ADVERTISEMENT

ಎರಡಂಕಿ ಮಟ್ಟದಲ್ಲೇ ಉಳಿದ ಹಣದುಬ್ಬರ ಪ್ರಮಾಣ

ಪಿಟಿಐ
Published 14 ಜುಲೈ 2021, 15:05 IST
Last Updated 14 ಜುಲೈ 2021, 15:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳಲ್ಲಿ ಶೇಕಡ 12.07ಕ್ಕೆ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ಇದು ಸಾರ್ವಕಾಲಿಕ ದಾಖಲೆ ಮಟ್ಟವಾದ ಶೇ 12.94ಕ್ಕೆ ತಲುಪಿತ್ತು. ಇಂಧನ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆ ಪ್ರಮಾಣವು ತುಸು ತಗ್ಗಿರುವುದರಿಂದಾಗಿ ಒಟ್ಟಾರೆ ಹಣದುಬ್ಬರದಲ್ಲಿ ಅಲ್ಪ ಇಳಿಕೆ ಆಗಿದೆ.

ಹಿಂದಿನ ವರ್ಷದ ಜೂನ್ ತಿಂಗಳಿನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ (–) 1.81 ಆಗಿತ್ತು. ಈ ವರ್ಷದ ಅಕ್ಟೋಬರ್‌ ತಿಂಗಳವರೆಗೂ ಸಗಟು ಹಣದುಬ್ಬರ ಪ್ರಮಾಣವು ಮೇಲ್ಮಟ್ಟದಲ್ಲಿಯೇ ಇರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಲ್ಲದೆ, ಇದು ಚಿಲ್ಲರೆ ಹಣದುಬ್ಬರ ಪ್ರಮಾಣದ ಮೇಲೆಯೂ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾನು ನೀತಿಯ ಮೇಲೆಯೂ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

‘ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಗಟು ಹಣದುಬ್ಬರ ಪ್ರಮಾಣ ಕಡಿಮೆ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಜೂನ್‌ನ ಸಗಟು ಹಣದುಬ್ಬರ ಭಾರಿ ಪ್ರಮಾಣದಲ್ಲಿ ಇರುವಂತೆ ಕಾಣಿಸುತ್ತಿದೆ. ‍ಪೆಟ್ರೋಲ್, ಡೀಸೆಲ್, ನ್ಯಾಪ್ತಾ, ವಿಮಾನ ಇಂಧನ ಮುಂತಾದ ಉತ್ಪನ್ನಗಳ ಬೆಲೆ ಏರಿಕೆ ಆಗಿರುವುದು ಕೂಡ ಹಣದುಬ್ಬರ ಪ್ರಮಾಣ ಜಾಸ್ತಿ ಆಗಿರುವುದಕ್ಕೆ ಒಂದು ಕಾರಣ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ADVERTISEMENT

ಸಗಟು ಹಣದುಬ್ಬರ ಪ್ರಮಾಣವು ಮುಂದಿನ ತಿಂಗಳುಗಳಲ್ಲಿ ತುಸು ಇಳಿಕೆ ಆಗಬಹುದು. ಹೀಗಿದ್ದರೂ ಇದು ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಎರಡಂಕಿಯ ಮಟ್ಟದಲ್ಲಿಯೇ ಇರಲಿದೆ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

‘ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ತರುವ ಬಗ್ಗೆ ಪರಿಶೀಲಿಸಬೇಕು. ಕೈಗಾರಿಕೆಗಳ ಕಚ್ಚಾ ವಸ್ತುಗಳ ಬೆಲೆ, ತಯಾರಿಕಾ ವೆಚ್ಚ ಹೆಚ್ಚುತ್ತಿರುವ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ದೇಶಿ ಮಾರುಕಟ್ಟೆಯಲ್ಲಿ ಕೈಗಾರಿಕೆಗಳ ಸ್ಪರ್ಧಾತ್ಮಕತೆ ಮೇಲೆ ಪರಿಣಾಮ ಉಂಟಾಗುತ್ತಿದೆ’ ಎಂದು ಉದ್ಯಮ ಸಂಘಟನೆಯಾದ ಪಿಎಚ್‌ಡಿಸಿಸಿಐ ಅಧ್ಯಕ್ಷ ಸಂಜಯ್ ಅಗರ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.