ADVERTISEMENT

ಭಾರಿ ಸುಂಕ: ರಫ್ತುದಾರರಿಗೆ ಕೇಂದ್ರದಿಂದ ಶೀಘ್ರ ನೆರವು ಸಾಧ್ಯತೆ

ರಫ್ತು ಉತ್ತೇಜನಾ ಮಿಷನ್ ಅಡಿಯಲ್ಲಿ ನೆರವು ನೀಡಲು ಚಿಂತನೆ

ಪಿಟಿಐ
Published 9 ಆಗಸ್ಟ್ 2025, 16:05 IST
Last Updated 9 ಆಗಸ್ಟ್ 2025, 16:05 IST
India United States trade and American tariffs or Indian Tarriff as two opposing cargo ships as an economic taxation dispute over import and exports concept as a 3D illustration.
India United States trade and American tariffs or Indian Tarriff as two opposing cargo ships as an economic taxation dispute over import and exports concept as a 3D illustration.   

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಸುಂಕದ ಪರಿಣಾಮದಿಂದ ರಫ್ತುದಾರರನ್ನು ರಕ್ಷಿಸಲು ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

₹2,250 ಕೋಟಿ ಮೊತ್ತದ ಪ್ರಸ್ತಾವಿತ ರಫ್ತು ಉತ್ತೇಜನಾ ಮಿಷನ್ ಅಡಿಯಲ್ಲಿ ಕ್ರಮಗಳು ಘೋಷಣೆ ಆಗುವ ನಿರೀಕ್ಷೆ ಇದೆ.

‘ನಾವು ಯಾವ ಬಗೆಯಲ್ಲಿ ನೆರವು ನೀಡಬಹುದು ಎಂಬುದನ್ನು ಅರಿಯಲು ರಫ್ತುದಾರರ ಜೊತೆ ಮಾತುಕತೆಯಲ್ಲಿ ತೊಡಗಿದ್ದೇವೆ. ದೇಶಿ ಬೇಡಿಕೆಯನ್ನು ಇನ್ನಷ್ಟು ಹೆಚ್ಚು ಮಾಡುವುದು ಹೇಗೆ ಎಂಬ ಬಗ್ಗೆಯೂ ಪರಿಶೀಲನೆ ನಡೆದಿದೆ. ಹೊಸ ಮಾರುಕಟ್ಟೆಗಳ ಬಗ್ಗೆ ಹಾಗೂ ಹೊಸ ಉತ್ಪನ್ನಗಳ ಬಗ್ಗೆ ಪರಿಶೀಲನೆ ನಡೆದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಹಾಗೂ ಇ–ವಾಣಿಜ್ಯ ವಲಯದ ರಫ್ತುದಾರರಿಗೆ ಸುಲಭವಾಗಿ ಸಾಲ ಲಭ್ಯವಾಗುವಂತೆ ಮಾಡುವ ಯೋಜನೆಗಳು, ವಿದೇಶಗಳಲ್ಲಿ ಗೋದಾಮು ಹೊಂದಲು ನೆರವು ಒದಗಿಸುವುದು, ಹೊಸ ರಫ್ತು ಅವಕಾಶಗಳನ್ನು ಬಳಸಿಕೊಳ್ಳಲು ನೆರವಾಗುವಂತೆ ಬ್ರ್ಯಾಂಡಿಂಗ್ ಚಟುವಟಿಕೆಗಳಿಗೆ ಸಹಾಯ ಒದಗಿಸುವ ಕ್ರಮಗಳನ್ನು ಈ ಮಿಷನ್ ಒಳಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

₹2,250 ಕೋಟಿ ಮೊತ್ತದ ಈ ಮಿಷನ್ ಆರಂಭಿಸುವ ಘೋಷಣೆಯನ್ನು ಕೇಂದ್ರ ಸರ್ಕಾರವು ಫೆಬ್ರುವರಿಯಲ್ಲಿ ಮಾಡಿದೆ.

ವಿದೇಶ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಈ ಮಿಷನ್‌ ಬಗ್ಗೆ ರಫ್ತು ಉತ್ತೇಜನಾ ಮಂಡಳಿಗಳ ಪ್ರತಿನಿಧಿಗಳಿಗೆ ಹಾಗೂ ಇತರ ಪ್ರಮುಖ ‍ಭಾಗೀದಾರರಿಗೆ ಏಪ್ರಿಲ್‌ ಕೊನೆಯಲ್ಲಿ ಮಾಹಿತಿ ಒದಗಿಸಿದೆ.

ಜಿಎಸ್‌ಟಿ ಮಂಡಳಿಯು ಶೀಘ್ರದಲ್ಲಿಯೇ ಸಭೆ ಸೇರುವ ಸಾಧ್ಯತೆ ಇದ್ದು, ತೆರಿಗೆ ಹಂತಗಳನ್ನು ಸರಳೀಕರಿಸುವ ಬಗ್ಗೆ ಅದು ಸಮಾಲೋಚನೆ ನಡೆಸಲಿದೆ. ಪರಿಹಾರ ಸೆಸ್‌ನ ಭವಿಷ್ಯದ ಬಗ್ಗೆಯೂ ಮಂಡಳಿಯು ಚರ್ಚಿಸಲಿದೆ. ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಇಂಬು ಕೊಡುವಂತಹ ತೀರ್ಮಾನವನ್ನು ಮಂಡಳಿಯು ತೆಗೆದುಕೊಳ್ಳಲಿದೆ ಎಂಬ ನಿರೀಕ್ಷೆ ಇದೆ.

ಕೇಂದ್ರ ವಾಣಿಜ್ಯ ಸಚಿವಾಲಯವು ಈಚೆಗೆ ಕೆಲವು ದಿನಗಳಿಂದ ರಫ್ತುದಾರರ ಪ್ರತಿನಿಧಿಗಳ ಜೊತೆ ಸಭೆ ನಡೆಸುತ್ತಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮಗಳ ಬಗ್ಗೆ ಅರಿಯಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.