ADVERTISEMENT

ವಾಟ್ಸ್‌ಆ್ಯಪ್‌ ಮೂಲಕ ಆರೋಗ್ಯ ವಿಮೆ

ಪಿಟಿಐ
Published 16 ಡಿಸೆಂಬರ್ 2020, 15:26 IST
Last Updated 16 ಡಿಸೆಂಬರ್ 2020, 15:26 IST
 ವಾಟ್ಸ್‌ಆ್ಯಪ್‌
ವಾಟ್ಸ್‌ಆ್ಯಪ್‌    

ನವದೆಹಲಿ: ಕೈಗೆಟಕುವ ದರದ ಆರೋಗ್ಯ ವಿಮೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಖರೀದಿಸುವ ಸೌಲಭ್ಯವು ಈ ತಿಂಗಳ ಅಂತ್ಯದ ವೇಳೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಭಾರತದಲ್ಲಿನ ತನ್ನ ಬಳಕೆದಾರರಿಗೆ ಹಣಕಾಸು ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವ ಯತ್ನದ ಭಾಗ ಇದು ಎಂದು ವಾಟ್ಸ್‌ಆ್ಯಪ್‌ ಹೇಳಿದೆ.

ಎಸ್‌ಬಿಐ ಜನರಲ್‌ ಆರೋಗ್ಯ ವಿಮೆಯನ್ನು ವಾಟ್ಸ್‌ಆ್ಯಪ್‌ ಮೂಲಕವೇ ಖರೀದಿಸಲು ವರ್ಷಾಂತ್ಯದ ಹೊತ್ತಿಗೆ ಸಾಧ್ಯವಾಗಲಿದೆ. ಎಚ್‌ಡಿಎಫ್‌ಸಿ ಪಿಂಚಣಿ ಮತ್ತು ಪಿನ್‌ಬಾಕ್ಸ್‌ ಜೊತೆ ಒಪ್ಪಂದ ಮಾಡಿಕೊಂಡು, ನಿವೃತ್ತಿ ನಂತರದ ಜೀವನಕ್ಕೆ ಹಣ ಉಳಿತಾಯ ಮಾಡಿಕೊಳ್ಳುವ ಸೌಲಭ್ಯವನ್ನೂ ನೀಡಲಾಗುವುದು ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ.

ವಾಟ್ಸ್‌ಆ್ಯಪ್‌ ಮೂಲಕ ಹಣ ಪಾವತಿ ಮಾಡುವ ಸೌಲಭ್ಯವು ಈಗ ದೇಶದ ಎಲ್ಲೆಡೆ ಲಭ್ಯವಾಗುತ್ತಿದೆ ಎಂದೂ ಕಂಪನಿ ತಿಳಿಸಿದೆ. ಕಂಪನಿಯ ಸದ್ಯಕ್ಕೆ ಗರಿಷ್ಠ ಎರಡು ಕೋಟಿ ಬಳಕೆದಾರರಿಗೆ ಪಾವತಿ ಸೌಲಭ್ಯ ನೀಡುವ ಪರವಾನಗಿ ಹೊಂದಿದೆ.

ADVERTISEMENT

‘ಭಾರತದಲ್ಲಿ ನಾವು 40 ಕೋಟಿಗಿಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದ್ದೇವೆ. ಇದು ನಮ್ಮ ಪಾಲಿನ ಅತಿದೊಡ್ಡ ಮಾರುಕಟ್ಟೆ. ಅತ್ಯಂತ ಸರಳವಾದ, ವಿಶ್ವಾಸಾರ್ಹವಾದ, ಖಾಸಗಿಯಾದ ಸಂವಹನ ಅನುಭವವನ್ನು ಬಳಕೆದಾರರಿಗೆ ಕಲ್ಪಿಸುವುದು ನಮ್ಮ ಪ್ರಾಥಮಿಕ ಆದ್ಯತೆಯಾಗಿ ಇರುತ್ತದೆ’ ಎಂದು ವಾಟ್ಸ್‌ಆ್ಯಪ್‌ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.

‘ಹಲವು ಬಗೆಯ ಪ್ರಯೋಗಾರ್ಥ ಯೋಜನೆಗಳ ಅನುಷ್ಠಾನದ ಕೆಲಸವನ್ನೂ ವಾಟ್ಸ್‌ಆ್ಯಪ್ ಮಾಡುತ್ತಿದೆ. ಅತ್ಯಂತ ಮೂಲಭೂತವಾದ ಹಣಕಾಸು ಸೇವೆಗಳು ದೇಶದ ವಯಸ್ಕರಿಗೆ ತಮ್ಮ ಮೊಬೈಲ್‌ ಫೋನ್‌ ಮೂಲಕವೇ ಲಭ್ಯವಾಗಬೇಕು ಎಂಬ ಉದ್ದೇಶ ಇದರ ಹಿಂದಿದೆ’ ಎಂದು ಬೋಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.