ADVERTISEMENT

ಬ್ರಿಟನ್‌–ಭಾರತ ಎಫ್‌ಟಿಎ: ಸಿದ್ಧ ಉಡುಪು ವಲಯಕ್ಕೆ ಬಲ

ಬ್ರಿಟನ್‌–ಭಾರತ ಎಫ್‌ಟಿಎ: ಚರ್ಮ ಉತ್ಪನ್ನ ರಫ್ತಿಗೂ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:39 IST
Last Updated 7 ಮೇ 2025, 15:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಬ್ರಿಟನ್‌ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಅಲ್ಲಿನ ಮಾರುಕಟ್ಟೆಯಲ್ಲಿ ಭಾರತದ ಸಿದ್ಧಉಡುಪು ಮತ್ತು ಚರ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಗೆ ನೆರವಾಗಲಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ ಹೇಳಿದೆ.

ಅಂತಿಮಗೊಂಡಿರುವ ಪ್ರಸ್ತಾವಿತ ಈ ಒಪ್ಪಂದದ ಅನುಸಾರ ಭಾರತದಿಂದ ರಫ್ತು ಮಾಡುವ ಕೆಲವು ಸರಕುಗಳ ಮೇಲಿನ ಸುಂಕದ ಪ್ರಮಾಣ ಕಡಿಮೆಯಾಗಲಿದೆ. ಮತ್ತೆ ಕೆಲವು ಉತ್ಪನ್ನಗಳಿಗೆ ಸುಂಕ ವಿನಾಯಿತಿ ಸಿಗಲಿದೆ. ಇದರಿಂದ ದೇಶೀಯ ರಫ್ತುದಾರರು ಬ್ರಿಟನ್ ಮಾರುಕಟ್ಟೆಯಲ್ಲಿ ಭದ್ರ ನೆಲೆಯೂರಿರುವ ಬಾಂಗ್ಲಾದೇಶ ಮತ್ತು ವಿಯೆಟ್ನಾಂಗೆ ಸ್ಪರ್ಧಾತ್ಮಕ ಪೈಪೋಟಿ ನೀಡಲು ಸಹಕಾರಿಯಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್‌.ಸಿ. ರಾಲ್ಹಾನ್ ಹೇಳಿದ್ದಾರೆ.

‘ವ್ಯಾಪಾರ ಒಪ್ಪಂದವು ಹೊಸ ರಫ್ತು ಅವಕಾಶಗಳನ್ನು ತೆರೆದಿಡಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ತೆರವುಗೊಳಿಸಲಿದೆ. ದೇಶೀಯ ರಫ್ತುದಾರರು ಬ್ರಿಟನ್‌ ಮಾರುಕಟ್ಟೆಯಲ್ಲಿ ತಳವೂರಲು ನೆರವಾಗಲಿದೆ’ ಎಂದು ಸಿದ್ಧಉಡುಪು ರಫ್ತು ಉತ್ತೇಜನ ಮಂಡಳಿ (ಎಇಪಿಸಿ) ಉಪಾಧ್ಯಕ್ಷ ಎ. ಶಕ್ತಿವೇಲ್‌ ಹೇಳಿದ್ದಾರೆ.

ADVERTISEMENT

‘ಅಲ್ಲದೆ, ದೇಶದ ನೇಕಾರರು, ತಯಾರಕರು ಮತ್ತು ರಫ್ತುದಾರರ ನಡುವಿನ ಸರಪಳಿಯು ಸದೃಢಗೊಳ್ಳಲು ಸಹಕಾರಿಯಾಗಲಿದೆ’ ಎಂದಿದ್ದಾರೆ. 

ದೀರ್ಘಕಾಲದ ಈ ಒಪ್ಪಂದವು ಎರಡು ದೇಶಗಳಲ್ಲಿ ಬಂಡವಾಳ ಆಕರ್ಷಣೆಗೆ ವೇದಿಕೆಯಾಗಲಿದೆ. ಜವಳಿ ವಲಯದ ವ್ಯಾಪಾರ ವಹಿವಾಟಿನ ಬೆಳವಣಿಗೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಿದ್ದಾರೆ.

ದೇಶದಿಂದ ಪ್ರಮುಖವಾಗಿ ನೇಯ್ಗೆ ಮತ್ತು ಹೆಣೆದ ಉಡುಪು, ಪಾದರಕ್ಷೆ, ರತ್ನಗಂಬಳಿ, ಸಮುದ್ರ ಉತ್ಪನ್ನಗಳು ಬ್ರಿಟನ್‌ಗೆ ರವಾನೆಯಾಗುತ್ತವೆ. ಈ ಉತ್ಪನ್ನಗಳಿಗೆ ಶೇ 5ರಿಂದ 9ರಷ್ಟು ಸುಂಕ ವಿಧಿಸುವ ನಿರೀಕ್ಷೆಯಿದೆ. 

ರಫ್ತು ಎಷ್ಟು?:

ಪ್ರಸ್ತುತ ಭಾರತದಿಂದ ಬ್ರಿಟನ್‌ಗೆ ₹6,378 ಕೋಟಿ ಮೌಲ್ಯದ ನೇಯ್ಗೆ ಉಡುಪುಗಳು ರಫ್ತಾಗುತ್ತವೆ. 2027ರ ವೇಳೆಗೆ ₹13,500 ಕೋಟಿ ಮೌಲ್ಯದ ಸರಕುಗಳ ರಫ್ತಿಗೆ ನಿರ್ಧರಿಸಲಾಗಿದೆ. 

ಅಲ್ಲದೆ ₹2,363 ಕೋಟಿ ಮೌಲ್ಯದ ಪಾದರಕ್ಷೆಗಳು, ₹8,64 ಕೋಟಿ ಮೌಲ್ಯದ ರತ್ನಗಂಬಳಿಗಳು, ₹906 ಕೋಟಿ ಮೌಲ್ಯದ ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. 

₹2,422 ಕೋಟಿ ಮೌಲ್ಯದ ವಾಹನ ಬಿಡಿಭಾಗಗಳು ಮತ್ತು ವಾಹನಗಳು ರಫ್ತಾಗುತ್ತವೆ. ₹864 ಕೋಟಿ ಮೌಲ್ಯದ ಅಲ್ಯೂಮಿನಿಯಂ ಮತ್ತು ಅದರ ಉತ್ಪನ್ನಗಳು, ₹35,58 ಕೋಟಿ ಮೌಲ್ಯದ ಸಾವಯವ ರಾಸಾಯನಿಕಗಳು ರಫ್ತಾಗುತ್ತವೆ.

ವಜ್ರ ಬೆಳ್ಳಿಗೆ ಸುಂಕ ವಿನಾಯಿತಿ ಇಲ್ಲ

ಬ್ರಿಟನ್‌ ಜೊತೆಗಿನ ಒಪ್ಪಂದದಲ್ಲಿ ವಜ್ರ ಬೆಳ್ಳಿ ಸ್ಮಾರ್ಟ್‌ಫೋನ್‌ ಟೆಲಿಮಿಷನ್‌ ಕ್ಯಾಮೆರಾ ಟ್ಯೂಬ್‌ ಪ್ಲಾಸ್ಟಿಕ್‌ ವೈರ್‌ಲೆಸ್‌ ಸಂವಹನ ಉಪಕರಣ ಆಫ್ಟಿಕಲ್‌ ಪೈಬರ್‌ನಂತಹ ಸೂಕ್ಷ್ಮ ಕೈಗಾರಿಕಾ ಸರಕುಗಳಿಗೆ ಭಾರತವು ಯಾವುದೇ ಸುಂಕ ವಿನಾಯಿತಿ ನೀಡುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ರಿಟನ್‌ನಿಂದ ಆಮದಾಗುವ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗುತ್ತಿದೆ. ಇದಕ್ಕೆ ಕೋಟಾ ಮಿತಿ ಇರಲಿದೆ. ಅಲ್ಲದೆ ವಿದ್ಯುತ್‌ಚಾಲಿತ ವಾಹನಗಳಿಗೂ ಈ ಷರತ್ತು ಅನ್ವಯಿಸಲಿದೆ ಎಂದು ಹೇಳಿದ್ದಾರೆ.

ಇಂದು ರಫ್ತುದಾರರ ಸಭೆ

ಬ್ರಿಟನ್‌ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರು ಮೇ 8ರಂದು ರಫ್ತು ಉತ್ತೇಜನ ಮಂಡಳಿಯ ಪ್ರತಿನಿಧಿಗಳ ಜೊತೆಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದಿಂದ ರಫ್ತಾಗುವ ಉಡುಪುಗಳು ಸಂಸ್ಕರಿಸಿದ ಸೀಗಡಿ ಆಭರಣ ಮತ್ತು ಹರಳುಗಳಿಗೆ ಸುಂಕ ವಿನಾಯಿತಿ ಲಭಿಸುವ ಸಾಧ್ಯತೆಯಿದೆ. 2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರ ಮೌಲ್ಯವು ₹10.16 ಲಕ್ಷ ಕೋಟಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಭಾರತವು ಜಾಗತಿಕ ಮಟ್ಟದಲ್ಲಿ ಐದನೇ ಅತಿದೊಡ್ಡ ಆರ್ಥಕತೆಯಾಗಿದ್ದರೆ ಬ್ರಿಟನ್‌ ಆರನೇ ಅತಿದೊಡ್ಡ ಆರ್ಥಿಕತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.