ADVERTISEMENT

ಕೊಲ್ಲಿ ದೇಶಗಳ ಸಂಪತ್ತು ಶೀಘ್ರ ಖಾಲಿ?

ಕೊಲ್ಲಿ ದೇಶಗಳ ವಿತ್ತೀಯ ಸುಸ್ಥಿರತೆ ವರದಿಯಲ್ಲಿ ಐಎಂಎಫ್‌ ಎಚ್ಚರಿಕೆ

ಪಿಟಿಐ
Published 7 ಫೆಬ್ರುವರಿ 2020, 16:57 IST
Last Updated 7 ಫೆಬ್ರುವರಿ 2020, 16:57 IST
   
""

ದುಬೈ: ಕೊಲ್ಲಿ ದೇಶಗಳು ಆರ್ಥಿಕ ಸುಧಾರಣಾ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರದಿದ್ದರೆ 2034ರ ವೇಳೆಗೆ ಸರ್ಕಾರದ ಸಂಪತ್ತು ಖಾಲಿಯಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಎಚ್ಚರಿಸಿದೆ.

ಕೊಲ್ಲಿ ರಾಷ್ಟ್ರಗಳು ತಮ್ಮ ವರಮಾನಕ್ಕೆ ‘ಕಪ್ಪು ಚಿನ್ನ’ ಎಂದೇ ಪರಿಗಣಿಸಲಾಗಿರುವ ಕಚ್ಚಾ ತೈಲವನ್ನೇ ಹೆಚ್ಚಾಗಿ ಅವಲಂಬಿಸಿವೆ. ಇದು ದಶಕಗಳಿಂದ ಅವುಗಳ ಬೊಕ್ಕಸವನ್ನು ಅಗಾಧವಾಗಿ ಭರ್ತಿ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೇಡಿಕೆ ಕ್ರಮೇಣ ಕಡಿಮೆಯಾಗುತ್ತಿದೆ. ಕೊಲ್ಲಿ ಸಹಕಾರ ಮಂಡಳಿಯ (ಜಿಸಿಸಿ) 6 ಸದಸ್ಯ ದೇಶಗಳ ವರಮಾನದಲ್ಲಿ ಕಚ್ಚಾ ತೈಲದ ಪ್ರಮಾಣವು ಶೇ 70 ರಿಂದ ಶೇ 90ರಷ್ಟಿದೆ. ಈ ದೇಶಗಳು ಇದುವರೆಗೆ ವಿದೇಶಗಳಲ್ಲಿ ₹ 189 ಲಕ್ಷ ಕೋಟಿ ಮೊತ್ತವನ್ನು ಹಣಕಾಸು ನಿಧಿಗಳಲ್ಲಿ ಹೂಡಿಕೆ ಮಾಡಿವೆ ಎಂದು ಐಎಂಎಫ್‌ನ ‘ತೈಲದ ಭವಿಷ್ಯ ಮತ್ತು ವಿತ್ತೀಯ ಸುಸ್ಥಿರತೆ’ ವರದಿಯಲ್ಲಿ ತಿಳಿಸಲಾಗಿದೆ.

2014ರಿಂದೀಚೆಗೆ ತೈಲ ಬೆಲೆ ಇಳಿಕೆ ಹಾದಿಯಲ್ಲಿ ಇದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿವೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ‘ಜಿಸಿಸಿ’ ದೇಶಗಳಿಗೆ ಹರಿದು ಬರುತ್ತಿರುವ ಸಂಪತ್ತು ಕಡಿಮೆಯಾಗುತ್ತಿದೆ. ಇದರಿಂದಾಗಿ ‘ಜಿಸಿಸಿ’ ಸದಸ್ಯ ದೇಶಗಳು ವಿತ್ತೀಯ ಸುಸ್ಥಿರತೆ ಸವಾಲು ಎದುರಿಸುತ್ತಿವೆ. 2034ರ ವೇಳೆಗೆ ಅವುಗಳ ನಿವ್ವಳ ಹಣಕಾಸು ಸಂಪತ್ತು ಗಮನಾರ್ಹವಾಗಿ ಕಡಿಮೆಯಾಗಲಿದೆ. ಸಾಲಕ್ಕೆ ಕೈಚಾಚುವುದು ಅನಿವಾರ್ಯವಾಗಲಿದೆ.

ADVERTISEMENT

ಈ ದೇಶಗಳು ಈಗಾಗಲೇ ಸಬ್ಸಿಡಿ ಕಡಿತ, ವಿದ್ಯುತ್‌ ದರ ಹೆಚ್ಚಳ, ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಜಾರಿ ಸೇರಿದಂತೆ ಇತರ ತೆರಿಗೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿವೆ. ಇವುಗಳನ್ನು ತ್ವರಿತಗೊಳಿಸಬೇಕಾಗಿದೆ ಎಂದು ಐಎಂಎಫ್‌ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.