ADVERTISEMENT

ಪರಿಕರಗಳ ಬಾಡಿಗೆಗೆ ‘ಯೋಪಿಕ್‌’

​ಕೇಶವ ಜಿ.ಝಿಂಗಾಡೆ
Published 21 ಮೇ 2019, 19:43 IST
Last Updated 21 ಮೇ 2019, 19:43 IST
ಯೋಪಿಕ್ ಸ್ಥಾಪಕ ಒಜಾಸ್ ಪಾರೇಖ್‌ ಅವರು ಬಾಡಿಗೆ ಸಲಕರಣೆಗಳ ಜತೆ
ಯೋಪಿಕ್ ಸ್ಥಾಪಕ ಒಜಾಸ್ ಪಾರೇಖ್‌ ಅವರು ಬಾಡಿಗೆ ಸಲಕರಣೆಗಳ ಜತೆ   

ಕೆಲ ಪರಿಕರಗಳು, ಚಿಣ್ಣರ ಆಟಿಕೆಗಳು ಸೀಮಿತ ಅವಧಿಗೆ ಬಳಸಲು ಬೇಕಾಗುತ್ತವೆ. ದುಬಾರಿ ಬೆಲೆ ತೆತ್ತು ಖರೀದಿಸುವುದು ಹೊರೆಯಾಗಿ ಪರಿಣಮಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಅಗತ್ಯಗಳ ಈಡೇರಿಕೆಗೆ ಎಲ್ಲ ಬಗೆಯ ಸರಕುಗಳನ್ನು ಖರೀದಿಸಲು ಸಾಧ್ಯವಾಗಲಾರದು. ಚಿಣ್ಣರಿಗೆ ಮಾರುಕಟ್ಟೆಯಲ್ಲಿ ಲಭ್ಯ ಇರುವ ವೈವಿಧ್ಯಮಯ ಆಧುನಿಕ, ಕೃತಕ ಬುದ್ಧಿಮತ್ತೆಯ ದುಬಾರಿ ಆಟಿಕೆ, ರೋಬೊ ಬಳಸುವ ಹಂಬಲ ಇದ್ದರೆ, ಬಗೆ ಬಗೆಯ ತಿನಿಸು, ಆಹಾರ ಪದಾರ್ಥ ತಯಾರಿಸಿ ಪ್ರಯೋಗ ಮಾಡಲು ಗೃಹಿಣಿಯರಿಗೆ ತಾತ್ಕಾಲಿಕ ನೆಲೆಯಲ್ಲಿ ಅಡುಗೆ ತಯಾರಿಕಾ ಪರಿಕರ ಬೇಕಾಗುತ್ತವೆ. ಕ್ರಿಕೆಟ್‌ ಪ್ರೇಮಿಗಳಿಗೆ ಸ್ವಯಂಚಾಲಿತ ಬೌಲಿಂಗ್‌ ಯಂತ್ರದ ಎದುರು ಬ್ಯಾಟ್‌ ಬೀಸುವ ಕನಸು ಇರುತ್ತದೆ. ಇಂತಹ ವಿಶಿಷ್ಟ ಪರಿಕರಗಳನ್ನು ಎಲ್ಲರೂ ಖರೀದಿಸಲು ಸಾಧ್ಯವಾಗುವುದಿಲ್ಲ. ಅಂತಹ ಅಗತ್ಯವೂ ಇರುವುದಿಲ್ಲ. ಆದರೆ, ಬಳಸಿ ನೋಡುವ ಉಮೇದು ಇದ್ದೇ ಇರುತ್ತದೆ. ಈ ಬಗೆಯ ಪರಿಕರಗಳನ್ನೂ ಬಾಡಿಗೆ ರೂಪದಲ್ಲಿ ಒದಗಿಸುವ ನವೋದ್ಯಮವು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಆಟಿಕೆ ಸಾಮಗ್ರಿ, ವ್ಯಾಕುಂ ಕ್ಲೀನರ್‌, ಕ್ರಿಕೆಟ್‌ ಬೌಲಿಂಗ್‌ ಸಾಧನ, ಪುಟ್ಟ ರೋಬೊ,ಗೃಹಿಣಿಯರಿಗೆ ಬೇಕಾದ ಬಾರ್ಬಿಕ್ಯೂ ಯಂತ್ರ (Barbecue Machine), ಔತಣಕೂಟಗಳಿಗೆ ಮೆರುಗು ನೀಡುವ ಮ್ಯೂಸಿಕ್‌ ಸಿಸ್ಟಮ್ಸ್‌, ರೋಬೊ (COZMO Interactive Robot), ವರ್ಚುವಲ್‌ ರಿಯಾಲಿಟಿ ಸೆಟ್‌, ಟೆಲಿಸ್ಕೋಪ್‌, ಕುಕಿಂಗ್‌, ಐಸ್‌ಕ್ರೀಂ ಮೇಕರ್‌, ಸ್ಲೀಪಿಂಗ್‌ ಬ್ಯಾಗ್‌ ಮತ್ತಿತರ ಸಾಮಗ್ರಿಗಳು ಇಲ್ಲಿ ಬಾಡಿಗೆಗೆ ದೊರೆಯುತ್ತವೆ. ‘ಯೋಪಿಕ್‌ಡಾಟ್‌ಇನ್‌’ (https://www.yopik.in) ಅಂತರ್ಜಾಲ ತಾಣದ ಮೂಲಕ ವೈವಿಧ್ಯಮಯ ಸಲಕರಣೆಗಳನ್ನು ಬಾಡಿಗೆಗೆ ನೀಡುವ ಸ್ಟಾರ್ಟ್‌ಅಪ್‌ ಕಾರ್ಯನಿರ್ವಹಿಸುತ್ತಿದೆ.

ಗ್ರಾಹಕರು ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಿ ತಮಗೆ ಬೇಕಾದ ಸರಕನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಗ್ರಾಹಕರು ಬಾಡಿಗೆ ಪರಿಕರಗಳನ್ನು ತಾವೇ ಪಡೆದುಕೊಂಡು ಮರಳಿಸಬಹುದು ಅಥವಾ ಮನೆ ಬಾಗಿಲಿಗೆ ಪೂರೈಸುವ ಮತ್ತು ವಾಪಸ್‌ ಒಯ್ಯುವ ಸೌಲಭ್ಯವನ್ನು ₹ 150ರಂತೆ ಸೇವಾ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. ಆನ್‌ಲೈನ್‌ ತಾಣದಲ್ಲಿಯೇ ಬಾಡಿಗೆ ಮೊತ್ತ, ಮನೆಗೆ ತಲುಪಿಸುವ ಸೇವಾ ಶುಲ್ಕ ಮತ್ತು ಸುರಕ್ಷತಾ ಠೇವಣಿ ಪಾವತಿಸಿ ಬಾಡಿಗೆ ಪಡೆಯಬಹುದು. ಬಳಕೆದಾರರು ಸೂಚಿಸಿದ ದಿನ ಮತ್ತು ಸಮಯದಲ್ಲಿ ಮಾತ್ರ ಸರಕು ಮನೆ ಬಾಗಿಲಿಗೆ ತಲುಪಿಸಲಾಗುವುದು. ಎರಡನೆ ದಿನಕ್ಕೆ ಬಾಡಿಗೆ ಮುಂದುವರೆದರೆ ಮೂಲ ಬಾಡಿಗೆಗಿಂತ ಕಡಿಮೆ ಮೊತ್ತ ಪಾವತಿಸಿ ಬಳಸಬಹುದು. ಉದಾಹರಣೆಗೆ: ಚಿಣ್ಣರಿಗಾಗಿ ರಿಮೋಟ್‌ ಕಂಟ್ರೋಲ್‌ ಕಾರ್‌ ಒಂದು ದಿನಕ್ಕೆ ₹ 300 ರಂತೆ ಬಾಡಿಗೆಗೆ ದೊರೆಯುತ್ತದೆ. ಎರಡನೆ ದಿನಕ್ಕೆ ಕೇವಲ ₹ 50 ಬಾಡಿಗೆ ನೀಡಬಹುದು.

ADVERTISEMENT

ಅಮೆರಿಕದಲ್ಲಿ ತಯಾರಿಸಿರುವ ಅತ್ಯುತ್ತಮ ಗುಣಮಟ್ಟದ ಆಟಿಕೆ ಸಾಮಾನುಗಳೂ ಇಲ್ಲಿ ಲಭ್ಯ ಇವೆ. ಮನೆಯ ಬಾಲ್ಕನಿಯಿಂದಲೇ ಚಂದಿರ, ನಕ್ಷತ್ರಗಳನ್ನು ವೀಕ್ಷಿಸಿ ಖಗೋಲ ಜ್ಞಾನ ವಿಸ್ತರಿಸಲು ನೆರವಾಗುವ ಟೆಲಿಸ್ಕೋಪ್‌ನ ದಿನವೊಂದರ ಬಾಡಿಗೆ ₹ 500 ಇದೆ. ಆಕಾಶಕಾಯಗಳ ಬಗ್ಗೆ ಕುತೂಹಲ ಇರುವ ವಿದ್ಯಾರ್ಥಿಗಳಿಗೆ ಇದು ನೆರವಿಗೆ ಬರಲಿದೆ.

ಪರಿಕರದ ದಿನವೊಂದರ ಬಾಡಿಗೆ ದರ ₹ 500, ಮನೆಗೆ ತಲುಪಿಸಿ ವಾಪಸ್ ಒಯ್ಯುವುದಕ್ಕೆ ₹ 150 ಮತ್ತು ಸುರಕ್ಷತಾ ಠೇವಣಿ ₹ 1,000ಗಳನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಿ ಬಾಡಿಗೆ ಪಡೆಯಬಹುದು. ವಿಭಿನ್ನ ಪರಿಕರಕ್ಕೆ ಪ್ರತ್ಯೇಕ ದರ ವಿಧಿಸಲಾಗಿದೆ. ಬಳಕೆದಾರರ ‘ಕೆವೈಸಿ’ ಆಧರಿಸಿ ಸಲಕರಣೆಗಳನ್ನು ಬಾಡಿಗೆಗೆ ನೀಡಲಾಗುವುದು. 2018ರ ಸೆಪ್ಟೆಂಬರ್‌ನಲ್ಲಿ ಕಾರ್ಯಾರಂಭ ಮಾಡಿರುವ ಈ ಆಟಿಕೆ ಸಾಮಾನು ಮತ್ತು ಸಲಕರಣೆ ಬಾಡಿಗೆ ನೀಡುವ ವಹಿವಾಟು ನಗರದಲ್ಲಿ ಕ್ರಮೇಣ ತನ್ನ ವ್ಯವಹಾರ ವಿಸ್ತರಿಸುತ್ತಿದೆ.

‘ಇಲ್ಲಿ ಲಭ್ಯ ಇರುವ ಸಲಕರಣೆಗಳ ಬಳಕೆ ಬಗ್ಗೆ ವಿಡಿಯೊ ಸಿದ್ಧಪಡಿಸಲಾಗಿದೆ. ಸರಕು ಖರೀದಿಸುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ವಿಡಿಯೊವನ್ನು ಖರೀದಿದಾರರಿಗೆ ರವಾನಿಸಲಾಗುವುದು. ಸಂಸ್ಥೆಯ ತರಬೇತಿ ಪಡೆದ ಸಿಬ್ಬಂದಿಯು ಉತ್ಪನ್ನವನ್ನು ಮನೆ ಬಾಗಿಲಿಗೆ ತಂದಾದ ಅದರ ಬಳಕೆ, ಜೋಡಣೆ,ಬಿಚ್ಚುವ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಿಂದ ಬಳಕೆದಾರರಿಗೆ ಯಾವುದೇ ತೊಂದರೆ ಎದುರಾಗುವುದಿಲ್ಲ.ಬಳಕೆದಾರರು ಬಾಡಿಗೆ ಪಡೆದ ಸಲಕರಣೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ’ ಎಂದು ಸ್ಟಾರ್ಟ್‌ಅಪ್‌ ಸ್ಥಾಪಕ ಒಜಾಸ್ ಪಾರೇಖ್‌ ಹೇಳುತ್ತಾರೆ.

ದೇಶದಲ್ಲಿ ಮೊದಲ ಬಾರಿಗೆ ಇಂತಹ ಬಾಡಿಗೆ ವಹಿವಾಟು ನಡೆಸುತ್ತಿರುವುದು ಈ ನವೋದ್ಯಮದ ವೈಶಿಷ್ಟ್ಯತೆಯಾಗಿದೆ. ವ್ಯವಸ್ಥಿತ ಸ್ವರೂಪದಲ್ಲಿ ಇ–ಕಾಮರ್ಸ್‌ ವಹಿವಾಟಿನಂತೆ ಸಲಕರಣೆಗಳನ್ನೂ ಬಾಡಿಗೆಗೆ ನೀಡುವ ಸ್ಟಾರ್ಟ್‌ಅಪ್‌ಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಟಿಕೆ, ಕ್ರೀಡಾ ಸಾಮಗ್ರಿ, ಸಂಗೀತ, ಅಡುಗೆ ಮನೆ ಪರಿಕರ, ಸ್ಟಾರ್‌ವಾರ್ಸ್‌, ಸೂಪರ್ ಹೀರೊಗಳ ವಸ್ತ್ರ, ವೈವಿಧ್ಯಮಯ ಪರಿಕರಗಳು ಬಾಡಿಗೆಗೆ ದೊರೆಯಲಿವೆ.

ಸ್ಥಾಪಕ ಓಜಾಸ್‌ ಪಾರೇಖ್‌ (44) ಅವರು, ಪ್ಯಾಂಟಲೂನ್‌, ಅಮೆಜಾನ್‌ ಸಂಸ್ಥೆಗಳಲ್ಲಿ ಕೆಲಸ ಮಾಡಿರೀಟೆಲ್‌ ಉದ್ದಿಮೆ, ಇ–ಕಾಮರ್ಸ್‌ ಕ್ಷೇತ್ರದಲ್ಲಿ 25 ವರ್ಷಗಳಿಂದ ಕೆಲಸ ಮಾಡಿದ ಅನುಭವ ಬಳಸಿಕೊಂಡು ಈ ನವೋದ್ಯಮ ಸ್ಥಾಪಿಸಿದ್ದಾರೆ.

ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ಗ್ರಾಹಕರ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತದೆ. ಓಜಾಸ್‌ ಅವರು ತಮ್ಮ ದುಡಿಮೆಯ ಗಳಿಕೆಯನ್ನು ಹಾಕಿ ಈ ನವೋದ್ಯಮ ಆರಂಭಿಸಿದ್ದಾರೆ. ಸ್ಟಾರ್ಟ್‌ಅಪ್‌ನ ಸೇವೆಯು ಗ್ರಾಹಕರಿಗೆ ಮೆಚ್ಚುಗೆಯಾಗಿದೆ. ಶೇ 23ರಷ್ಟು ಗ್ರಾಹಕರು ಮತ್ತೆ, ಮತ್ತೆ ಸರಕು ಬಾಡಿಗೆ ಪಡೆದಿರುವುದು ಇದು ಯಶಸ್ಸಿನತ್ತ ಸಾಗುತ್ತಿರುವುದಕ್ಕೆ ನಿದರ್ಶನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.