ADVERTISEMENT

ಹಣಕಾಸು ಸೇವೆಗಳತ್ತ ವಾಟ್ಸ್‌ಆ್ಯಪ್‌ ಚಿತ್ತ

ಪಿಟಿಐ
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಣಕಾಸು ಸೇವಾ ಉತ್ಪನ್ನಗಳಾದ ವಿಮೆ, ಕಿರುಸಾಲ ಮತ್ತು ಪಿಂಚಣಿ ಪಡೆಯುವುದನ್ನು ಸುಲಭಗೊಳಿಸಲು ವಾಟ್ಸ್‌ಆ್ಯಪ್‌, ಭಾರತದ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಲಿದೆ.

ಹಣಕಾಸು ಉತ್ಪನ್ನಗಳ ವಿತರಣೆಯಲ್ಲಿ ಇರುವ ಸಮಸ್ಯೆ ನಿವಾರಿಸಲು ನಡೆಯುವ ಯತ್ನಗಳನ್ನೂ ವಾಟ್ಸ್‌ಆ್ಯಪ್‌ ಬೆಂಬಲಿಸಲಿದೆ ಎಂದು ಕಂಪನಿಯ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.

ಫೇಸ್‌ಬುಕ್‌ ಮಾಲೀಕತ್ವದಲ್ಲಿ ಇರುವ ವಾಟ್ಸ್‌ಆ್ಯಪ್‌ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಬ್ಯಾಂಕಿಂಗ್ ಪಾಲುದಾರರ ಜೊತೆ ಕೆಲಸ ಮಾಡುತ್ತಿದೆ. ‘ಈಗ ನಾವು ಇನ್ನಷ್ಟು ಬ್ಯಾಂಕುಗಳ ಜೊತೆ ಕೆಲಸ ಮಾಡಲು ಬಯಸಿದ್ದೇವೆ. ವಿಶೇಷವಾಗಿ ಗ್ರಾಮೀಣ ಭಾಗಗಳ ಜನಹಾಗೂ ಕಡಿಮೆ ಆದಾಯ ಇರುವ ಸಮುದಾಯಗಳು ಬ್ಯಾಂಕಿಂಗ್ ಸೇವೆಗಳನ್ನು ಸರಳವಾಗಿ ಪಡೆಯುವಂತೆ ಮಾಡುವುದು, ಸೇವೆಗಳ ವ್ಯಾಪ್ತಿ ವಿಸ್ತರಿಸುವುದು ಇದರ ಉದ್ದೇಶ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅಸಂಘಟಿತ ವಲಯದ, ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು ವಿಮೆ, ಕಿರು ಸಾಲ ಮತ್ತು ಪಿಂಚಣಿ ಸೇವೆಗಳನ್ನು ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಸುಲಭವಾಗಿ ಪಡೆದುಕೊಳ್ಳುವಂತೆ ಮಾಡುವುದು ಕಂಪನಿಯ ಗುರಿ ಎಂದು ಬೋಸ್ ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ ತನ್ನ ಪಾವತಿ ಸೇವೆಗಳನ್ನು ಪರೀಕ್ಷಾರ್ಥವಾಗಿ 2018ರಿಂದ ನೀಡುತ್ತಿದೆ. ವಾಟ್ಸ್‌ಆ್ಯಪ್‌ಅನ್ನು ವ್ಯಾಪಕವಾಗಿ ಬಳಕೆ ಮಾಡುವುದು ಸಂದೇಶ ರವಾನಿಸಲು ಮತ್ತು ಸ್ವೀಕರಿಸಲು. ಈ ಸೌಲಭ್ಯದ ಜೊತೆಯಲ್ಲೇ ವಾಟ್ಸ್‌ಆ್ಯಪ್‌ ಯುಪಿಐ ಆಧಾರಿತ ಪಾವತಿ ಸೌಲಭ್ಯ ಕೂಡ ನೀಡುತ್ತಿದೆ. ವಾಟ್ಸ್‌ಆ್ಯಪ್‌ ಪೇ ಹೆಸರಿನ ಈ ಸೌಲಭ್ಯವು ರಾಷ್ಟ್ರವ್ಯಾಪಿಯಾಗಿ ಇನ್ನೂ ಆರಂಭವಾಗಿಲ್ಲ. ಭಾರತದಲ್ಲಿ ವಾಟ್ಸ್‌ ಆ್ಯಪ್‌ ಬಳಕೆದಾರರ ಸಂಖ್ಯೆ 40 ಕೋಟಿಗೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.