ADVERTISEMENT

ವಾಣಿಜ್ಯ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆ ಕಡ್ಡಾಯ

ಸುಪ್ರೀಂ ಕೋರ್ಟ್‌ನ ತೀರ್ಪು * ಆಗಸ್ಟ್‌ 20ರಿಂದ ಅನ್ವಯ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 14:19 IST
Last Updated 18 ಆಗಸ್ಟ್ 2022, 14:19 IST

ನವದೆಹಲಿ: ಕಂಪನಿಗಳು ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಾಲಯದ ಮೆಟ್ಟಿಲು ಏರುವ ಮೊದಲು ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಕೋರ್ಟ್‌ನ ಈ ತೀರ್ಪು ಮುಂದಿನ ದಿನಗಳಲ್ಲಿ ವಾಣಿಜ್ಯಿಕವಾದ ಎಲ್ಲ ವ್ಯಾಜ್ಯಗಳ ಮೇಲೆ ಪರಿಣಾಮ ಬೀರಲಿದೆ.

ವಾಣಿಜ್ಯಿಕ ನ್ಯಾಯಾಲಯಗಳ ಕಾಯ್ದೆ – 2015ರ ಸೆಕ್ಷನ್‌ 12(ಎ)ಅನ್ನು ಉಲ್ಲಂಘಿಸುವವರು ಸಲ್ಲಿಸುವ ಅರ್ಜಿಗಳು ತಿರಸ್ಕರಿಸಲು ಯೋಗ್ಯ ಎಂದು ಕೋರ್ಟ್ ಹೇಳಿದೆ. ಈ ತೀರ್ಪು ಆಗಸ್ಟ್‌ 20ರಿಂದ ಅನ್ವಯ ಆಗಲಿದೆ.

‘ಸಂಬಂಧಪಟ್ಟ ಎಲ್ಲರಿಗೂ ಈ ವಿಚಾರವು ಗೊತ್ತಾಗಲಿ ಎಂಬ ಕಾರಣಕ್ಕೆ ನಾವು ಹೊಸ ನಿಯಮವನ್ನು ಆಗಸ್ಟ್‌ 20ರಿಂದ ಅನ್ವಯವಾಗುವಂತೆ ಜಾರಿಗೊಳಿಸುತ್ತಿದ್ದೇವೆ’ ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರು ಇದ್ದ ಪೀಠ ಹೇಳಿದೆ.

ADVERTISEMENT

ವಾಣಿಜ್ಯಿಕ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್‌ 12(ಎ) ಅಡಿಯಲ್ಲಿ ಹೇಳಿರುವಂತೆ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೊದಲು ಮಧ್ಯಸ್ಥಿಕೆ ಪ್ರಕ್ರಿಯೆ ನಡೆಸಬೇಕಾಗಿರುವುದು ಕಡ್ಡಾಯ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ ಇದ್ದಲ್ಲಿ ಕೆಳಹಂತದ ನ್ಯಾಯಾಲಯಗಳು ಅರ್ಜಿಯನ್ನು ತಿರಸ್ಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಧ್ಯಸ್ಥಿಕೆಯ ಮಹತ್ವ ಏನು ಎಂಬುದನ್ನು ಈ ತೀರ್ಪಿನಲ್ಲಿ ಕೋರ್ಟ್ ವಿವರಿಸಿದೆ. ‘ವಿಚಾರಣಾ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸುವ ಅಗತ್ಯ ಇತ್ತು. ಅದರಲ್ಲೂ ಮುಖ್ಯವಾಗಿ, ವಾಣಿಜ್ಯಿಕ ವ್ಯಾಜ್ಯಗಳ ಸಂಖ್ಯೆ ಕಡಿಮೆ ಮಾಡಬೇಕಿತ್ತು’ ಎಂದು ಹೇಳಿದೆ.

ತೀರಾ ತುರ್ತಾದ, ಮಧ್ಯಂತರ ಪರಿಹಾರದ ಅಗತ್ಯ ಇಲ್ಲದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ನಡೆಸುವಂತೆ ಸೆಕ್ಷನ್ 12(ಎ) ಹೇಳುತ್ತದೆ ಎಂದು ನ್ಯಾಯಪೀಠ ವಿವರಿಸಿದೆ. ‘ಕೆಲವು ಬಗೆಯ ಅರ್ಜಿಗಳನ್ನು ಮಾತ್ರ ಪ್ರತ್ಯೇಕಿಸಿ, ಅವುಗಳಿಗೆ ಮಾತ್ರ ಮಧ್ಯಸ್ಥಿಕೆ ಕಡ್ಡಾಯ ಎಂದು ಹೇಳಿರುವುದು ಕಾನೂನಿನ ಉದ್ದೇಶ ಈಡೇರಿಕೆಗೆ ಪೂರಕವಾಗಿ ಇದೆ. ನ್ಯಾಯಾಧೀಶರ ಮೇಲಿನ ಹೊರೆ ತಗ್ಗುತ್ತದೆ. ಅವರು ತೀರಾ ತುರ್ತಾಗಿ ಪರಿಹಾರ ಬೇಕಿರುವ ಪ್ರಕರಣಗಳಿಗೆ, ಈಗಾಗಲೇ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳಿಗೆ ಗಮನ ನೀಡಬಹುದು’ ಎಂದು ಪೀಠ ತಿಳಿಸಿದೆ.

ಮಧ್ಯಸ್ಥಿಕೆ ಯಶಸ್ಸು ಕಂಡರೆ ಅದು ವ್ಯಾಜ್ಯವನ್ನು ಇತ್ಯರ್ಥಪಡಿಸಲು ಪರ್ಯಾಯವಾಗಬಹುದು. ಅದರಿಂದ ಎಲ್ಲರಿಗೂ ಅನುಕೂಲವಾಗಬಹುದು ಎಂದು ಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.