ADVERTISEMENT

ಸಂಗೂರಿನಲ್ಲಿ ಮೇಳೈಸಿದ ಕಬ್ಬಿನ ಹಾಲಿನ ಅಂಗಡಿಗಳು: 2 ಲೀಟರ್‌ಗೆ ಕೇವಲ ₹ 50

ಸಿದ್ದು ಆರ್.ಜಿ.ಹಳ್ಳಿ
Published 18 ಫೆಬ್ರುವರಿ 2020, 19:45 IST
Last Updated 18 ಫೆಬ್ರುವರಿ 2020, 19:45 IST
ಸಂಗೂರ ಸಕ್ಕರೆ ಕಾರ್ಖಾನೆ ಮುಂಭಾಗವಿರುವ ಕಬ್ಬಿನ ಹಾಲಿನ ಸಾಲು ಅಂಗಡಿಗಳು  –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ 
ಸಂಗೂರ ಸಕ್ಕರೆ ಕಾರ್ಖಾನೆ ಮುಂಭಾಗವಿರುವ ಕಬ್ಬಿನ ಹಾಲಿನ ಸಾಲು ಅಂಗಡಿಗಳು  –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ    

ಹಾವೇರಿ: ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಮುಂಭಾಗ, ಹಾವೇರಿ–ಹಾನಗಲ್‌ ಮುಖ್ಯರಸ್ತೆಯ ಬದಿಯಲ್ಲಿ 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕಬ್ಬಿನ ಹಾಲಿನ ಅಂಗಡಿಗಳು ದರ ಮತ್ತು ಸ್ವಾದದಿಂದ ಗ್ರಾಹಕರಿಗೆ ಅಚ್ಚುಮೆಚ್ಚಾಗಿವೆ.

ಈ ಹೆದ್ದಾರಿಯಲ್ಲಿ ಸಂಚರಿಸುವ ಬಹುತೇಕ ಪ್ರಯಾಣಿಕರು ಲೀಟರ್‌ಗಟ್ಟಲೆ ಕಬ್ಬಿನ ಹಾಲನ್ನು ಈ ಅಂಗಡಿಗಳಲ್ಲಿ ಖರೀದಿಸುತ್ತಾರೆ. ಕಾರಣ 2 ಲೀಟರ್‌ ಕಬ್ಬಿನ ಹಾಲಿಗೆ ₹40ರಿಂದ ₹50 ದರವಿದೆ. 2 ಲೀಟರ್‌ಗೆ 8ರಿಂದ 10 ಕಪ್‌ನಷ್ಟು ಕಬ್ಬಿನ ಹಾಲು ಸಿಗುತ್ತದೆ. ಒಂದು ಕಪ್‌ಗೆ ಇತರ ಅಂಗಡಿಗಳಲ್ಲಿ ₹ 10ರಿಂದ ₹ 15ದರವಿದೆ. ಐಸ್‌ರಹಿತ ಕಬ್ಬಿನ ಹಾಲು ಬೇಕೆಂದರೆ ₹ 20 ಕೊಡಬೇಕು.

‘ಐಸ್‌ರಹಿತ ಕಬ್ಬಿನ ಹಾಲು ಮಾರಾಟ ಇಲ್ಲಿನ ವಿಶೇಷ. ಕಪ್‌ ಲೆಕ್ಕದಲ್ಲಿ ತೆಗೆದುಕೊಂಡರೆ ₹ 10 ದರವಿದೆ. ಲೀಟರ್‌ಗಟ್ಟಲೆ ತೆಗೆದುಕೊಂಡರೆ ಹೆಚ್ಚು ಲಾಭ. ಇತರೆಡೆಗಿಂತ ಇಲ್ಲಿ ಹೆಚ್ಚು ರುಚಿಯಾಗಿರುತ್ತದೆ. ಹಾಗಾಗಿ ಈ ರಸ್ತೆಯಲ್ಲಿ ಬಂದಾಗಲೆಲ್ಲ ನಾವು ಇಲ್ಲಿ ಕಬ್ಬಿನ ಹಾಲು ಕುಡಿದು ಮನೆಗೂ ಕೊಂಡೊಯ್ಯುತ್ತೇವೆ’ ಎನ್ನುತ್ತಾರೆ ಗ್ರಾಹಕ ವೀರೇಶ್‌ ಬಡಿಗೇರ.

ADVERTISEMENT

‘ಸಂಗೂರ ಸಕ್ಕರೆ ಕಾರ್ಖಾನೆ ಸುತ್ತಮುತ್ತಲಿರುವ ತಮ್ಮ ಗದ್ದೆಗಳಲ್ಲಿ ಬೆಳೆಯುವ ಕಬ್ಬುಗಳನ್ನು ಕಟಾವು ಮಾಡಿ ತಂದು, ಬಲಿತ ಕಬ್ಬುಗಳಿಂದ ಉತ್ಕೃಷ್ಟ ಹಾಲು ತಯಾರಿಸುತ್ತೇವೆ. ಉತ್ತಮ ಆರೋಗ್ಯ ಪೇಯವಾಗಿರುವ ಕಬ್ಬಿನ ಹಾಲು ಕಾಮಾಲೆ ರೋಗ, ದೇಹದಲ್ಲಿರುವ ಸೋಂಕನ್ನು ನಿವಾರಿಸುತ್ತದೆ. ದೇಹದ ಪೋಷಕಾಂಶಗಳ ಕೊರತೆಯನ್ನೂ ನೀಗಿಸುತ್ತದೆ.ಕಬ್ಬಿನ ಹಾಲಿಗೆ ಶುಂಠಿ, ನಿಂಬೆಹಣ್ಣು ಬೆರೆಸಿ ಸೇವಿಸುವುದರಿಂದ ಜೀರ್ಣಶಕ್ತಿಯನ್ನು ವೃದ್ಧಿಸಿ, ಹೊಟ್ಟೆ ಉಬ್ಬರವನ್ನೂ ಹೋಗಲಾಡಿಸುತ್ತದೆ’ ಎನ್ನುತ್ತಾರೆ ವ್ಯಾಪಾರಿ ಸೋಮಶೇಖರ ಮಲಗುಂದ.

ಸುಮಾರು 15–20 ವರ್ಷಗಳಿಂದ ನಡೆಸುತ್ತಿರುವ ಈ ವ್ಯಾಪಾರ ಇಲ್ಲಿನ ರೈತರಿಗೆ ಸ್ವಾವಲಂಬಿ ಜೀವನಕ್ಕೂ ದಾರಿ ಮಾಡಿಕೊಟ್ಟಿದೆ. ನಿತ್ಯ ತಲಾ ಅಂಗಡಿಯಲ್ಲಿ 150 ಕಪ್‌ನಷ್ಟು ಕಬ್ಬಿನ ಹಾಲು ಮತ್ತು ಎರಡು ಲೀಟರ್‌ ಸಾಮರ್ಥ್ಯದ 20ರಿಂದ 25 ಬಾಟಲಿಗಳು ಬಿಕರಿಯಾಗುತ್ತವೆ. ಕೆಲವರು ಸಭೆ, ಸಮಾರಂಭ, ಹಬ್ಬಗಳಿಗೆ ಇಲ್ಲಿಂದ ಹೆಚ್ಚಿನ ಪ್ರಮಾಣದ ಹಾಲನ್ನು ಕೊಂಡೊಯುತ್ತಾರೆ.

ಇಳಿವಯಸ್ಸಿನಲ್ಲೂ ಕಬ್ಬನ್ನು ನುರಿಸಿ ಹಾಲು ಮಾರಾಟ ಮಾಡುವ 75 ವರ್ಷದ ಪಾರವ್ವ ವಿಶೇಷವಾಗಿ ಗಮನಸೆಳೆಯುತ್ತಾರೆ. 18 ವರ್ಷಗಳಿಂದ ನಿರಂತರವಾಗಿ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ದರಕ್ಕಿಂತ ಗ್ರಾಹಕರ ಸಂತೃಪ್ತಿಯೇ ಹೆಚ್ಚು. ಹಾಗಾಗಿ ಇಲ್ಲಿನ ಎಲ್ಲ ಅಂಗಡಿಗಳಲ್ಲಿ ಕಬ್ಬಿನ ಹಾಲು ಜತೆಗೆ ಬಾಟಲಿಗಳನ್ನು ಉಚಿತವಾಗಿಯೇ ಕೊಡುತ್ತೇವೆ ಎನ್ನುತ್ತಾರೆ ಪಾರವ್ವ.

‘ನವೆಂಬರ್‌ನಿಂದ ಮಾರ್ಚ್‌ವರೆಗೆ ನಮಗೆ ಸುಗ್ಗಿ ಕಾಲ. ಆಗ ಉತ್ತಮ ಕಬ್ಬು ದೊರೆಯುವುದರಿಂದ ವ್ಯಾಪಾರವೂ ಜೋರು.ಮೇನಿಂದ ಸೆಪ್ಟೆಂಬರ್‌ವರೆಗೆ ಅಂದರೆ ಮಳೆಗಾಲದಲ್ಲಿ ಬಹುತೇಕ ಅಂಗಡಿಗಳು ಬಂದ್‌ ಆಗುತ್ತವೆ. ಆಗ ಕಬ್ಬಿನ ಹಾಲಿಗೆ ಬೇಡಿಕೆ ಕಡಿಮೆ. ಎಳೆಯ ಕಬ್ಬು ಬಳಸಿದರೆ ರುಚಿ ಚೆನ್ನಾಗಿರುವುದಿಲ್ಲ. ಹಾಗಾಗಿ ಹದವಾದ ಬಲಿತ ಕಬ್ಬುಗಳನ್ನೇ ಬಳಸುತ್ತೇವೆ’ ಎನ್ನುತ್ತಾರೆ ವ್ಯಾಪಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.