
ನವದೆಹಲಿ: ಕೇಂದ್ರ ಸರ್ಕಾರವು 2025–26ನೇ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ರಫ್ತಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಿದೆ. ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಬಳಸಿದ ಸಕ್ಕರೆಯ ಪ್ರಮಾಣವು ನಿರೀಕ್ಷೆಗಿಂತ ಕಡಿಮೆ ಆಗಿದ್ದ ಕಾರಣದಿಂದಾಗಿ, ಸಕ್ಕರೆ ದಾಸ್ತಾನು ಹೆಚ್ಚಿದೆ. ಹೀಗಾಗಿ ರಫ್ತಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
2024–25ರಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು 34 ಲಕ್ಷ ಟನ್ ಸಕ್ಕರೆಯನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಬಳಸಿಕೊಂಡವು. ಆ ವರ್ಷದಲ್ಲಿ ಕಾರ್ಖಾನೆಗಳು 45 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವ ನಿರೀಕ್ಷೆ ಇತ್ತು ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.
ಎಥೆನಾಲ್‌ಗೆ ಸಕ್ಕರೆ ಬಳಕೆ ಕಡಿಮೆಯಾದ ಪರಿಣಾಮವಾಗಿ 2025–26ನೇ ಮಾರುಕಟ್ಟೆ ವರ್ಷದ ಆರಂಭದಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿನ ಮಟ್ಟದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ವರ್ಷದ ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ಮಾರುಕಟ್ಟೆ ವರ್ಷ ಎಂದು ಪರಿಗಣಿಸಲಾಗುತ್ತದೆ.
2025–26ರಲ್ಲಿ ಸಕ್ಕರೆ ಉತ್ಪಾದನೆಯು 3.4 ಕೋಟಿ ಟನ್ ಆಗುವ ನಿರೀಕ್ಷೆ ಇದೆ. ದೇಶಿ ಮಾರುಕಟ್ಟೆಯಲ್ಲಿ ವಾರ್ಷಿಕ ಬೇಡಿಕೆಯು 2.85 ಕೋಟಿ ಟನ್ ಇರಲಿದೆ ಎಂದು ಚೋಪ್ರಾ ತಿಳಿಸಿದ್ದಾರೆ.
ಸಕ್ಕರೆ ರಫ್ತಿಗೆ ಅವಕಾಶ ಕಲ್ಪಿಸಬೇಕು ಎಂದು ಕಾರ್ಖಾನೆಗಳು ಆಗ್ರಹಿಸುತ್ತಿವೆ. ಈ ಕುರಿತು ಚೋಪ್ರಾ ಅವರನ್ನು ಪ್ರಶ್ನಿಸಿದಾಗ ‘ನಮ್ಮಲ್ಲಿ ಸಕ್ಕರೆ ದಾಸ್ತಾನು ಹೆಚ್ಚಿರುವುದು ನಿಜ... ರಫ್ತಿಗೆ ಅವಕಾಶ ಕಲ್ಪಿಸುವುದನ್ನು ನಾವು ಪರಿಶೀಲಿಸುತ್ತಿದ್ದೇವೆ’ ಎಂದು ಉತ್ತರಿಸಿದ್ದಾರೆ.
ಈ ವಿಚಾರವಾಗಿ ತೀರ್ಮಾನವು ಶೀಘ್ರವೇ ಆಗಬಹುದು ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ. ತೀರ್ಮಾನ ತೆಗೆದುಕೊಳ್ಳಲು ಸಚಿವರ ಸಮಿತಿಯೊಂದು ಮುಂದಿನ ವಾರ ಸಭೆ ಸೇರುವ ಸಾಧ್ಯತೆ ಇದೆ.
ಕಳೆದ ಮಾರುಕಟ್ಟೆ ವರ್ಷದಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿತ್ತು. ಆದರೆ ಆ ವರ್ಷದಲ್ಲಿ ದೇಶದಿಂದ ಒಟ್ಟು 8 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.