ಕೃತಿವಾಸನ್
ಬೆಂಗಳೂರು: ಭಾರತದ ಅತಿದೊಡ್ಡ ಐ.ಟಿ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಪ್ರಸಕ್ತ ಆರ್ಥಿಕ ವರ್ಷದಲ್ಲಿ 12 ಸಾವಿರಕ್ಕೂಹೆಚ್ಚು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿರುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಕಂಪನಿಯೂ ತನ್ನ ಕಾರ್ಯವಿಧಾನಗಳಲ್ಲಿ ವ್ಯಾಪಕವಾಗಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಿಕೊಳ್ಳುತ್ತಿರುವುದರಿಂದಲೇ ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮನಿಕಂಟ್ರೋಲ್ ವೆಬ್‌ಸೈಟ್ ಜೊತೆ ಮಾತನಾಡಿರುವ ಟಿಸಿಎಸ್‌ನ ಸಿಇಒ ಹಾಗೂ ಎಂ.ಡಿ ಕೆ. ಕೃತಿವಾಸನ್ ಅವರು, ತಂತ್ರಜ್ಞಾನಗಳ ಬಳಕೆ ಕೃತಕ ಬುದ್ಧಿಮತ್ತೆ ಇಂದು ವ್ಯಾಪಕವಾಗುತ್ತಿದೆ. ಇದು ಉದ್ಯಮದ ಸ್ವರೂಪವನ್ನೇ ಬದಲಿಸದೆ. ಹೀಗಾಗಿ ನಾವು ಇನ್ಮುಂದೆ ಉದ್ಯೋಗಿಗಳಿಂದ ನಮಗೆ ಬೇಕಾಗಿರುವ ಕೌಶಲ್ಯಗಳೇನು? ಅವರ ಸಾಮರ್ಥ್ಯಗಳೇನು ಎಂಬುದನ್ನು ಅರಿತುಕೊಂಡು ಮಾತ್ರ ಕೆಲಸ ಮಾಡಿಸಲಿದ್ದೇವೆ ಎಂದು ಹೇಳಿದ್ದಾರೆ.
ನಾವು ಕೆಲಸ ಮಾಡುತ್ತಿರುವ ವಿಧಾನಗಳು ಬದಲಾಗುತ್ತಿವೆ. ಇದರ ಆಧಾರದ ಮೇಲೆ ಭವಿಷ್ಯ ನಿಂತಿದೆ. ಭವಿಷ್ಯಕ್ಕೆ ನಾವೆಲ್ಲರೂ ಸಿದ್ಧರಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಟಿಸಿಎಸ್ ಕೈಗೊಂಡಿರುವ ಈ ನಿರ್ಧಾರ ದೇಶದ ಇನ್ನೂ ಅನೇಕ ಐಟಿ ಕಂಪನಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಮನಿಕಂಟ್ರೋಲ್ ವರದಿ ಹೇಳಿದೆ.
ಟಿಸಿಎಸ್ ಜಾಗತಿಕವಾಗಿ 6,13,069 ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಅಂದಾಜು 12,261 ಉದ್ಯೋಗಿಗಳನ್ನು ಕಡಿತಗೊಳಿಸಲಿದೆ. ಹಿರಿಯ ಮತ್ತು ಮಧ್ಯಮ ಶ್ರೇಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.