ADVERTISEMENT

ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿರುವ ₹78,213 ಕೋಟಿಗೆ ವಾರಸುದಾರರೇ ಇಲ್ಲ!

ಪಿಟಿಐ
Published 31 ಮೇ 2024, 0:14 IST
Last Updated 31 ಮೇ 2024, 0:14 IST
   

ಮುಂಬೈ: ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯಕ್ಕೆ ದೇಶದ ಸರ್ಕಾರಿ ಮತ್ತು ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದ ಠೇವಣಿಯು ಶೇ 26ರಷ್ಟು ಏರಿಕೆಯಾಗಿದ್ದು, ₹78,213 ಕೋಟಿಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

2023ರ ಮಾರ್ಚ್‌ ಅಂತ್ಯಕ್ಕೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯಲ್ಲಿನ (ಡಿಇಎ) ಮೊತ್ತವು ₹62,225 ಕೋಟಿ ಇತ್ತು ಎಂದು ಗುರುವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ. 

ಸಹಕಾರ ಬ್ಯಾಂಕ್‌ಗಳು ಸೇರಿ ಎಲ್ಲಾ ಬ್ಯಾಂಕ್‌ಗಳಲ್ಲಿ ಇರುವ ಈ ಖಾತೆಗಳಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ವಹಿವಾಟು ನಡೆದಿಲ್ಲ ಎಂದು ಹೇಳಿದೆ.  

ADVERTISEMENT

ಆರ್‌ಬಿಐ ಮಾರ್ಗಸೂಚಿ ಏನು?

ವಾರಸುದಾರರು ಇಲ್ಲದ ಠೇವಣಿಗಳ ಪ್ರಮಾಣ ತಗ್ಗಿಸಲು ಮತ್ತು ಅರ್ಹ ಹಕ್ಕುದಾರರಿಗೆ ಠೇವಣಿ ಮರಳಿಸಲು ಆರ್‌ಬಿಐ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಪ್ರಸಕ್ತ ವರ್ಷದ ಆರಂಭದಲ್ಲಿಯೇ ಸಮಗ್ರ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. 

ಏಪ್ರಿಲ್‌ 1ರಂದು ಮತ್ತೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ವಾಣಿಜ್ಯ ಬ್ಯಾಂಕ್‌ಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಒಳಗೊಂಡಂತೆ) ಹಾಗೂ ಎಲ್ಲಾ ಸಹಕಾರ ಬ್ಯಾಂಕ್‌ಗಳಿಗೆ ಇದು ಅನ್ವಯಿಸಲಿದೆ.

ವಹಿವಾಟು ನಡೆಸದ ಖಾತೆಗಳು ಮತ್ತು ವಾರಸುದಾರರಿಲ್ಲದ ನಿಶ್ಚಿತ ಠೇವಣಿಗಳನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿದೆ.

ನಿಷ್ಕ್ರಿಯ ಖಾತೆಗಳ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು. ಇವುಗಳ ಮೂಲಕ ವಂಚನೆ ನಡೆಯದಂತೆ ಮುಂಜಾಗ್ರತೆವಹಿಸಬೇಕು. ಠೇವಣಿ ಬಗ್ಗೆ ಹಕ್ಕುದಾರರು ಸಲ್ಲಿಸುವ ದೂರುಗಳ ಇತ್ಯರ್ಥಕ್ಕೆ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕಿದೆ ಎಂದು ನಿರ್ದೇಶನ ನೀಡಿದೆ. 

ಇಂತಹ ಖಾತೆಗಳನ್ನು ಮರು ಸಕ್ರಿಯಗೊಳಿಸುವಿಕೆ, ಕ್ಲೈಮ್‌ಗಳ ಇತ್ಯರ್ಥ ಅಥವಾ ಅರ್ಹ ಹಕ್ಕುದಾರರು ಅಥವಾ ಉತ್ತರಾಧಿಕಾರಿಗಳು, ಅರ್ಹ ಖಾತೆದಾರರನ್ನು ಪತ್ತೆ ಹಚ್ಚಲು ಕ್ರಮವಹಿಸಬೇಕಿದೆ ಎಂದು ಸೂಚಿಸಿದೆ.

ಆರ್‌ಬಿಐ ಸೂಚಿಸಿರುವ ಈ ವಿಧಾನಗಳನ್ನು ಬ್ಯಾಂಕ್‌ಗಳು ಅನುಸರಿಸಿದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಾರಸುದಾರರಿಲ್ಲದ ಠೇವಣಿಗಳ ಪ್ರಮಾಣ ತಗ್ಗಲಿದೆ. ಜೊತೆಗೆ, ಅರ್ಹ ಹಕ್ಕುದಾರರಿಗೆ ಠೇವಣಿ ಮೊತ್ತವು ದೊರೆಯಲಿದೆ. 

ಬ್ಯಾಂಕ್‌ಗಳಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡಿರುವ ಠೇವಣಿಗಳನ್ನು ಹುಡುಕಿ, ಹಿಂದಕ್ಕೆ ಪಡೆದುಕೊಳ್ಳಲು ನೆರವು ನೀಡುವ ಕೇಂದ್ರೀಕೃತ ಪೋರ್ಟಲ್‌ (ಯುಡಿಜಿಎಎಂ) ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.