ADVERTISEMENT

WPI Inflation: ಸಗಟು ಹಣದುಬ್ಬರ 14 ತಿಂಗಳ ಕನಿಷ್ಠ

ಪಿಟಿಐ
Published 16 ಜೂನ್ 2025, 13:26 IST
Last Updated 16 ಜೂನ್ 2025, 13:26 IST
.
.   

ನವದೆಹಲಿ: ಆಹಾರ ವಸ್ತುಗಳು ಹಾಗೂ ಇಂಧನ ಬೆಲೆ ತಗ್ಗಿದ ಪರಿಣಾಮವಾಗಿ ಸಗಟು ಹಣದುಬ್ಬರ ದರವು ಮೇ ತಿಂಗಳಲ್ಲಿ ಶೇಕಡ 0.39ಕ್ಕೆ ಇಳಿಕೆ ಕಂಡಿದೆ. ಇದು 14 ತಿಂಗಳ ಕನಿಷ್ಠ ಮಟ್ಟ. ಆದರೆ, ಜಾಗತಿಕ ಸಂಘರ್ಷಗಳ ಪರಿಣಾಮವಾಗಿ ಸಗಟು ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಸಗಟು ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಶೇ 0.85ರಷ್ಟು ಇತ್ತು. ಕಳೆದ ವರ್ಷದ ಮೇ ತಿಂಗಳಲ್ಲಿ ಇದು ಶೇ 2.74 ಆಗಿತ್ತು.

ತರಕಾರಿ, ಈರುಳ್ಳಿ, ಆಲೂಗಡ್ಡೆಯ ಬೆಲೆ ಇಳಿದಿರುವ ಕಾರಣಕ್ಕೆ ಮೇ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆಯು ಶೇ 1.56ರಷ್ಟು ಇಳಿದಿದೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಮೇ ತಿಂಗಳಲ್ಲಿ ತರಕಾರಿಗಳ ಸಗಟು ಬೆಲೆಯಲ್ಲಿ ಶೇ 21.62ರಷ್ಟು ಇಳಿಕೆ ದಾಖಲಾಗಿದೆ.

ADVERTISEMENT

ಆದರೆ, ತಯಾರಿಸಿದ ಉತ್ಪನ್ನಗಳ ಬೆಲೆಯಲ್ಲಿ ಶೇ 2.04ರಷ್ಟು ಏರಿಕೆ ಆಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣದ ಅಂಕಿ–ಅಂಶಗಳು ಕಳೆದ ವಾರ ಬಿಡುಗಡೆ ಆಗಿದ್ದು, ಅದು ಶೇ 2.82ರಷ್ಟಿದೆ. ರೆಪೊ ದರದ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಆರ್‌ಬಿಐ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪರಿಗಣಿಸುತ್ತದೆ.

‘ಕಚ್ಚಾ ತೈಲದ ಬೆಲೆ ಹೆಚ್ಚಾಗಿ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿದರೆ ಸಗಟು ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳಲ್ಲಿ ಹೆಚ್ಚಳ ಕಾಣಲಿದೆ. ಆದರೆ ಇದು ಶೇ 0.6ರಿಂದ ಶೇ 0.8ರಷ್ಟು ಮಾತ್ರವೇ ಆಗಿರಲಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಹಿರಿಯ ಅರ್ಥಶಾಸ್ತ್ರಜ್ಞ ರಾಹುಲ್ ಅಗರ್ವಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.