ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇಳಿಕೆ ಕಂಡ ವಿಪ್ರೊ ವರಮಾನ

ಪಿಟಿಐ
Published 18 ಅಕ್ಟೋಬರ್ 2023, 15:40 IST
Last Updated 18 ಅಕ್ಟೋಬರ್ 2023, 15:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಮುಖ ಐ.ಟಿ. ಕಂಪನಿ ವಿಪ್ರೊ ಲಿಮಿಟೆಡ್‌ನ ಕಾರ್ಯಾಚರಣಾ ವರಮಾನವು ‍ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹22,540 ಕೋಟಿಯಿಂದ ₹22,516 ಕೋಟಿಗೆ ಇಳಿಕೆ ಕಂಡಿದೆ. 

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹2,667 ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದ್ದ (₹2,649 ಕೋಟಿ) ಲಾಭಕ್ಕೆ ಹೋಲಿಸಿದರೆ ಅಲ್ಪ ಹೆಚ್ಚಳ ಕಂಡುಬಂದಿದೆ.

ಜಾಗತಿಕ ಆರ್ಥಿಕ ಮುನ್ನೋಟವು ದುರ್ಬಲ ಆಗಿರುವುದರಿಂದ ವರಮಾನದಲ್ಲಿ ಇಳಿಕೆ ಕಂಡುಬಂದಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿಯೂ ಇದೇ ಕಾರಣಕ್ಕೆ ವರಮಾನವು ಶೇ 3.5 ರಿಂದ ಶೇ 1.5ಕ್ಕೆ ಇಳಿಕೆ ಕಾಣಲಿದೆ ಎಂದು ತಿಳಿಸಿದೆ. 

ADVERTISEMENT

ಅನಿಶ್ಚಿತ ಪರಿಸ್ಥಿತಿಯಿಂದಾಗಿ ವಹಿವಾಟು ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಮತ್ತು ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇವೆ. ಸೇವೆಗಳನ್ನು ಬಯಸುವ ಕಂಪನಿಗಳ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡುತ್ತಿವೆ ಎಂದು ವಿಪ್ರೊ ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್ ತಿಳಿಸಿದ್ದಾರೆ. ಕಂಪನಿ ಬಿಟ್ಟು ಹೋಗುತ್ತಿರುವವರ ಪ್ರಮಾಣವು ಶೇ 15.5ಕ್ಕೆ ಇಳಿಕೆ ಕಂಡಿದೆ. ಒಟ್ಟು ಸಿಬ್ಬಂದಿ ಸಂಖ್ಯೆಯು ಶೇ 7ರಷ್ಟು ಇಳಿಕೆ ಕಂಡು 2.44 ಲಕ್ಷಕ್ಕೆ ತಲುಪಿದೆ ಎಂದು ಕಂಪನಿ ಹೇಳಿದೆ.

ಎಲ್‌ಟಿಐ ಮೈಂಡ್‌ಟ್ರೀ ಲಾಭ ಇಳಿಕೆ
ಮುಂಬೈ: ದೇಶದ ಆರನೇ ಅತಿದೊಡ್ಡ ಐ.ಟಿ. ಸೇವೆಗಳ ಕಂಪನಿ ಎಲ್‌ಟಿಐ ಮೈಂಡ್‌ಟ್ರೀ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹1162 ಕೋಟಿಗೆ ಇಳಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ₹1189 ಕೋಟಿಯಷ್ಟು ಇತ್ತು. ಕಂಪನಿಯ ಒಟ್ಟು ವರಮಾನವು ಶೇ 8.2ರಷ್ಟು ಹೆಚ್ಚಾಗಿ ₹8905 ಕೋಟಿಗೆ ತಲುಪಿದೆ.  ಆದರೆ ಕಾರ್ಯಾಚರಣಾ ಲಾಭವು ಶೇ 17.5ರಿಂದ ಶೇ 16ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.