ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್‌ಎಂಎ) ಮಾಹಿತಿ ನೀಡಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ. ಅಲ್ಲದೆ,ಇಥೆನಾಲ್ ತಯಾರಿಕೆಗೆ ಕಬ್ಬನ್ನು ಬಳಸುವುದರಿಂದ ಒಟ್ಟಾರೆ ಸಕ್ಕರೆ ಉತ್ಪಾದನೆ 3.31 ಕೋಟಿ ಟನ್‌ಗಳಿಂದ2.6 ಕೋಟಿ ಟನ್‌ಗಳಿಗೆಶೇ 21.5ರಷ್ಟು ಕಡಿಮೆಯಾಗುವ ಅಂದಾಜು ಮಾಡಲಾಗಿದೆ.
ಒಟ್ಟಾರೆ ಸಕ್ಕರೆ ಉತ್ಪಾದನೆಯಲ್ಲಿ ಈ ಎರಡೂ ರಾಜ್ಯಗಳ ಕೊಡುಗೆ ಶೇ 35 ರಿಂದ ಶೇ 40ರಷ್ಟಿದೆ. ಆದರೆ,ಮಳೆ, ಪ್ರವಾಹವನ್ನೂ ಒಳಗೊಂಡು ಹಲವು ಕಾರಣಗಳಿಂದ ಬೆಳೆ ಹಾನಿ ಸಂಭವಿಸಿದೆ.
ಮಹಾರಾಷ್ಟ್ರದಲ್ಲಿ ಉತ್ಪಾದನೆ 1.07 ಕೋಟಿ ಟನ್‌ಗಳಿಂದ 62 ಲಕ್ಷ ಟನ್‌ಗಳಿಗೆ ಶೇ 40ರಷ್ಟು ಇಳಿಕೆಯಾಗಲಿದೆ.ಕರ್ನಾಟಕದಲ್ಲಿ ಉತ್ಪಾದನೆ 44 ಲಕ್ಷದಿಂದ 32 ಲಕ್ಷಕ್ಕೆ ಇಳಿಕೆಯಾಗಲಿದೆ ಎಂದೂ ಹೇಳಿದೆ.
ಕಾರ್ಖಾನೆಗಳು ಶೀಘ್ರವೇ ಕಬ್ಬು ಅರೆಯುವಿಕೆ ಆರಂಭಸಲಿವೆ. ಆ ಬಳಿಕ ಉತ್ಪಾದನೆಯ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಸಂಘ ಹೇಳಿದೆ.
ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ಮೊದಲು ಬಿಡುಗಡೆ ಮಾಡಿದ್ದ ಅಂದಾಜಿನಂತೆ ಉತ್ಪಾದನೆ ಆಗುವುದಿಲ್ಲ ಎಂದಿದೆ.
2018ರಲ್ಲಿ ಕಡಿಮೆ ಮಳೆ ಮತ್ತು 2019ರ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಅತಿಯಾದ ಮಳೆಯಿಂದ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿಸಿದೆ.
ವಿಳಂಬ:ಅತಿಯಾದ ಮಳೆ ಮತ್ತು ಕಬ್ಬಿನ ಕೊರತೆಯಿಂದಾಗಿಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವಿಕೆಯು ಒಂದು ತಿಂಗಳು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇದರಿಂದಲೂ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.
ಇಥೆನಾಲ್: ಪರಿಸರ ಅನುಮತಿ ಬೇಕಿಲ್ಲ
ಹೆಚ್ಚುವರಿ ಸಕ್ಕರೆಯಿಂದ ಇಥೆನಾಲ್ ತಯಾರಿಸಲು ಪರಿಸರ ಇಲಾಖೆಯ ಅನುಮತಿ ಬೇಕಿಲ್ಲ. ಏಕೆಂದರೆ ಅದರಿಂದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇದರಿಂದ ರೈತರು ಮತ್ತು ನಗದು ಬಿಕ್ಕಟ್ಟು ಎದುರಿಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಆಗಲಿದೆ.
ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಮತ್ತು ಹೆಚ್ಚುವರಿ ಸಕ್ಕರೆಯನ್ನು ಇಥೆನಾಲ್ ತಯಾರಿಕೆಗೆ ಬಳಸಲು ಅನುಕೂಲ ಆಗುವಂತೆ, ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆ ಘೋಷಿಸಿದೆ. ಆದರೆ, ₹ 15 ಸಾವಿರ ಕೋಟಿ ಮೊತ್ತದ ಸಾಲ ಯೋಜನೆಯು ಕುಂಟುತ್ತಾ ಸಾಗುತ್ತಿದೆ ಎಂದು ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯೋಜನೆಯಡಿ ಬ್ಯಾಂಕ್‌ಗಳು ಇದುವರೆಗೆ ಕೇವಲ ₹ 800 ಕೋಟಿಯನ್ನು ಮಾತ್ರ ವಿತರಣೆ ಮಾಡಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸದ್ಯ 3 ಲಕ್ಷದಿಂದ 4 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ಇಥೆನಾಲ್‌ಗೆ ಬಳಸಲಾಗುತ್ತಿದೆ. ಯೋಜನೆಯಡಿ 9 ಲಕ್ಷದಿಂದ 10 ಲಕ್ಷ ಟನ್‌ಗಳಷ್ಟು ಬಳಕೆಯಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.