ADVERTISEMENT

‘₹ 30 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:00 IST
Last Updated 7 ಜುಲೈ 2019, 19:00 IST
ಅಜಯ್‌
ಅಜಯ್‌   

ನವದೆಹಲಿ: ‘ಬಜೆಟ್‌ನಲ್ಲಿ ಮಂಡಿಸಿರುವ ತೆರಿಗೆ ಪ್ರಸ್ತಾವನೆಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹ 30 ಸಾವಿರ ಕೋಟಿ ವರಮಾನ ಬರಲಿದೆ’ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ತಿಳಿಸಿದ್ದಾರೆ.

‘ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ಹಾಗೂ ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ವಿಧಿಸಿರುವುದರಿಂದ ₹ 30 ಸಾವಿರ ಕೋಟಿ ಬರಲಿದೆ. ಆದರೆ,ಪ್ರಸಕ್ತ ಹಣಕಾಸು ವರ್ಷದಲ್ಲಿ 9 ತಿಂಗಳು ಬಾಕಿ ಇರುವುದರಿಂದ ಸರ್ಕಾರಕ್ಕೆ ₹ 22 ಸಾವಿರ ಕೋಟಿಗಳಷ್ಟೆ ವರಮಾನ ಬರುವ ಅಂದಾಜು ಮಾಡಲಾಗಿದೆ’ ಎಂದಿದ್ದಾರೆ.

₹2 ಕೋಟಿಗಳಿಂದ ₹5 ಕೋಟಿವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದವರಿಗೆ ಶೇ 3ರಷ್ಟು ಮತ್ತು ₹ 5 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ಶೇ 7ರಷ್ಟು ಸರ್ಚಾರ್ಜ್‌ ವಿಧಿಸಲಾಗಿದೆ. ಇದರಿಂದ ₹ 12 ಸಾವಿರ ಕೋಟಿಯಿಂದ ₹ 13 ಸಾವಿರ ಕೋಟಿವರೆಗೂ ಹೆಚ್ಚುವರಿ ವರಮಾನ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ.

ADVERTISEMENT

ವರಮಾನ ನಷ್ಟ: ವಾರ್ಷಿಕ ₹ 400 ಕೋಟಿಯವರೆಗೆ ವಹಿವಾಟು ಮಿತಿ ಹೊಂದಿದ ಕಂಪನಿಗಳನ್ನು ಶೇ 25ರ ಕಾರ್ಪೊರೇಟ್‌ ತೆರಿಗೆ ವ್ಯಾಪ್ತಿಯ ಒಳಗೆ ತರಲಾಗಿದೆ. ಇದರಿಂದ ಸರ್ಕಾರಕ್ಕೆ ₹ 4 ಸಾವಿರ ಕೋಟಿಗಳಷ್ಟು ನಷ್ಟವಾಗಲಿದೆ.

‘ಚಿನ್ನದ ಆಮದು ಮೇಲಿನ ಸುಂಕವನ್ನು ಶೇ 10ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ ₹ 3 ಸಾವಿರ ಕೋಟಿಯಿಂದ ₹ 4 ಸಾವಿರ ಕೋಟಿ ಸಂಗ್ರಹವಾಗಲಿದೆ. ಆದರೆ, ಬೇರೆ ಸರಕುಗಳ ಕಸ್ಟಮ್ಸ್‌ ಸುಂಕ ಇಳಿಕೆ ಮಾಡಿರುವುದರಿಂದ ಈ ವರಮಾನ ಗಳಿಕೆಯು ಅಲ್ಲಿಗೆ ಹೊಂದಾಣಿಕೆ ಆಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.