ADVERTISEMENT

ಭಾರತದಿಂದ ಅಮೆರಿಕ ಪ್ರವೇಶಿಸುವ ಸರಕುಗಳ ಮೇಲೆ ಇಂದಿನಿಂದ ಶೇ 10ರಷ್ಟು ಸುಂಕ ಜಾರಿ

ಪಿಟಿಐ
Published 23 ಫೆಬ್ರುವರಿ 2026, 19:41 IST
Last Updated 23 ಫೆಬ್ರುವರಿ 2026, 19:41 IST
   

ನವದೆಹಲಿ: ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಶೇ 10ರಷ್ಟು ಹೆಚ್ಚುವರಿ ಸುಂಕವು ಮಂಗಳವಾರದಿಂದ ಜಾರಿಗೆ ಬರಲಿದೆ. ಈ ಆದೇಶವು 150 ದಿನಗಳವರೆಗೆ ಜಾರಿಯಲ್ಲಿ ಇರಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಫೆಬ್ರುವರಿ 24ರಿಂದ ಎಲ್ಲ ದೇಶಗಳಿಂದ ಅಮೆರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಶೇ 15ರಷ್ಟು ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಆದರೆ, ಇದರ ಅಧಿಕೃತ ಆದೇಶ ಇದುವರೆಗೆ ಜಾರಿ ಆಗಿಲ್ಲ. ಇದು ವರ್ತಕ ಸಮುದಾಯದಲ್ಲಿ ಅನಿಶ್ಚಿತತೆ ಉಂಟು ಮಾಡಿದೆ ಎಂದು ರಫ್ತುದಾರರು ಹೇಳಿದ್ದಾರೆ.

ಅಮೆರಿಕದ ಸುಪ್ರೀಂ ಕೋರ್ಟ್‌, ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕಕ್ಕೆ ಪ್ರವೇಶಿಸುವ ಸರಕುಗಳ ಮೇಲೆ ಈ ಹಿಂದೆ ವಿಧಿಸಿದ್ದ ಪ್ರತಿಸುಂಕವನ್ನು ಅನೂರ್ಜಿತಗೊಳಿಸಿದೆ. ತೀರ್ಪಿನ ಬಳಿಕ ಟ್ರಂಪ್ ಅವರು ಎಲ್ಲ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಶೇ 10ರಷ್ಟು ಸುಂಕ ವಿಧಿಸಿದ್ದರು. ಆದರೆ, ಈ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಸುಂಕವನ್ನು ಶೇ 15ಕ್ಕೆ ಹೆಚ್ಚಳ ಮಾಡಿದ್ದಾರೆ.

ADVERTISEMENT

150 ದಿನಗಳ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಈ ಸುಂಕದ ಬಗ್ಗೆಯೂ ಗೊಂದಲವಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಪ್ರಧಾನ ನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.‌

‘ಈ ಸುಂಕದ ನಾಟಕಕ್ಕೆ ಈಗಲೇ ತೆರೆ ಎಳೆಯುವ ಅಗತ್ಯವಿದೆ’ ಎಂದು ಟೆಕ್ನೋಕ್ರಾಫ್ಟ್ ಇಂಡಸ್ಟ್ರೀಸ್‌ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷ ಶರದ್ ಕುಮಾರ್ ಸರಾಫ್‌ ಹೇಳಿದ್ದಾರೆ. ಭಾರತಕ್ಕೆ ಅಮೆರಿಕವು ಪ್ರಮುಖ ಮಾರುಕಟ್ಟೆಯಾಗಿದ್ದು, ಸುಂಕದ ಮೇಲಿನ ಅನಿಶ್ಚಿತತೆಯು ವ್ಯವಹಾರದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.