ಸುಂಕ ಹೆಚ್ಚಳದಿಂದ ದೇಶದಲ್ಲಿ ಲಭ್ಯತೆಯು ಸುಧಾರಿಸಲಿದೆ’ ಎಂದು ದೇಸಾಯಿ ಹೇಳಿದ್ದಾರೆ.

‘ಪೆಟ್ರೋಲ್, ಡೀಸೆಲ್ ದರವನ್ನು ಕಡಿಮೆ ಮಾಡಿರುವುದರಿಂದ ಸರಕು ಸಾಗಣೆ ವೆಚ್ಚ ಕಡಿಮೆ ಆಗಲಿದೆ’ ಎಂದು ಹೇಳಿದ್ದಾರೆ. ‘ಟಿಎಂಟಿ ಬಾರ್‌ಗಳ ಬೆಲೆಯು ಈಗಾಗಲೇ ಇಳಿಕೆ ಕಾಣಲು ಆರಂಭವಾಗಿದೆ’ ಎಂದು ಆಲ್‌ ಇಂಡಿಯಾ ಇಂಡಕ್ಷನ್‌ ಫರ್ನೇಸಸ್‌ ಅಸೋಸಿಯೇಷನ್‌ (ಎಐಐಎಫ್‌ಎ) ಪ್ರಧಾನ ಕಾರ್ಯದರ್ಶಿ ಕಮಲ್‌ ಅಗರ್‌ವಾಲ್‌ ಹೇಳಿದ್ದಾರೆ.

‘ಟಿಎಂಟಿ ಬಾರ್ ಬೆಲೆಯುಸೋಮವಾರ ಪ್ರತಿ ಟನ್‌ಗೆ ₹ 52 ಸಾವಿರದಂತೆ ಮಾರಾಟ ಆಗಿದೆ. ಭಾನುವಾರ ಪ್ರತಿ ಟನ್‌ಗೆ ₹ 57 ಸಾವಿರ ಇತ್ತು. ಅಂದರೆ ಪ್ರತಿ ಟನ್‌ಗೆ ₹ 5 ಸಾವಿರ ಇಳಿಕೆ ಆಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಉಕ್ಕಿನ ಗಟ್ಟಿಗಳು ಮತ್ತು ಸರಳುಗಳ ಬೆಲೆಯು ಪ್ರತಿ ಟನ್‌ಗೆ ₹ 5 ಸಾವಿರದಷ್ಟು ಕಡಿಮೆ ಆಗಿದೆ. ಉಕ್ಕಿನ ಗಟ್ಟಿ ಬೆಲೆಯು ₹ 50 ಸಾವಿರ ಮತ್ತು ಸರಳುಗಳ ಬೆಲೆಯು ₹ 51 ಸಾವಿರ ಇದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.