
ನವದೆಹಲಿ: ಜಿಎಸ್‌ಟಿ ಇಳಿಕೆಯಿಂದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ದರವು ಅಕ್ಟೋಬರ್ ತಿಂಗಳಿನಲ್ಲಿ ಶೇ (–) 1.21ಕ್ಕೆ ಇಳಿಕೆ ಆಗಿದೆ. ಇದು 27 ತಿಂಗಳದ ಕನಿಷ್ಠ ಮಟ್ಟವಾಗಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶೇ 2.75ರಷ್ಟು ಸಗಟು ಹಣದುಬ್ಬರ ದಾಖಲಾಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 0.13ರಷ್ಟಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ಶುಕ್ರವಾರ ತಿಳಿಸಿದೆ.
ಆಹಾರ ಪದಾರ್ಥಗಳ ಬೆಲೆ ಇಳಿಕೆಯಾಗಿದೆ. ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿ ಹಲವು ವಸ್ತುಗಳ ಬೆಲೆ ಕಡಿಮೆಯಾಗಿದೆ. ಇದರಿಂದ ಅಕ್ಟೋಬರ್ ತಿಂಗಳಿನಲ್ಲಿ ಹಣದುಬ್ಬರ ಪ್ರಮಾಣ ತಗ್ಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಆಹಾರ ಪದಾರ್ಥಗಳ ಬೆಲೆ ಶೇ 8.31ರಷ್ಟು ಇಳಿಕೆ ಆಗಿದೆ. ಈರುಳ್ಳಿ, ಆಲೂಗೆಡ್ಡೆ, ತರಕಾರಿಗಳು, ದ್ವಿದಳ ಧಾನ್ಯಗಳು ಬೆಲೆ ಸಹ ಕಡಿಮೆ ಆಗಿದೆ.
ತಯಾರಿಸಿದ ಉತ್ಪನ್ನಗಳ ಹಣದುಬ್ಬರ ಸೆಪ್ಟೆಂಬರ್‌ನಲ್ಲಿ ಶೇ 2.33ರಷ್ಟಿತ್ತು. ಅದು ಅಕ್ಟೋಬರ್‌ನಲ್ಲಿ ಶೇ 1.54ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 2.58ರಿಂದ ಶೇ 2.55ಕ್ಕೆ ಇಳಿದಿದೆ.
ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯಿಂದ ಸರಕುಗಳ ಬೆಲೆ ಕಡಿಮೆ ಆಯಿತು. ಇದು ಸಗಟು ಮತ್ತು ಚಿಲ್ಲರೆ ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 0.25ರಷ್ಟು ದಾಖಲಾಗಿದೆ. ಇದು ದಶಕದ ಕನಿಷ್ಠ ಮಟ್ಟವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.