ನವದೆಹಲಿ: ಸಗಟು ಹಣದುಬ್ಬರವು ಅಕ್ಟೋಬರ್‌ನಲ್ಲಿ ಎಂಟು ತಿಂಗಳ ಗರಿಷ್ಠ ಮಟ್ಟವಾದ ಶೇಕಡ 1.48ಕ್ಕೆ ಏರಿಕೆಯಾಗಿದೆ. ಸಗಟು ದರ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 1.32ರಷ್ಟಿತ್ತು. 2019ರ ಅಕ್ಟೋಬರ್‌ನಲ್ಲಿ ಶೂನ್ಯ ಮಟ್ಟದಲ್ಲಿತ್ತು.
2020ರ ಫೆಬ್ರುವರಿಯಲ್ಲಿ ಸಗಟು ಹಣದುಬ್ಬರ ಶೇ 2.26ರಷ್ಟಿತ್ತು. ಆ ಬಳಿಕದ ಗರಿಷ್ಠ ಮಟ್ಟ ಅಕ್ಟೋಬರ್‌ನಲ್ಲಿ ದಾಖಲಾದಂತೆ ಆಗಿದೆ.
ಆಹಾರ ಉತ್ಪನ್ನಗಳ ಬೆಲೆ ತುಸು ಇಳಿಕೆ ಆಗಿದ್ದರೂ ತಯಾರಿಸಿದ ಆಹಾರ ಉತ್ಪನ್ನಗಳ ಹಣದುಬ್ಬರ ಏರಿಕೆ ಆಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.
ಆಹಾರ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ 6.37ರಷ್ಟಾಗಿದೆ. ಸೆಪ್ಟೆಂಬರ್‌ನಲ್ಲಿ ಶೇ 8.17ರಷ್ಟಿತ್ತು. ಸೆಪ್ಟೆಂಬರ್‌ನಲ್ಲಿನ ಮಟ್ಟಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಇಳಿಕೆ ಕಂಡಿದೆ.
ತರಕಾರಿ ಮತ್ತು ಆಲೂಗಡ್ಡೆ ಬೆಲೆ ಏರಿಕೆಯು ಕ್ರಮವಾಗಿ ಶೇ 25.23 ಮತ್ತು ಶೇ 107.70ರಷ್ಟಾಗಿದೆ.
ಗ್ರಾಹಕ ದರ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಹಣದುಬ್ಬರವು ಮುಂದಿನ ಕೆಲವು ತಿಂಗಳುಗಳವರೆಗೆ ಏರುಮುಖವಾಗಿಯೇ ಇರಲಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಈ ವರ್ಷದ ಡಿಸೆಂಬರ್‌ವರೆಗೆ ಅಥವಾ 2021ರ ಫೆಬ್ರುವರಿಯವರೆಗೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದ ಬಳಿಕ ಬೇಡಿಕೆಯಲ್ಲಿ ಸುಧಾರಣೆ ಕಂಡುಬರುತ್ತಿರುವುದನ್ನು ಸಿಪಿಐ ಹಣದುಬ್ಬರದಲ್ಲಿ ಆಗುತ್ತಿರುವ ಏರಿಕೆಯು ಸೂಚಿಸುತ್ತಿದೆ. ಹೀಗಿದ್ದರೂ ಬಹುಪಾಲು ಬೇಡಿಕೆಯು ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಇದು ಸಹಜವಾದ ಚೇತರಿಕೆ ಎಂದು ಈಗಲೇ ಹೇಳಲಾಗುವುದಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್‌ನ ಮುಖ್ಯ ಆರ್ಥಿಕ ತಜ್ಞ ಡಿ.ಕೆ. ಪಂತ್ ತಿಳಿಸಿದ್ದಾರೆ.
ಹೆಚ್ಚಾಗಿರುವ ಬೇಡಿಕೆಯ ಪ್ರಮಾಣವು ಹಬ್ಬದ ಋತುವಿನಾಚೆಗೂ ಹಾಗೆಯೇ ಇರಲಿದೆಯೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಪಂತ್ ಹೇಳಿದ್ದಾರೆ. ಆರ್‌ಬಿಐ ಡಿಸೆಂಬರ್ 2ರಿಂದ 4ರವರೆಗೆ ಬಡ್ಡಿದರದ ಪರಾಮರ್ಶೆ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.