ADVERTISEMENT

ಷೇರುಪೇಟೆ: ಚೇತರಿಕೆ ಹಾದಿಗೆ ವಹಿವಾಟು

ಜಾಗತಿಕ ವಿದ್ಯಮಾನಗಳ ಪ್ರಭಾವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 18:21 IST
Last Updated 4 ಸೆಪ್ಟೆಂಬರ್ 2019, 18:21 IST
ಗೂಳಿ ಓಟ
ಗೂಳಿ ಓಟ   

ಮುಂಬೈ (ಪಿಟಿಐ): ಮಂಗಳವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿದ್ದ ದೇಶಿ ಷೇರುಪೇಟೆಗಳು ಜಾಗತಿಕ ವಿದ್ಯಮಾನಗಳ ಸಕಾರಾತ್ಮಕ ಪ್ರಭಾವಕ್ಕೆ ಒಳಗಾಗಿ ಬುಧವಾರ ಚೇತರಿಕೆ ಹಾದಿಗೆ ಮರಳಿದವು.

ಲೋಹ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾಗಿದ್ದರಿಂದ ಸೂಚ್ಯಂಕಗಳು ನಷ್ಟದಿಂದ ಹೊರಬರುವಂತಾಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 367 ಅಂಶಗಳವರೆಗೆ ಏರಿಳಿತ ಅನುಭವಿಸಿತು. ಅಂತಿಮವಾಗಿ 162 ಅಂಶಗಳ ಏರಿಕೆಯೊಂದಿಗೆ 36,725 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಸಹ 47 ಅಂಶ ಹೆಚ್ಚಾಗಿ 10,844 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಗಳಿಕೆ: ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಟಾಟಾ ಸ್ಟೀಲ್‌, ವೇದಾಂತ, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಸಿಎಲ್ ಟೆಕ್‌, ಒಎನ್‌ಜಿಸಿ, ಐಸಿಐಸಿಐ ಬ್ಯಾಂಕ್‌ ಮತ್ತು ಎಲ್‌ಆ್ಯಂಡ್‌ಟಿ ಶೇ 2.97ರವರೆಗೂ ಗಳಿಕೆ ಕಂಡಿವೆ.

ಇಳಿಕೆ: ಮಾರುತಿ ಶೇ 3.64ರಷ್ಟು ಗರಿಷ್ಠ ಕುಸಿತ ಕಂಡಿದೆ. ಹರಿಯಾಣದಲ್ಲಿರುವ ಎರಡು ಘಟಕಗಳಲ್ಲಿ ಎರಡು ದಿನ ತಯಾರಿಕೆ ನಿಲ್ಲಿಸಲು ಕಂಪನಿ ನಿರ್ಧರಿಸಿದೆ. ಇದರಿಂದಾಗಿ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ.

ಸನ್ ಫಾರ್ಮಾ, ಟಾಟಾ ಮೋಟರ್ಸ್‌, ಏಷ್ಯನ್‌ ಪೇಂಟ್ಸ್‌, ಇಂಡಸ್‌ಇಂಡ್‌ ಬ್ಯಾಂಕ್, ಮಹೀಂದ್ರಾ, ಬಜಾಜ್‌ ಆಟೊ ಮತ್ತು ರಿಲಯನ್ಸ್‌ ಷೇರುಗಳು ಶೇ 2.97ರವರೆಗೂ ಇಳಿಕೆ ಕಂಡಿವೆ.

ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 27 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 72.12ರಂತೆ ವಿನಿಮಯಗೊಂಡಿತು.

ಮಂಗಳವಾರದ ವಹಿವಾಟಿನಲ್ಲಿ 97 ಪೈಸೆ ಕುಸಿತ ಕಂಡು ₹ 72.39ಕ್ಕೆ ಇಳಿಕೆಯಾಗಿತ್ತು.

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹವು ದೇಶಿ ಪೇಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಹಾಂಗ್‌ಸೆಂಗ್‌ ಶೇ 3.90ರಷ್ಟು ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.