ನವದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಸಮರ ತೀವ್ರಗೊಳ್ಳುತ್ತಿರುವ ಪರಿಣಾಮವಾಗಿ ಭಾರತದ ರಫ್ತುದಾರರಿಗೆ ಪ್ರಯೋಜನವಾಗುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಈ ಸಮರದಿಂದ ಅಮೆರಿಕದ ಮಾರುಕಟ್ಟೆಗೆ ಭಾರತದ ಸರಕುಗಳ ರಫ್ತು ಹೆಚ್ಚಾಗಲಿದ್ದು, ಭಾರತೀಯ ರಫ್ತುದಾರರಿಗೆ ಲಾಭವಾಗಬಹುದು ಎಂದು ಅವರು ಹೇಳಿದ್ದಾರೆ.
ನವೆಂಬರ್ 1ರಿಂದ ಜಾರಿಗೆ ಬರುವಂತೆ ಚೀನಾದ ಸರಕುಗಳ ಆಮದಿನ ಮೇಲೆ ಅಮೆರಿಕ ಹೆಚ್ಚುವರಿಯಾಗಿ ಶೇ 100ರಷ್ಟು ಸುಂಕ ವಿಧಿಸಿದೆ. ಇದೀಗ ಒಟ್ಟು ಸುಂಕ ಶೇ 130ರಷ್ಟಾಗಿದೆ. ಪ್ರಸ್ತುತ ಭಾರತದ ಸರಕುಗಳ ಆಮದಿನ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸುತ್ತಿದೆ.
‘ಚೀನಾದ ಮೇಲೆ ಅಮೆರಿಕ ವಿಧಿಸಿರುವ ಅಧಿಕ ಸುಂಕದಿಂದ ಭಾರತದ ಸರಕುಗಳಿಗೆ ಬೇಡಿಕೆ ಬರಲಿದೆ. ಈ ಸಮರದಿಂದ ನಾವು ಗಳಿಕೆ ಕಾಣುವ ನಿರೀಕ್ಷೆ ಇದೆ’ ಎಂದು ಭಾರತೀಯ ರಫ್ತುದಾರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಲ್ಹಾನ್ ಹೇಳಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಅಮೆರಿಕಕ್ಕೆ ಭಾರತದಿಂದ ₹7.62 ಲಕ್ಷ ಕೋಟಿಯಷ್ಟು ಮೌಲ್ಯದ ಸರಕುಗಳು ರಫ್ತಾಗಿದ್ದವು.
ಚೀನಾದ ಸರಕುಗಳ ಮೇಲೆ ವಿಧಿಸಿರುವ ಶೇ 100ರಷ್ಟು ಹೆಚ್ಚುವರಿ ಸುಂಕವು ಭಾರತದಿಂದ ಅಮೆರಿಕಕ್ಕೆ ಅಗಾಧ ಪ್ರಮಾಣದಲ್ಲಿ ಸರಕುಗಳನ್ನು ರಫ್ತು ಮಾಡುವ ಅವಕಾಶ ಒದಗಿಸಲಿದೆ ಎಂದು ಜವಳಿ ವಲಯದ ರಫ್ತುದಾರರೊಬ್ಬರು ಹೇಳಿದ್ದಾರೆ.
ಈ ಸುಂಕ ಹೆಚ್ಚಳದ ಪರಿಣಾಮ ಚೀನಾದ ಸರಕುಗಳ ಬೆಲೆಯು ಅಮೆರಿಕದಲ್ಲಿ ಹೆಚ್ಚಳವಾಗಲಿದೆ. ಇದರಿಂದ ಸ್ಪರ್ಧಾತ್ಮಕತೆ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾದ ನಡುವೆ ನಡೆಯುತ್ತಿರುವ ವ್ಯಾಪಾರ ಸಮರವು, ಜಾಗತಿಕ ಮಾರುಕಟ್ಟೆಗಳಲ್ಲಿ ವಿದ್ಯುತ್ ಚಾಲಿತ ವಾಹನ, ಪವನ ವಿದ್ಯುತ್ ಉತ್ಪಾದನಾ ಯಂತ್ರ, ಸೆಮಿಕಂಡಕ್ಟರ್‌ನ ಬಿಡಿ ಭಾಗಗಳ ಬೆಲೆ ಹೆಚ್ಚಳ ಮಾಡಲಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಹೇಳಿದೆ.
ಚೀನಾದ ಎಲೆಕ್ಟ್ರಾನಿಕ್ಸ್, ಜವಳಿ, ಪಾದರಕ್ಷೆ, ಸೌರ ಫಲಕಗಳನ್ನು ಅಮೆರಿಕ ಹೆಚ್ಚಾಗಿ ಅವಲಂಬಿಸಿದೆ ಎಂದು ಹೇಳಿದೆ.
ಸತತ ನಾಲ್ಕು ಆರ್ಥಿಕ ವರ್ಷದಿಂದ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಉಳಿದಿದೆ. 2024–25ರಲ್ಲಿ ದ್ವಿಪಕ್ಷೀಯ ವ್ಯಾಪಾರ ಮೌಲ್ಯ ₹11.69 ಲಕ್ಷ ಕೋಟಿಯಾಗಿದೆ. ದೇಶದ ಒಟ್ಟು ಸರಕುಗಳ ರಫ್ತಿನಲ್ಲಿ ಅಮೆರಿಕದ ಪಾಲು ಶೇ 18ರಷ್ಟಿದೆ. ಆಮದು ಶೇ 6ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.