ಸಾಂದರ್ಭಿಕ ಚಿತ್ರ
ನವದೆಹಲಿ: ಸಗಟು ಹಣದುಬ್ಬರ ದರವು ಜುಲೈ ತಿಂಗಳಲ್ಲಿ ಎರಡು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ (–)0.58ಕ್ಕೆ ಇಳಿಕೆ ಕಂಡಿದೆ. ಆಹಾರ ವಸ್ತುಗಳ ಬೆಲೆ ಇಳಿಕೆಯು ಸಗಟು ಹಣದುಬ್ಬರ ದರವು ಸತತ ಎರಡನೆಯ ತಿಂಗಳಲ್ಲಿಯೂ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಇರುವಂತೆ ಮಾಡಿದೆ.
ಆದರೆ, ಸಗಟು ಹಣದುಬ್ಬರ ಪ್ರಮಾಣವು ಆಗಸ್ಟ್ ತಿಂಗಳಲ್ಲಿ ಹೆಚ್ಚಳ ಕಾಣಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ. ಸಗಟು ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ (–)0.13ರಷ್ಟು ಇತ್ತು, ಹಿಂದಿನ ವರ್ಷದ ಜುಲೈನಲ್ಲಿ ಇದು ಶೇ 2.10ರಷ್ಟು ದಾಖಲಾಗಿತ್ತು.
‘ಜುಲೈನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೂನ್ಯಕ್ಕಿಂತ ಕೆಳಕ್ಕೆ ಇಳಿದಿರುವುದಕ್ಕೆ ಆಹಾರ ವಸ್ತುಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಮೂಲ ಲೋಹದ ತಯಾರಿಕೆಯ ಬೆಲೆಯಲ್ಲಿನ ಇಳಿಕೆ ಕಾರಣ’ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯವು ಪ್ರಕಟಣೆಯಲ್ಲಿ ಹೇಳಿದೆ.
ಆಹಾರ ವಸ್ತುಗಳ ಪೈಕಿ ತರಕಾರಿಗಳ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಜುಲೈನಲ್ಲಿ ತರಕಾರಿಗಳ ಸಗಟು ಬೆಲೆಯು ಶೇ 28.96ರಷ್ಟು ಇಳಿದಿದೆ. ಇಂಧನ ಮತ್ತು ವಿದ್ಯುತ್ತಿನ ಸಗಟು ಬೆಲೆಯು ಶೇ 2.43ರಷ್ಟು ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.