
ಅಮೆರಿಕ-ಭಾರತ
(ಐಸ್ಟೋಕ್ ಸಾಂದರ್ಭಿಕ ಚಿತ್ರ)
ನವದೆಹಲಿ: ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟು ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸುವ ಹಂತವನ್ನು ಅಮೆರಿಕ ಮತ್ತು ಭಾರತ ತಲುಪಿವೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಸೋಮವಾರ ತಿಳಿಸಿದ್ದಾರೆ.
ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ರಿಕ್ ಸ್ವಿಟ್ಜರ್ ಅವರು ವ್ಯಾಪಾರ ಮಾತುಕತೆಗಾಗಿ ಕಳೆದ ವಾರ ಭಾರತಕ್ಕೆ ಬಂದಿದ್ದರು. ‘ವ್ಯಾಪಾರ ಒಪ್ಪಂದದ ಚೌಕಟ್ಟಿನ ವಿಚಾರವಾಗಿ ನಾವು ಬಹಳ ಮುಂದೆ ಬಂದಿದ್ದೇವೆ. ಅದು ಅಲ್ಪಾವಧಿಯಲ್ಲೇ ಸಾಧ್ಯವಾಗಬಹುದು. ಆದರೆ ಅದಕ್ಕೆ ಸಮಯಮಿತಿ ವಿಧಿಸಲು ನಾನು ಬಯಸುವುದಿಲ್ಲ’ ಎಂದು ಅಗರ್ವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾತುಕತೆ ಪೂರ್ಣಗೊಂಡು, ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದವೊಂದು ಜಾರಿಗೆ ಬರುವುದನ್ನು ಭಾರತದ ರಫ್ತುದಾರರು ಕಾತರದಿಂದ ಕಾಯುತ್ತಿದ್ದಾರೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿರುವುದರಿಂದಾಗಿ ರಫ್ತು ವಲಯಕ್ಕೆ ತೊಂದರೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.