ADVERTISEMENT

ಐ.ಟಿ ಮಸೂದೆ: 6ರಿಂದ ಅಭಿಪ್ರಾಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 13:27 IST
Last Updated 2 ಮಾರ್ಚ್ 2025, 13:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಲೋಕಸಭೆಯ ಪರಿಶೀಲನಾ ಸಮಿತಿಯು ಆದಾಯ ತೆರಿಗೆ ಮಸೂದೆ 2025ರ ಕುರಿತಂತೆ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಐಸಿಸಿಐ) ಸೇರಿ ಕೈಗಾರಿಕೆ ವಲಯದ ಸಂಘ–ಸಂಸ್ಥೆಗಳಿಂದ ಅಭಿಪ್ರಾಯ ಸ್ವೀಕರಿಸುವ ಸಾಧ್ಯತೆಯಿದೆ. 

ಬಿಜೆಪಿ ಹಿರಿಯ ಸಂಸದ ಬೈಜಯಂತ್ ಪಾಂಡಾ ಇದರ ಅಧ್ಯಕ್ಷರಾಗಿದ್ದಾರೆ. ಸಂಸದರಾದ ನಿಶಿಕಾಂತ್ ದುಬೆ, ಜಗದೀಶ ಶೆಟ್ಟರ್‌, ಭರ್ತೃಹರಿ ಮಹತಾಬ್, ನವೀನ್ ಜಿಂದಾಲ್, ದೀಪೇಂದರ್ ಹೂಡಾ, ಬೆನ್ನಿ ಬೆಹನನ್, ಮಹುವಾ ಮೊಯಿತ್ರಾ, ಎನ್.ಕೆ. ಪ್ರೇಮಚಂದ್ರನ್, ಸುಪ್ರಿಯಾ ಸುಳೆ, ಅರವಿಂದ್ ಸಾವಂತ್ ಹಾಗೂ ಲಾಲ್ಜಿ ವರ್ಮಾ ಈ ಸಮಿತಿಯ ಸದಸ್ಯರಾಗಿದ್ದಾರೆ.

ಫೆಬ್ರುವರಿ 24ರಂದು ಸಮಿತಿಯ ಮೊದಲ ಸಭೆ ನಡೆದಿದೆ. ಮಾರ್ಚ್ 6ರಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ), ತೆರಿಗೆ ಸಲಹಾ ಸಂಸ್ಥೆಯಾದ ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಜೊತೆಗೆ ಸಮಾಲೋಚನೆ ನಡೆಸಲಿದೆ. ಮಾರ್ಚ್ 7ರಂದು ಎಫ್‌ಐಸಿಸಿಐ ಮತ್ತು ಸಿಐಐ ಜೊತೆಗೆ ಚರ್ಚಿಸಲಿದೆ. 

ADVERTISEMENT

ಇದಕ್ಕೆ ಮೊದಲು ಕೇಂದ್ರ ಹಣಕಾಸು ಸಚಿವಾಲಯವು ಸಮಿತಿಯ ಸದಸ್ಯರಿಗೆ ಮಸೂದೆ ಬಗ್ಗೆ ವಿವರಣೆ ನೀಡಿದೆ. ಹಾಲಿ ಇರುವ ಆರು ದಶಕದಷ್ಟು ಹಳೆಯದಾದ ಕಾಯ್ದೆಯ ಸಮಗ್ರ ಬದಲಾವಣೆ ಮಾಡಲಾಗುತ್ತಿದೆ. ತೆರಿಗೆದಾರರಿಗೆ ಅರ್ಥವಾಗುವಂತೆ ಸರಳೀಕರಣಗೊಳಿಸಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದೆ.

ಸಂಸತ್‌ನ ಬಜೆಟ್‌ ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಸದನದ ಪರಿಶೀಲನಾ ಸಮಿತಿಗೆ ಒಪ್ಪಿಸುವಂತೆ ಕೋರಿದ್ದರು. ಮುಂದಿನ ಸಂಸತ್‌ ಅಧಿವೇಶನದ ಮೊದಲ ದಿನದಂದು ವರದಿ ಸಲ್ಲಿಸುವಂತೆ ಈ ಸಮಿತಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.