ADVERTISEMENT

ಆರ್ಥಿಕತೆ: ಇಂಗ್ಲೆಂಡ್‌ ಹಿಂದಿಕ್ಕಲಿರುವ ಭಾರತ

ಪಿಟಿಐ
Published 20 ಜನವರಿ 2019, 20:15 IST
Last Updated 20 ಜನವರಿ 2019, 20:15 IST
ಆರ್ಥಿಕತೆ
ಆರ್ಥಿಕತೆ   

ನವದೆಹಲಿ: ವಿಶ್ವದ ಅತಿದೊಡ್ಡ ಆರ್ಥಿಕತೆಯ ಶ್ರೇಯಾಂಕದಲ್ಲಿ ಭಾರತವು ಪ್ರಸಕ್ತ ಸಾಲಿನಲ್ಲಿ 5ನೆ ಸ್ಥಾನದಲ್ಲಿ ಇರುವ ಇಂಗ್ಲೆಂಡ್‌ ಅನ್ನು ಹಿಂದಿಕ್ಕಲಿದೆ ಎಂದು ಜಾಗತಿಕ ಸಲಹಾ ಸಂಸ್ಥೆ ಪಿಡಬ್ಲ್ಯುಸಿ ಅಂದಾಜಿಸಿದೆ.

ಪಿಡಬ್ಲ್ಯುಸಿಯ ಜಾಗತಿಕ ಆರ್ಥಿಕತೆಗೆ ಸಂಬಂಧಿಸಿದ ವರದಿಯಲ್ಲಿ ಇಂಗ್ಲೆಂಡ್‌, ಫ್ರಾನ್ಸ್‌ ಮತ್ತು ಭಾರತದ ಆರ್ಥಿಕ ವೃದ್ಧಿ ದರವು ಕ್ರಮವಾಗಿ ಶೇ 1.6, ಶೇ 1.7 ಮತ್ತು ಶೇ 7.6ರಷ್ಟು ಇರಲಿದೆ ಎಂದು ಎಣಿಸಲಾಗಿದೆ.

ಸದ್ಯಕ್ಕೆ ವಿಶ್ವದಲ್ಲಿ ಅತ್ಯಂತ ತ್ವರಿತವಾಗಿ ಬೆಳವಣಿಗೆ ದಾಖಲಿಸುತ್ತಿರುವ ಆರ್ಥಿಕತೆಯಾಗಿರುವ ಮತ್ತು ಏಳನೆ ಸ್ಥಾನದಲ್ಲಿ ಇರುವ ಭಾರತ 2019ರಲ್ಲಿ ಐದನೇ ಸ್ಥಾನಕ್ಕೆ ಏರಲಿದೆ ಎಂದು ನಿರೀಕ್ಷಿಸಲಾಗಿದೆ. ಜಾಗತಿಕ ಆರ್ಥಿಕತೆಯನ್ನು ಪ್ರಭಾವಿಸಲಿರುವ ವಿದ್ಯಮಾನಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ADVERTISEMENT

ಪ್ರಮುಖ ದೇಶಗಳ ಮಧ್ಯೆ ವಾಣಿಜ್ಯ ಸಮರ ಮತ್ತು ಕಚ್ಚಾ ತೈಲ ಪೂರೈಕೆಯಲ್ಲಿನ ಕುಸಿತದಂತಹ ಪ್ರಮುಖ ಅಡಚಣೆಗಳು ಘಟಿಸದಿದ್ದರೆ, 2019–20ರಲ್ಲಿ ಭಾರತದ ಆರ್ಥಿಕತೆ ಹಿತಕರ ಎನ್ನಬಹುದಾದ ಶೇ 7.6ರಷ್ಟು ಆರ್ಥಿಕ ವೃದ್ಧಿ ದರಕ್ಕೆ ಮರಳಲಿದೆ.

‘ಜಿಎಸ್‌ಟಿಯನ್ನು ದಕ್ಷ ರೀತಿಯಲ್ಲಿ ಜಾರಿಗೆ ತರುವುದರ ಪ್ರಯೋಜನಗಳು ಮತ್ತು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಮೊದಲ ವರ್ಷ ಜಾರಿಗೆ ತರುವ ಸುಧಾರಣಾ ಕ್ರಮಗಳು ಆರ್ಥಿಕ ವೃದ್ಧಿ ದರ ಹೆಚ್ಚಳಕ್ಕೆ ಕಾರಣವಾಗಲಿವೆ’ ಎಂದು ಪಿಡಬ್ಲ್ಯುಸಿ ಇಂಡಿಯಾದ ಸಾರ್ವಜನಿಕ ಹಣಕಾಸು ಮತ್ತು ಆರ್ಥಿಕತೆಯ ಮುಖ್ಯಸ್ಥ ರೈನನ್‌ ಬ್ಯಾನರ್ಜಿ ಹೇಳಿದ್ದಾರೆ.

ಸರಾಸರಿ ಒಂದೇ ಬಗೆಯ ಅಭಿವೃದ್ಧಿ ಮತ್ತು ಜನಸಂಖ್ಯೆ ಹೊಂದಿರುವ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಐದು ಮತ್ತು ಆರನೆ ಸ್ಥಾನವನ್ನು ಪರಸ್ಪರ ಬದಲಿಸುತ್ತ ಬಂದಿವೆ. ಒಂದೊಮ್ಮೆ ಭಾರತ ಈ ಶ್ರೇಯಾಂಕ ಪಟ್ಟಿಯಲ್ಲಿ ಬಡ್ತಿ ಪಡೆದರೆ ಅದು ಶಾಶ್ವತವಾಗಿರಲಿದೆ.

ವಿಶ್ವಬ್ಯಾಂಕ್‌ ವರದಿ ಪ್ರಕಾರ, ಭಾರತ ಸದ್ಯಕ್ಕೆ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ₹ 181 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್‌ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ಈ ಮೊದಲೇ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.