
ನವದೆಹಲಿ: ದೇಶದಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ನವೆಂಬರ್ ತಿಂಗಳಿನಲ್ಲಿ ಶೇ (–)0.32ರಷ್ಟಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
ದ್ವಿದಳ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯಲ್ಲಿನ ಏರಿಕೆಯು ಸಗಟು ಹಣದುಬ್ಬರ ಹೆಚ್ಚಳಕ್ಕೆ ಕಾರಣ ಎಂದು ಅದು ತಿಳಿಸಿದೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಶೇ (–)1.21ರಷ್ಟಿತ್ತು, ಕಳೆದ ವರ್ಷದ ನವೆಂಬರ್‌ನಲ್ಲಿ ಇದು ಶೇ 2.16ರಷ್ಟಿತ್ತು.
‘ಆಹಾರ ಪದಾರ್ಥಗಳು, ಖನಿಜ ತೈಲಗಳು, ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿದ್ಯುತ್, ಮೂಲ ಲೋಹಗಳ ಉತ್ಪಾದನಾ ವೆಚ್ಚದಲ್ಲಿನ ಇಳಿಕೆಯಿಂದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಋಣಾತ್ಮಕ ದರದಲ್ಲಿದೆ’ ಎಂದು ತಿಳಿಸಿದೆ.
ಅಕ್ಟೋಬರ್‌ನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆಯು ಶೇ 8.31ರಷ್ಟಿತ್ತು. ನವೆಂಬರ್‌ನಲ್ಲಿ ಶೇ 4.16ರಷ್ಟಿದೆ. ತರಕಾರಿಗಳ ಸಗಟು ಬೆಲೆ ಇಳಿಕೆಯು ಶೇ 20.23ರಷ್ಟಾಗಿದೆ. ಇದು ಅಕ್ಟೋಬರ್‌ನಲ್ಲಿ ಶೇ 34.97ರಷ್ಟಿತ್ತು.
ದ್ವಿದಳ ಧಾನ್ಯಗಳ ಬೆಲೆ ಇಳಿಕೆಯು ಶೇ 15.21ರಷ್ಟು, ಆಲೂಗೆಡ್ಡೆ ಮತ್ತು ಈರುಳ್ಳಿ ಸಗಟು ದರ ಇಳಿಕೆವು ಕ್ರಮವಾಗಿ ಶೇ 36.14ರಷ್ಟು ಮತ್ತು ಶೇ 64.70ರಷ್ಟು ಆಗಿದೆ.
ತಯಾರಿಸಿದ ಸರಕುಗಳ ಹಣದುಬ್ಬರ ಶೇ 1.54ರಿಂದ ಶೇ 1.33ಕ್ಕೆ ಇಳಿದಿದೆ. ಇಂಧನ ಮತ್ತು ವಿದ್ಯುತ್ ಸಗಟು ದರ ಇಳಿಕೆಯು ಶೇ 2.55ರಿಂದ ಶೇ 2.27ಕ್ಕೆ ಬಂದಿದೆ ಎಂದು ತಿಳಿಸಿದೆ.
ನವೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.71ರಷ್ಟು ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.