ADVERTISEMENT

ಹವಾಮಾನ ವೈಪರೀತ್ಯ | ಕಬ್ಬು ಇಳುವರಿ ಕುಂಠಿತ: ಉತ್ಪಾದನೆ ಇಳಿಕೆ ಸಾಧ್ಯತೆ

ರಾಯಿಟರ್ಸ್
Published 23 ಡಿಸೆಂಬರ್ 2024, 15:45 IST
Last Updated 23 ಡಿಸೆಂಬರ್ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಕಳೆದ ವರ್ಷ ಕಾಡಿದ ಬರಗಾಲ ಹಾಗೂ ಈ ಬಾರಿ ಸುರಿದ ವಿಪರೀತ ಮಳೆಯಿಂದಾಗಿ ದೇಶದಲ್ಲಿ ಕಬ್ಬಿನ ಇಳುವರಿ ಕುಂಠಿತವಾಗಲಿದೆ. ಇದರಿಂದ ದೇಶದ ವಾರ್ಷಿಕ ಬಳಕೆ ಪ್ರಮಾಣಕ್ಕಿಂತಲೂ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದ್ದು, ಎಂಟು ವರ್ಷದ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ ಎಂದು ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಹೇಳಿದ್ದಾರೆ.

ಭಾರತವು ಸಕ್ಕರೆ ಉತ್ಪಾದನೆಯಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಉತ್ಪಾದನೆ ಇಳಿಕೆಯಾದರೆ 2024–25ನೇ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್) ಸಕ್ಕರೆ ರಫ್ತಿಗೆ ಕೇಂದ್ರ ಸರ್ಕಾರವು ಅನುಮತಿ ನೀಡುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.

ಇಡೀ ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಸಕ್ಕರೆ ಪೈಕಿ ಶೇ 80ರಷ್ಟು ಉತ್ಪಾದನೆಯು ಮಹಾರಾಷ್ಟ್ರ, ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಆಗುತ್ತದೆ. ಆದರೆ, ಈ ರಾಜ್ಯಗಳಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಇದರಿಂದ ಈ ರಾಜ್ಯಗಳ ಸಕ್ಕರೆ ಕಾರ್ಖಾನೆ ಸಂಘಟನೆಗಳು ಪ್ರಸಕ್ತ ಮಾರುಕಟ್ಟೆ ಋತುವಿಗೆ ಉತ್ಪಾದನೆಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ.

ADVERTISEMENT

ಕಳೆದ ಮಾರುಕಟ್ಟೆ ವರ್ಷದಲ್ಲಿ 32 ದಶಲಕ್ಷ ಟನ್‌ನಷ್ಟು ಉತ್ಪಾದನೆ ಕಡಿಮೆಯಾಗಿತ್ತು. ಈ ಬಾರಿ 27 ದಶಲಕ್ಷ ಟನ್‌ ಕುಸಿತವಾಗುವ ಸಾಧ್ಯತೆಯಿದೆ. ಇದರಿಂದ ರಾಷ್ಟ್ರೀಯ ಬಳಕೆಯಲ್ಲಿ 29 ದಶಲಕ್ಷ ಟನ್‌ ಕೊರತೆಯಾಗಬಹುದು ಎಂದು ಹೇಳಲಾಗಿದೆ. 

‘ಈ ಬಾರಿಯ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಕಬ್ಬು ಬೆಳೆ ತೊಂದರೆಗೆ ಸಿಲುಕಿತು. ಮುಂಗಾರು ಅವಧಿಯಲ್ಲಿ ಅಧಿಕ ಮಳೆ ಸುರಿದಿದ್ದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಂಡಿತು’ ಎಂದು ವೆಸ್ಟ್ ಇಂಡಿಯನ್‌ ಶುಗರ್‌ ಮಿಲ್ಸ್ ಅಸೋಸಿಯೇಷನ್‌ ಅಧ್ಯಕ್ಷ ಬಿ.ಬಿ. ತೋಂಬಾರೆ ಹೇಳಿದ್ದಾರೆ.

ಈ ಹವಾಮಾನ ವೈಪರೀತ್ಯದಿಂದ ಪ್ರತಿ ಹೆಕ್ಟೇರ್‌ಗೆ 10ರಿಂದ 15 ಟನ್‌ ಇಳುವರಿ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

‘ಸಾಮಾನ್ಯವಾಗಿ ಪ್ರತಿ ಹೆಕ್ಟೇರ್‌ಗೆ 120ರಿಂದ 130 ಟನ್‌ ಕಬ್ಬಿನ ಇಳುವರಿ ಬರುತ್ತದೆ. ಈ ಬಾರಿ 80 ಟನ್‌ಗೆ ಇಳಿದಿದೆ’ ಎಂದು ಮಹಾರಾಷ್ಟ್ರದ ಸೊಲ್ಲಾಪುರದ ಕಬ್ಬು ಬೆಳೆಗಾರ ಶ್ರೀಕಾಂತ್ ಇಂಗ್ಲೆ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಮಳೆ ಕೊರತೆಯು ಕಬ್ಬು ಇಳುವರಿ ಮೇಲೆ ಪರಿಣಾಮ ಬೀರಿಲ್ಲ. ಆದರೆ, ಕೆಂಪು ಕೊಳೆ ರೋಗದಿಂದ ಬೆಳೆ ನಷ್ಟವಾಗಿದೆ. ಇದು ಇಳುವರಿ ಕುಂಠಿತಕ್ಕೆ ಕಾರಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆಗಳಲ್ಲಿ ಕಳೆದ ಮಾರುಕಟ್ಟೆ ವರ್ಷದಲ್ಲಿ ಉತ್ಪಾದನೆಯಾದ 80 ಲಕ್ಷ ಟನ್‌ ಸಕ್ಕರೆ ದಾಸ್ತಾನಿದೆ. ಈ ಪೈಕಿ 20 ಲಕ್ಷ ಟನ್‌ ರಫ್ತಿಗೆ ಅನುಮತಿ ನೀಡಬೇಕು ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು (ಐಎಸ್‌ಎಂಎ) ಕೇಂದ್ರದ ಮುಂದೆ ಬೇಡಿಕೆ ಮಂಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.