ADVERTISEMENT

ಹಣದುಬ್ಬರ ಹೆಚ್ಚಾದರೆ ಚಿನ್ನಕ್ಕೆ ಬೇಡಿಕೆ ಜಾಸ್ತಿ: ವಿಶ್ವ ಚಿನ್ನ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 12:35 IST
Last Updated 19 ಅಕ್ಟೋಬರ್ 2021, 12:35 IST
ಚಿನ್ನ
ಚಿನ್ನ   

ಬೆಂಗಳೂರು: ದೇಶದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗುವ ಅಂಶಗಳು ಯಾವುವು ಎಂಬ ಬಗ್ಗೆ ವಿಶ್ವ ಚಿನ್ನ ಸಮಿತಿಯು ವರದಿಯನ್ನು ಬಿಡುಗಡೆ ಮಾಡಿದ್ದು, ದೇಶದ ತಲಾವಾರು ಆದಾಯದಲ್ಲಿ ಶೇಕಡ 1ರಷ್ಟು ಹೆಚ್ಚಳ ಆದರೆ, ಚಿನ್ನದ ಬೇಡಿಕೆಯು ಶೇಕಡ 0.9ರಷ್ಟು ಏರಿಕೆ ಕಾಣುತ್ತದೆ ಎಂದು ತಿಳಿಸಿದೆ.

ದೇಶದಲ್ಲಿ ಹಣದುಬ್ಬರ ಪ್ರಮಾಣವು ಶೇ 1ರಷ್ಟು ಹೆಚ್ಚಳ ಕಂಡಾಗ, ಚಿನ್ನದ ಬೇಡಿಕೆಯು ಶೇ 2.6ರಷ್ಟು ಹೆಚ್ಚಳ ಆಗುತ್ತದೆ. ಚಿನ್ನದ ಬೆಲೆಯು ರೂಪಾಯಿ ಲೆಕ್ಕದಲ್ಲಿ ಶೇ 1ರಷ್ಟು ಹೆಚ್ಚಾದರೆ, ಚಿನ್ನದ ಬೇಡಿಕೆಯು ಶೇ 0.4ರಷ್ಟು ಇಳಿಕೆ ಕಾಣುತ್ತದೆ. ಹೂಡಿಕೆದಾರರು ಹಣದುಬ್ಬರ ಹೆಚ್ಚಳದ ಪರಿಣಾಮಗಳಿಂದ ರಕ್ಷಣೆ ‍ಪಡೆಯಲು ಚಿನ್ನ ಖರೀದಿಗೆ ಮೊರೆ ಹೋಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಚಿನ್ನದ ಆಮದು ಮೇಲಿನ ಸುಂಕ ಹಾಗೂ ಸರ್ಕಾರ ವಿಧಿಸುವ ಇತರ ತೆರಿಗೆಗಳು ಬೇಡಿಕೆಯ ಮೇಲೆ ದೀರ್ಘಾವಧಿ ಪರಿಣಾಮ ಉಂಟುಮಾಡುತ್ತವೆ.

1990ರಿಂದ 2020ರವರೆಗಿನ ಅಂಕಿ–ಅಂಶಗಳನ್ನು ಪರಿಶೀಲಿಸಿ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿದೆ. ಬೆಲೆಯಲ್ಲಿನ ವ್ಯತ್ಯಾಸಗಳು ಚಿನ್ನದ ಬೇಡಿಕೆಯ ಮೇಲೆ ತಕ್ಷಣದ ಪರಿಣಾಮವನ್ನು ಬೀರುತ್ತವೆ. ಚಿನ್ನದ ಬೆಲೆಯು ಶೇ 1ರಷ್ಟು ಇಳಿಕೆಯಾದರೆ, ಬೇಡಿಕೆಯು ಶೇ 1.2ರಷ್ಟು ಏರಿಕೆ ಕಾಣುತ್ತದೆ.

ADVERTISEMENT

2012ರ ನಂತರದಲ್ಲಿ ಆಮದು ಸುಂಕ ಪ್ರಮಾಣವನ್ನು ಹೆಚ್ಚಿಸಿದ ಪರಿಣಾಮವಾಗಿ ಚಿನ್ನದ ಬೇಡಿಕೆಯು ಪ್ರತಿವರ್ಷ ಶೇ 1.2ರಂತೆ ತಗ್ಗಿದೆ. ದೇಶದಲ್ಲಿ ಮುಂಗಾರು ಕೂಡ ಚಿನ್ನದ ಬೇಡಿಕೆ ಮೇಲೆ ತುಸು ಪರಿಣಾಮ ಬೀರುತ್ತದೆ. ಮುಂಗಾರು ಪ್ರಮಾಣದಲ್ಲಿ ಶೇ 1ರಷ್ಟು ಹೆಚ್ಚಳವಾದರೆ, ಚಿನ್ನದ ಬೇಡಿಕೆಯು ಶೇ 0.2ರಷ್ಟು ಜಾಸ್ತಿ ಆಗುತ್ತದೆ.

‘ವರದಿಯಲ್ಲಿ ಇರುವ ಅಂಶಗಳು ಚಿನ್ನ ಉದ್ಯಮಕ್ಕೆ ಹೊಸ ಕಾರ್ಯತಂತ್ರ ರೂಪಿಸಲು, ಬೇಡಿಕೆ ಸೃಷ್ಟಿಸಲು ಸಹಾಯ ಆಗುತ್ತದೆ ಎಂಬ ನಂಬಿಕೆ ನಮಗೆ ಇದೆ’ ಎಂದು ವಿಶ್ವ ಚಿನ್ನ ಸಮಿತಿಯ ಭಾರತದ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೋಮಸುಂದರಂ ಪಿ.ಆರ್. ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.