ಮುಂಬೈ: ಕೆಲಸದ ಅವಧಿಯ ವಿಸ್ತರಣೆಯು ಆರೋಗ್ಯ ಮತ್ತು ವೃತ್ತಿ–ಜೀವನದ ಸಮತೋಲನದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ‘ಜೀನಿಯಸ್ ಎಚ್‌ಆರ್‌ಟೆಕ್’ ನಡೆಸಿದ ಸಮೀಕ್ಷೆಯು ಕಂಡುಕೊಂಡಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ 44ರಷ್ಟು ಉದ್ಯೋಗಿಗಳು ಹೆಚ್ಚುವರಿ ಪ್ರಯೋಜನ ಇಲ್ಲದೇ ಕೆಲಸದ ಅವಧಿಯನ್ನು ವಿಸ್ತರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲಸ ಅವಧಿಯ ವಿಸ್ತರಣೆಯು ವೈಯಕ್ತಿಕ ಸಮಯ, ಆರೋಗ್ಯ ಮತ್ತು ಒಟ್ಟಾರೆ ಕ್ಷೇಮದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ.
ಸೂಕ್ತ ಪರಿಹಾರ ನೀಡಿದರೆ ಹೆಚ್ಚಿನ ಅವಧಿಗೆ ಕೆಲಸ ಮಾಡುವುದನ್ನು ಪರಿಗಣಿಸುವುದಾಗಿ ಶೇ 40ರಷ್ಟು ಉದ್ಯೋಗಿಗಳು ಹೇಳಿದ್ದಾರೆ. ಉಳಿದ ಶೇ 16ರಷ್ಟು ಉದ್ಯೋಗಿಗಳು ಹೆಚ್ಚಿನ ಅವಧಿಗೆ ಕೆಲಸ ಮಾಡಲು ಸಿದ್ಧರಿದ್ದಾರೆ ಅಥವಾ ಹೆಚ್ಚಿನ ಅವಧಿಗೆ ಕೆಲಸ ಮಾಡಿದರೆ ಉತ್ಪಾದನೆ ಹೆಚ್ಚುತ್ತದೆ ಎಂದು ನಂಬಿದ್ದಾರೆ.
ಆನ್‌ಲೈನ್ ಮೂಲಕ ಜುಲೈ 1ರಿಂದ 31ರವರೆಗೆ ಸಮೀಕ್ಷೆ ನಡೆಸಲಾಗಿತ್ತು. ವಿವಿಧ ವಲಯಗಳಿಂದ 2,076 ಉದ್ಯೋಗಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.