ADVERTISEMENT

ವಾಲ್ಡ್‌: ಕ್ರಿಪ್ಟೊ ಆಧಾರಿತ ಸೇವೆ ಅಮಾನತು- ಗ್ರಾಹಕರಿಗೆ ಶಾಕ್!

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 14:31 IST
Last Updated 7 ಜುಲೈ 2022, 14:31 IST
   

ಬೆಂಗಳೂರು: ಕ್ರಿಪ್ಟೊ ಕರೆನ್ಸಿಗಳನ್ನು ಠೇವಣಿ ರೂಪದಲ್ಲಿ ಸಂಗ್ರಹಿಸುವ, ಕ್ರಿಪ್ಟೊ ಕರೆನ್ಸಿಗಳ ಆಧಾರದಲ್ಲಿ ಸಾಲ ಕೊಡುವ ವಾಲ್ಡ್ ವೇದಿಕೆಯು ತನ್ನ ಹಲವು ಸೇವೆಗಳನ್ನು ಅಮಾನತು ಮಾಡಿದೆ.

‘ಠೇವಣಿ ಹಿಂದಕ್ಕೆ ಪಡೆಯುವುದು, ಕ್ರಿಪ್ಟೊ ವಹಿವಾಟು ಮತ್ತು ಠೇವಣಿ ಸ್ವೀಕರಿಸುವ ಸೇವೆಗಳನ್ನು ನಾವು ಅಮಾನತಿನಲ್ಲಿ ಇರಿಸುವ ಕಷ್ಟದ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಕಂಪನಿಯು ತನ್ನ ಬ್ಲಾಗ್‌ ಮೂಲಕ ತಿಳಿಸಿದೆ. ‘ಹೊಸ ಕೋರಿಕೆಯನ್ನು ಸ್ವೀಕರಿಸಲು ನಮ್ಮಿಂದ ಆಗುವುದಿಲ್ಲ ಎಂಬುದನ್ನು ಗ್ರಾಹಕರು ಅರ್ಥ ಮಾಡಿಕೊಳ್ಳಬೇಕು ಎಂದು ನಾವು ಕೋರುತ್ತೇವೆ’ ಎಂದು ಜುಲೈ 4ರಂದು ಪ್ರಕಟಿಸಿರುವ ಬರಹದಲ್ಲಿ ಕಂಪನಿ ಹೇಳಿದೆ.

ಮುಂದೆ ಏನಾಗುತ್ತದೆ ಎಂಬುದನ್ನು ಸೂಕ್ತ ಸಂದರ್ಭದಲ್ಲಿ ತಿಳಿಸಲಾಗುವುದು. ಗ್ರಾಹಕರು ತಾಳ್ಮೆಯಿಂದ ಇರಬೇಕು ಎಂದು ಬರಹವು ಹೇಳಿದೆ.

ADVERTISEMENT

ವಾಲ್ಡ್ ತೀರ್ಮಾನದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಆಕ್ರೋಶ ಹೊರಹಾಕಿದ್ದಾರೆ. ‘ಹಿಂಪಡೆಯುವುದನ್ನು ಅವರು ಹೇಗೆ ನಿರ್ಬಂಧಿಸಲು ಸಾಧ್ಯ? ನನ್ನ ಅಷ್ಟೂ ಹೂಡಿಕೆಗಳು ಅಲ್ಲಿ ಸಿಲುಕಿಕೊಂಡಂತೆ ಆಗಿವೆಯೇ?’ ಎಂದು ತೇಜಸ್ ಎನ್ನುವವರು ಟ್ವಿಟರ್ ಮೂಲಕ ಅಳಲು ತೋಡಿಕೊಂಡಿದ್ದಾರೆ. ಇನ್ನು ಕೆಲವು ಟ್ವಿಟರ್ ಬಳಕೆದಾರರು, ಯೂಟ್ಯೂಬ್‌ ವಿಡಿಯೊ ಮೂಲಕ ವಾಲ್ಡ್‌ನಲ್ಲಿ ಹೂಡಿಕೆ ಮಾಡುವುದನ್ನು ಉತ್ತೇಜಿಸುತ್ತಿದ್ದ ಕೆಲವರ ಹೆಸರು ಉಲ್ಲೇಖಿಸಿ ತಮ್ಮ ಕೋಪ ತೋರಿಸಿದ್ದಾರೆ.

‘ನಾವು ಹಣಕಾಸಿನ ಸವಾಲು ಎದುರಿಸುತ್ತಿದ್ದೇವೆ. ಮಾರುಕಟ್ಟೆ ಅಸ್ಥಿರವಾಗಿರುವುದು, ನಮ್ಮ ವಾಣಿಜ್ಯ ಪಾಲುದಾರರ ಆರ್ಥಿಕ ಸಂಕಷ್ಟಗಳು ನಮ್ಮ ಮೇಲೆಯೂ ಪರಿಣಾಮ ಬೀರಿರುವುದು, ಜೂನ್‌ 12ರ ನಂತರದಲ್ಲಿ ಗ್ರಾಹಕರು ದಾಖಲೆಯ 197.7 ಮಿಲಿಯನ್ ಡಾಲರ್‌ (ಅಂದಾಜು ₹1,564 ಕೋಟಿ) ಹಿಂದಕ್ಕೆ ಪಡೆದಿರುವುದು ಕೂಡ ನಮ್ಮ ಹಣಕಾಸಿನ ಸವಾಲುಗಳಿಗೆ ಕಾರಣ’ ಎಂದು ವಾಲ್ಡ್‌ ಹೇಳಿದೆ.

‘ದೇಶದಲ್ಲಿ ಕ್ರಿಪ್ಟೊಕರೆನ್ಸಿಗಳಿಗೆ ನಿಯಂತ್ರಣ ಪ್ರಾಧಿಕಾರ ಅಥವಾ ವ್ಯವಸ್ಥೆ ಇಲ್ಲ. ಕ್ರಿಪ್ಟೊ ವೇದಿಕೆಗಳಲ್ಲಿ ಠೇವಣಿ ರೂಪದಲ್ಲಿ ಇರಿಸಿದ್ದ ಹಣ ವಾಪಸ್ ಸಿಗದಿದ್ದರೆ, ವಿಮೆ ಸೌಲಭ್ಯ ಇಲ್ಲ. ಕ್ರಿಪ್ಟೊ ಕರೆನ್ಸಿಗಳಲ್ಲಿನ ಹೂಡಿಕೆ ಒಳ್ಳೆಯದಲ್ಲ ಎಂದು ಆರ್‌ಬಿಐ ಗವರ್ನರ್ ಮತ್ತೆ ಮತ್ತೆ ಹೇಳಿದ್ದಾರೆ. ಕೇಂದ್ರ ಸರ್ಕಾರವೂ ಇದನ್ನು ಹೇಳಿದೆ. ಹೀಗಿದ್ದರೂ ಅಲ್ಲಿ ಹಣ ಹೂಡಿಕೆ ಮಾಡಿದರೆ ಯಾರು ಏನು ಮಾಡಲು ಸಾಧ್ಯ’ ಎಂದು ಚಾರ್ಟರ್ಡ್‌ ಅಕೌಂಟೆಂಟ್ ಕುಮಾರ್ ಪ್ರಸಾದ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.