ADVERTISEMENT

ರಫ್ತು, ಆಕಸ್ಮಿಕ ಲಾಭ ತೆರಿಗೆಯಿಂದ ₹ 72 ಸಾವಿರ ಕೋಟಿ

ಪಿಟಿಐ
Published 3 ಜುಲೈ 2022, 15:41 IST
Last Updated 3 ಜುಲೈ 2022, 15:41 IST

ನವದೆಹಲಿ (ಪಿಟಿಐ): ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದ್ದರಿಂದ ಆದ ವರಮಾನ ಕೊರತೆಯ ಶೇಕಡ 85ರಷ್ಟನ್ನು, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ ಹಾಗೂ ಇಂಧನ ರಫ್ತಿಗೆ ವಿಧಿಸಿರುವ ತೆರಿಗೆಯು ತುಂಬಿಕೊಡಲಿದೆ ಎಂದು ಉದ್ಯಮದ ಮೂಲಗಳು ಹೇಳಿವೆ.

ಕಚ್ಚಾ ತೈಲ ಉತ್ಪಾದಿಸುವ ಕಂಪನಿಗಳಾದ ಒಎನ್‌ಜಿಸಿ, ಆಯಿಲ್ ಇಂಡಿಯಾ ಮತ್ತು ವೇದಾಂತ ಲಿಮಿಟೆಡ್‌ ಮೇಲಿನ ತೆರಿಗೆಯಿಂದ ಕೇಂದ್ರಕ್ಕೆ ₹ 69 ಸಾವಿರ ಕೋಟಿ ವಾರ್ಷಿಕ ವರಮಾನ ಸಿಗಲಿದೆ ಎಂದು ಮೂಲಗಳು ಹೇಳಿವೆ. ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ರಫ್ತು ತೆರಿಗೆಯಿಂದ ಕೇಂದ್ರಕ್ಕೆ ಹೆಚ್ಚುವರಿ ವರಮಾನ ಸಿಗಲಿದೆ.

‘ರಫ್ತು ತೆರಿಗೆಯು ಮಾರ್ಚ್‌ವರೆಗೆ ಜಾರಿಯಲ್ಲಿದ್ದರೆ ಕೇಂದ್ರಕ್ಕೆ ₹ 20 ಸಾವಿರ ಕೋಟಿ ಸಿಗುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ. ರಫ್ತು ಹಾಗೂ ಆಕಸ್ಮಿಕ ಲಾಭ ತೆರಿಗೆಗಳಿಂದ ಒಟ್ಟು ₹ 72 ಸಾವಿರ ಕೋಟಿ ವರಮಾನ ಸಿಗುವ ನಿರೀಕ್ಷೆ ಇದೆ.

ADVERTISEMENT

ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ಕಡಿತದಿಂದ ಕೇಂದ್ರಕ್ಕೆ ವಾರ್ಷಿಕ ₹ 1 ಲಕ್ಷ ಕೋಟಿ ವರಮಾನ ನಷ್ಟವಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಹೊಸ ತೆರಿಗೆಯನ್ನು ಜಾರಿಗೆ ತಂದಿದ್ದರ ಬಗ್ಗೆ ಸಚಿವೆ ನಿರ್ಮಲಾ ಅವರು, ‘ತೈಲ ಸಂಸ್ಕರಣಾ ಕಂಪನಿಗಳು ರಫ್ತಿನ ಮೂಲಕ ಭಾರಿ ಲಾಭ ಗಳಿಸಿದ್ದವು. ಲಾಭ ಗಳಿಸುವವರ ಮೇಲೆ ನಮಗೆ ದ್ವೇಷವಿಲ್ಲ. ಆದರೆ, ಪೆಟ್ರೋಲ್‌ ಬಂಕ್‌ನಲ್ಲಿ ತೈಲ ಸಿಗದೆ, ಅವುಗಳನ್ನು ರಫ್ತು ಮಾಡಲಾಗುತ್ತಿದೆ ಎಂದಾದರೆ, ಅದರಲ್ಲಿ ಒಂದಿಷ್ಟು ‍ಪಾಲು ನಮ್ಮ ಜನರಿಗೆ ಇರಿಸಬೇಕಾಗುತ್ತದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.