ADVERTISEMENT

ಕುಸಿದು ಬಿದ್ದಿಲ್ಲ ರೂಪಾಯಿ ಮೌಲ್ಯ: ನಿರ್ಮಲಾ

ಪಿಟಿಐ
Published 2 ಆಗಸ್ಟ್ 2022, 16:29 IST
Last Updated 2 ಆಗಸ್ಟ್ 2022, 16:29 IST

ನವದೆಹಲಿ (‍ಪಿಟಿಐ): ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿದುಬಿದ್ದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರೂಪಾಯಿ ಮೌಲ್ಯವು ಸಹಜ ಏರಿಳಿತ ಕಾಣುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ರೂಪಾಯಿ ಮೌಲ್ಯದ ಮೇಲೆ ಆರ್‌ಬಿಐ ನಿರಂತರ ನಿಗಾ ಇರಿಸಿದೆ, ಅಸ್ಥಿರತೆ ಇದ್ದಾಗಲೆಲ್ಲ ಮಧ್ಯಪ್ರವೇಶ ಮಾಡುತ್ತಿದೆ ಎಂದು ನಿರ್ಮಲಾ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

‘ರೂಪಾಯಿ ತನ್ನ ಮೌಲ್ಯವನ್ನು ತಾನಾಗಿಯೇ ಕಂಡುಕೊಳ್ಳುತ್ತದೆ. ಆರ್‌ಬಿಐ ಮಧ್ಯಪ್ರವೇಶ ಮಾಡುವುದು ರೂಪಾಯಿ ಮೌಲ್ಯವನ್ನು ನಿಗದಿ ಮಾಡುವುದಕ್ಕೆ ಅಲ್ಲ. ಆರ್‌ಬಿಐ ಮಧ್ಯಪ್ರವೇಶವು ಅಸ್ಥಿರತೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಬಹಳ ಏರಿಳಿತಗಳನ್ನು ಕಂಡಿದೆ. ಆದರೆ, ಇತರ ದೇಶಗಳ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿಯ ಸಾಧನೆಯು ಉತ್ತಮವಾಗಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ನ ತೀರ್ಮಾನಗಳ ಪರಿಣಾಮವನ್ನು ರೂಪಾಯಿಯು ಇತರ ಕರೆನ್ಸಿಗಳಿಗಿಂತ ಹೆಚ್ಚು ಚೆನ್ನಾಗಿ ತಾಳಿಕೊಂಡಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.

‘ಅಮೆರಿಕದ ಡಾಲರ್ ಹೊರತುಪಡಿಸಿ ಇತರ ದೇಶಗಳ ಕರೆನ್ಸಿಗಳ ಜೊತೆ ರೂಪಾಯಿಯನ್ನು ಹೋಲಿಕೆ ಮಾಡಿದರೆ, ರೂಪಾಯಿ ಮೌಲ್ಯವು ಹೆಚ್ಚಾಗುತ್ತಿರುವುದು ಗೊತ್ತಾಗುತ್ತದೆ. ರೂ‍ಪಾಯಿಯ ಮೌಲ್ಯವು ಕುಸಿದುಬಿದ್ದಿಲ್ಲ ಎಂಬುದನ್ನು ಸದನದ ಸದಸ್ಯರಿಗೆ ತಿಳಿಸಲು ಬಯಸುವೆ’ ಎಂದಿದ್ದಾರೆ.

ವಿದೇಶಿ ಮೀಸಲು ಮೊತ್ತ ಕಡಿಮೆ ಆಗುತ್ತಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಮಲಾ, ‘ಈಗಲೂ ನಮ್ಮಲ್ಲಿ ಸರಿಸುಮಾರು 500 ಬಿಲಿಯನ್ ಡಾಲರ್ (₹ 39 ಲಕ್ಷ ಕೋಟಿ) ಮೀಸಲು ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.