ಬೆಂಗಳೂರು: ಓಪನ್‌ಸಿಗ್ನಲ್‌ನ 4ಜಿ ಸಂಪರ್ಕ ಜಾಲ ಕುರಿತ ವರದಿ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ವೊಡೊಫೋನ್ ಐಡಿಯಾ ಕಂಪನಿಯ 4ಜಿ ನೆಟ್‌ವರ್ಕ್ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.
ಸ್ಮಾರ್ಟ್‌ಫೋನ್ ಬಳಕೆದಾರರ 4ಜಿ ತಂತ್ರಜ್ಞಾನ ಬಳಕೆಯ ಅನುಭವ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಕಂಪನಿಯ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್‌ನ ಮುಖ್ಯಸ್ಥ ಆನಂದ್ ದಾನಿ ಅವರು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ದೂರಸಂಪರ್ಕ ಕ್ಷೇತ್ರದಲ್ಲಿ ಗ್ರಾಹಕರು ಪಡೆಯುವ 4ಜಿ ತಂತ್ರಜ್ಞಾನ ಸೇವೆಯ ಅನುಭವಕ್ಕೆ ಸಂಬಂಧಿಸಿದಂತೆ ವೊಡೊಫೋನ್ ಐಡಿಯಾ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಎಲ್ಲಾ ಆರು ವಿಭಾಗಗಳಾದ 4ಜಿ ಡೌನ್‌ಲೋಡ್, 4ಜಿ ಅಪ್‌ಲೋಡ್, 4ಜಿ ವಿಡಿಯೊ, 4ಜಿ ಲೈವ್ ವಿಡಿಯೊ, 4ಜಿ ಗೇಮ್ ಮತ್ತು 4ಜಿ ಧ್ವನಿ ಅಪ್ಲಿಕೇಷನ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ ಎಂದು ವಿವರಿಸಿದರು.
ದೇಶದಲ್ಲಿ ವೊಡೊಫೋನ್ ಐಡಿಯಾದ 4ಜಿ ಬಳಕೆದಾರರು ಕೇವಲ 4ಜಿ ಇಂಟರ್‌ನೆಟ್ ವೇಗವನ್ನಷ್ಟೇ ಆನಂದಿಸುವುದಿಲ್ಲ. ಲೈವ್ ಮತ್ತು ಆನ್ ಡಿಮ್ಯಾಂಡ್ ವಿಡಿಯೊಗಳನ್ನು ಸ್ಟ್ರೀಮಿಂಗ್ ಮಾಡುವಾಗ, ಒಬ್ಬರಿಗಿಂತ ಹೆಚ್ಚಿನ ಜನರು ಮೊಬೈಲ್ ಆಟ ಆಡುವಾಗ ಮತ್ತು ಮೊಬೈಲ್ ಧ್ವನಿ ಅಪ್ಲಿಕೇಷನ್‌ಗಳಲ್ಲಿ ಓವರ್-ದಿ-ಟಾಪ್ (ಒಟಿಟಿ) ಧ್ವನಿ ಸೇವೆ ಬಳಸುವಾಗ ಉತ್ತಮ ಗುಣಮಟ್ಟದ ಅನುಭವ ಪಡೆಯುತ್ತಾರೆ ಎಂದರು.
‘ಕರ್ನಾಟಕದಲ್ಲಿ ವೊಡೊಫೋನ್ ಐಡಿಯಾ ಕಂಪನಿಯು ಅತ್ಯುತ್ತಮ 4ಜಿ ಸಂಪರ್ಕ ಜಾಲದ ಕಾರ್ಯಕ್ಷಮತೆಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ. ರಾಜ್ಯದಲ್ಲಿ ಮತ್ತಷ್ಟು ನೆಟ್‌ವರ್ಕ್ ಬಲಪಡಿಸುವಿಕೆ ಮತ್ತು ಗ್ರಾಹಕರಿಗೆ ತಡೆರಹಿತ ಸಂಪರ್ಕ ನೀಡುವಲ್ಲಿ ಕಂಪನಿಯು ನಿರಂತರವಾಗಿ ಮಾಡಿದ ಹೂಡಿಕೆಗೆ ದೊರೆತ ಗೆಲುವು ಇದಾಗಿದೆ. ದೂರಸಂಪರ್ಕ ಕ್ಷೇತ್ರದಲ್ಲಿ ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ಒದಗಿಸಲು ಕಂಪನಿ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಈ ಪ್ರಯತ್ನದ ಭಾಗವಾಗಿ ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸಲು 2100 MHz ಮತ್ತು 1800 MHz ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಂ ಅನ್ನು ಮೇಲ್ದರ್ಜೆಗೇರಿಸಲು ಕಂಪನಿಯು ಮುಂದಾಗಿದೆ. ತನ್ನ 4ಜಿ ಸಾಮರ್ಥ್ಯವನ್ನು 5,300ಕ್ಕೂ ಹೆಚ್ಚು ಸ್ಥಳಗಳಿಗೆ ವಿಸ್ತರಿಸಿದೆ. 30 ಜಿಲ್ಲೆಗಳು ಮತ್ತು 600ಕ್ಕೂ ಹೆಚ್ಚು ಪಟ್ಟಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯ ದೊರೆಯಲಿದೆ ಎಂದರು.
30 ಜಿಲ್ಲೆಯ 2,200ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಲ್900 MHz ಸೌಲಭ್ಯ ಕಲ್ಪಿಸಲಾಗಿದೆ. 1,500ಕ್ಕೂ ಹೆಚ್ಚು ಪಟ್ಟಣಗಳಲ್ಲಿ ಒಳಾಂಗಣ ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಲಾಗಿದೆ. ರಾಜ್ಯದಾದ್ಯಂತ ನೆಟ್‌ವರ್ಕ್ ವ್ಯಾಪ್ತಿಯನ್ನು ಬಲಪಡಿಸಲು 300ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.