ADVERTISEMENT

ಹಣಕಾಸು ಸಾಕ್ಷರತೆ | ನಿಮ್ಮ ಹಣ ಸೋಮಾರಿಯಾಗದಿರಲಿ...

ರಾಜೇಶ್ ಕುಮಾರ್ ಟಿ. ಆರ್.
Published 20 ಜುಲೈ 2025, 23:30 IST
Last Updated 20 ಜುಲೈ 2025, 23:30 IST
ರಾಜೇಶ್ ಕುಮಾರ್ ಟಿ.ಆರ್.
ರಾಜೇಶ್ ಕುಮಾರ್ ಟಿ.ಆರ್.   

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರ ಕಡಿತ ಮಾಡಿರುವ ಬೆನ್ನಲ್ಲೇ ಬ್ಯಾಂಕ್‌ಗಳು ಉಳಿತಾಯ ಖಾತೆ ಬಡ್ಡಿ ದರ ಇಳಿಸಿವೆ. ಎಸ್‌ಬಿಐ ತನ್ನಲ್ಲಿನ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನು ಶೇ 2.5ಕ್ಕೆ ಇಳಿಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಶೇ 2.75ಕ್ಕೆ ತಗ್ಗಿಸಿವೆ. ಬಡ್ಡಿ ದರ ಇಳಿಕೆಯ ಈ ಕಾಲದಲ್ಲಿ ಪರಿಶ್ರಮದಿಂದ ಸಂಪಾದಿಸಿದ ದುಡ್ಡನ್ನು ಬ್ಯಾಂಕ್‌ನ ಖಾತೆಯಲ್ಲಿಟ್ಟು ಸುಮ್ಮನೆ ಕುಳಿತರೆ ದುಡ್ಡು ಮೌಲ್ಯ ಕಳೆದುಕೊಳ್ಳುತ್ತದೆ. ಬೆಲೆ ಏರಿಕೆಯು (ಹಣದುಬ್ಬರ) ಸದ್ದಿಲ್ಲದೆ ನಮ್ಮ ಹಣವನ್ನು ಕರಗಿಸುತ್ತಿರುತ್ತದೆ. ಇವತ್ತು ₹1 ಸಾವಿರಕ್ಕೆ ಸಿಗುವ ವಸ್ತುವನ್ನು ಹತ್ತು ವರ್ಷಗಳ ನಂತರ ಖರೀದಿಸಬೇಕಾದರೆ ₹2 ಸಾವಿರ ಬೇಕಾಗುತ್ತದೆ. ಶೇ 7ರಷ್ಟು ಹಣದುಬ್ಬರ ಲೆಕ್ಕ ಹಾಕಿದರೂ ದುಡ್ಡು ಈ ಪ್ರಮಾಣದಲ್ಲಿ ಮೌಲ್ಯ ಕಳೆದುಕೊಳ್ಳುತ್ತಾ ಹೋಗುತ್ತದೆ. ಹೆಚ್ಚು ರಿಸ್ಕ್ ಇಲ್ಲದ, ಬೇಕಾದಾಗ ಹಣ ಪಡೆಯಲು ಆಗುವ, ಉಳಿತಾಯ ಖಾತೆಗಿಂತ ಹೆಚ್ಚು ಗಳಿಕೆ ತಂದುಕೊಡುವ ಹೂಡಿಕೆಗಳ ಬಗ್ಗೆ ‌ತಿಳಿಯೋಣ.

ನಿಶ್ಚಿತ ಠೇವಣಿಗಳು: ಬಂಡವಾಳವನ್ನು ಸುರಕ್ಷಿತವಾಗಿಟ್ಟುಕೊಂಡು ಒಂದಿಷ್ಟು ಗಳಿಕೆಯನ್ನೂ ಪಡೆಯುತ್ತ, ಬೇಕಾದಾಗ ಹಣ ಪಡೆದುಕೊಳ್ಳಲು ಒಳ್ಳೆಯ ಆಯ್ಕೆಗಳಲ್ಲಿ ನಿಶ್ಚಿತ ಠೇವಣಿ ಪ್ರಮುಖವಾದುದು. ಉಳಿತಾಯ ಖಾತೆಯಲ್ಲಿ ಶೇ 2ರಿಂದ ಶೇ 3ರಷ್ಟು ಬಡ್ಡಿ ಸಿಕ್ಕರೆ ನಿಶ್ಚಿತ ಠೇವಣಿಯಲ್ಲಿ ಶೇ 5ರಿಂದ ಶೇ 8ರವರೆಗೂ ಗಳಿಕೆ ನಿರೀಕ್ಷಿಸಬಹುದು. ಹಲವು ಬ್ಯಾಂಕ್‌ಗಳು ಈಗಲೂ ನಿಶ್ಚಿತ ಠೇವಣಿ ಮೇಲೆ ಶೇ 8ರಿಂದ ಶೇ 8.5ರವರೆಗೆ ಬಡ್ಡಿ ನೀಡುತ್ತಿವೆ. ನಿಶ್ಚಿತ ಠೇವಣಿಯಲ್ಲಿ ನಿಮ್ಮ ಹಣಕ್ಕೆ ಲಾಕ್‌–ಇನ್ ಅವಧಿ ಇರುತ್ತದೆ. ಅವಧಿಗೂ ಮುನ್ನ ನಿಶ್ಚಿತ ಠೇವಣಿ ಹಿಂಪಡೆದರೆ ಬ್ಯಾಂಕ್‌ಗಳು ಶೇ 1ರಷ್ಟು ದಂಡ ವಿಧಿಸುತ್ತವೆ. ಆದರೆ ಇಲ್ಲಿ ದುಡ್ಡು ಸುರಕ್ಷಿತವಾಗಿರುವ ಜೊತೆಗೆ ಬೇಕಾದಾಗ ಹಣ ಸಿಗುತ್ತದೆ.

ಸ್ವೀಪ್ ಇನ್ ಫಿಕ್ಸೆಡ್ ಡೆಪಾಸಿಟ್: ಅವಧಿಗೂ ಮೊದಲು ನಿಶ್ಚಿತ ಠೇವಣಿಯಿಂದ (ಎಫ್‌.ಡಿ) ಹಣ ಹಿಂಪಡೆದರೆ ಶುಲ್ಕ ಇಲ್ಲದಿರುವ ಸೌಲಭ್ಯವನ್ನು ಬ್ಯಾಂಕಿಂಗ್ ಭಾಷೆಯಲ್ಲಿ ‘ಸ್ವೀಪ್ ಇನ್ ಎಫ್‌.ಡಿ’ ಎಂದು ಕರೆಯುತ್ತಾರೆ. ಆದರೆ ಇಂತಹ ಎಫ್‌.ಡಿ.ಗಳಿಂದ ಅವಧಿಗೂ ಮುನ್ನ ಹೂಡಿಕೆ ವಾಪಸ್ ಪಡೆದಾಗ ಕಡಿಮೆ ಬಡ್ಡಿ ಸಿಗುತ್ತದೆ.

ADVERTISEMENT

ಉದಾಹರಣೆಗೆ, ಬ್ಯಾಂಕ್‌ ಒಂದರಲ್ಲಿ 1 ವರ್ಷದ ಸ್ವೀಫ್ ಇನ್ ಎಫ್.ಡಿ.ಗೆ ಶೇ 7ರ ಬಡ್ಡಿ ದರವಿದ್ದು, 6 ತಿಂಗಳ ಸ್ವೀಪ್ ಇನ್ ಎಫ್.ಡಿ.ಗೆ ಶೇ 6ರ ಬಡ್ಡಿ ದರವಿದೆ ಎಂದು ಭಾವಿಸಿ. ಇಂತಹ ಸಂದರ್ಭದಲ್ಲಿ ನೀವು ಒಂದು ವರ್ಷಕ್ಕೆ ಸ್ವೀಪ್ ಇನ್ ಎಫ್.ಡಿ. ಮಾಡಿಸಿ 6 ತಿಂಗಳಿನಲ್ಲೇ ಅದನ್ನು ಹಿಂಪಡೆದರೆ ಶೇ 6ರಷ್ಟು ಮಾತ್ರ ಬಡ್ಡಿ ಸಿಗುತ್ತದೆ.

ಲಿಕ್ವಿಡ್ ಎಂ.ಎಫ್‌: ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್‌) ಅಗತ್ಯವಿದ್ದಾಗ ಹಣವನ್ನು ಹಿಂಪಡೆಯುವ ಜೊತೆಗೆ ಹಣದ ಮೌಲ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶವಿರುತ್ತದೆ. ಈ ಫಂಡ್‌ಗಳಲ್ಲಿ ಶೇ 5ರಿಂದ ಶೇ 6ರಷ್ಟು ಗಳಿಕೆ ನಿರೀಕ್ಷಿಸಬಹುದು. ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಲ್ಲಿ ತೆರಿಗೆ ಅನುಕೂಲ ಪಡೆಯಬಹುದು. ಪ್ರತಿ ಬಾರಿ ಲಿಕ್ವಿಡ್ ಮ್ಯೂಚುವಲ್ ಫಂಡ್‌ನಿಂದ ಹಣ ತೆಗೆದಾಗ ಅಸಲಿನ ಮೊತ್ತ ಮತ್ತು ಗಳಿಕೆಯ ಮೊತ್ತವನ್ನು ಪ್ರತ್ಯೇಕಿಸಲಾಗುತ್ತದೆ. ಹಾಗಾಗಿ ಇಲ್ಲಿ ನಗದೀಕರಣ ಮಾಡುವ ಪೂರ್ತಿ ಮೊತ್ತಕ್ಕೆ ತೆರಿಗೆ ಬರುವುದಿಲ್ಲ. ಅಲ್ಲದೆ ಲಿಕ್ವಿಡ್ ಫಂಡ್ ಹೂಡಿಕೆಗಳಿಂದ ನಷ್ಟ ಉಂಟಾದರೆ ಅದನ್ನು ಬೇರೆ ಗಳಿಕೆಗಳೊಂದಿಗೆ ಸರಿದೂಸಲು ಅವಕಾಶವಿದೆ.

ಒಂದೊಮ್ಮೆ ಹೆಚ್ಚು ನಷ್ಟವಾಗಿದ್ದರೆ ಅದನ್ನು 8 ವರ್ಷಗಳವರೆಗೆ ಮುಂದಕ್ಕೆ ಒಯ್ದು ಹೊಂದಾಣಿಕೆ ಮಾಡಲು ಅವಕಾಶವಿದೆ. ಲಿಕ್ವಿಡ್ ಫಂಡ್‌ಗಳನ್ನು ಮಾರಾಟ ಮಾಡಿದ ಒಂದು ದಿನದ ಒಳಗಾಗಿ ನಿಮಗೆ ಹಣ ಲಭಿಸುತ್ತದೆ. ಆದರೆ ಹೂಡಿಕೆ ಮಾಡಿದ ಮೊದಲ ವಾರದಲ್ಲೇ ತೆಗೆದರೆ ಸಣ್ಣ ಶುಲ್ಕ ಅನ್ವಯಿಸುತ್ತದೆ. ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಖಂಡಿತವಾಗಿ ಉಳಿತಾಯ ಖಾತೆಗಿಂತ ಹೆಚ್ಚಿನ ಗಳಿಕೆ ತಂದುಕೊಡಲು ಶಕ್ತವಾಗಿವೆ.

ಅಲ್ಟ್ರಾ ಶಾರ್ಟ್ ಟರ್ಮ್ ಮ್ಯೂಚುವಲ್ ಫಂಡ್ಸ್: ಉಳಿತಾಯ ಖಾತೆ ಮತ್ತು ಲಿಕ್ಟಿಡ್ ಮ್ಯೂಚುವಲ್ ಫಂಡ್ಸ್‌ಗಿಂತ ಹೆಚ್ಚಿನ ಗಳಿಕೆಯನ್ನು ಅಲ್ಟ್ರಾ ಶಾರ್ಟ್ ಟರ್ಮ್ (ಅಲ್ಪಾವಧಿ) ಮ್ಯೂಚುವಲ್ ಫಂಡ್‌ಗಳಲ್ಲಿ ನಿರೀಕ್ಷೆ ಮಾಡಬಹುದು. ಆದರೆ ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳಿಗಿಂತ ಕೊಂಚ ಹೆಚ್ಚು ರಿಸ್ಕ್ ಇದರಲ್ಲಿರುತ್ತದೆ. 3ರಿಂದ 12 ತಿಂಗಳಿಗೆ ಹಣವನ್ನು ಇರಿಸಲು ಈ ಫಂಡ್‌ಗಳು ಸೂಕ್ತ. ಅಲ್ಟ್ರಾ ಶಾರ್ಟ್ ಟರ್ಮ್ ಮ್ಯೂಚುವಲ್ ಫಂಡ್‌ಗಳಲ್ಲಿ ಶೇ 6.5ರಿಂದ ಶೇ 7.5ರವರೆಗೆ ಗಳಿಕೆ ನಿರೀಕ್ಷಿಸಬಹುದು. ಹಣದ ಅಗತ್ಯವಿದ್ದಾಗ 1ರಿಂದ 3 ದಿನಗಳಲ್ಲಿ ನಗದೀಕರಣ ಸಾಧ್ಯ.

ಆರ್ಬಿಟ್ರಾಜ್ ಮ್ಯೂಚುವಲ್ ಫಂಡ್ಸ್: ಕಡಿಮೆ ಅನಿಶ್ಚಿತತೆ ಮತ್ತು ತೆರಿಗೆ ಅನಕೂಲ ಬಯಸುವ ಸಾಂಪ್ರದಾಯಿಕ ಹೂಡಿಕೆದಾರರಿಗೆ ಆರ್ಬಿಟ್ರಾಜ್ ಮ್ಯೂಚುವಲ್ ಫಂಡ್‌ಗಳು ಸರಿಹೊಂದುತ್ತವೆ. ಈ ಫಂಡ್‌ಗಳಲ್ಲಿ ಶೇ 6ರಿಂದ ಶೇ 7ರಷ್ಟು ಗಳಿಕೆ ನಿರೀಕ್ಷಿಸಬಹುದಾದರೂ, ಹೂಡಿಕೆಯು ಷೇರು ಮಾರುಕಟ್ಟೆ ಆಧಾರಿತವಾಗಿರುವ ಕಾರಣ ಖಚಿತವಾಗಿ ಇಂತಿಷ್ಟೇ ಲಾಭ ದಕ್ಕುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆರ್ಬಿಟ್ರಾಜ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಒಂದು ವರ್ಷದೊಳಗೆ ನಗದೀಕರಣ ಮಾಡಿಕೊಂಡರೆ ಗಳಿಕೆ ಮೇಲೆ ಶೇ 20ರಷ್ಟು ತೆರಿಗೆ ಅನ್ವಯಿಸುತ್ತದೆ. ಆದರೆ ಒಂದು ವರ್ಷದ ನಂತರ ನಗದೀಕರಣ ಮಾಡಿದರೆ ಶೇ 12.5ರಷ್ಟು ತೆರಿಗೆ ಬರುತ್ತದೆ. ಈ ಫಂಡ್‌ಗಳಲ್ಲಿ ತೊಡಗಿಸಿದ ಹಣವನ್ನು ಅಗತ್ಯವಿದ್ದಾಗ 1ರಿಂದ 3 ದಿನಗಳ ಒಳಗಾಗಿ ವಾಪಸ್ ಪಡೆಯಲು ಸಾಧ್ಯ.

ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್: ಆರ್‌ಬಿಐ ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ಸ್‌ನ ಪ್ರಸ್ತುತ ಬಡ್ಡಿ ದರ ಶೇ 7.15ರಷ್ಟಿದೆ. ಆರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ. ಈ ಹೂಡಿಕೆಯಲ್ಲಿ 7 ವರ್ಷಗಳ ಲಾಕಿನ್ ಅವಧಿ ಇದೆ. ಆದರೆ ಹಿರಿಯ ನಾಗರಿಕರು ಅವಧಿಗೂ ಮುನ್ನ ಹಣ ಹಿಂಪಡೆಯಲು ಸಾಧ್ಯವಿದೆ. ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದು ಈ ಹೂಡಿಕೆಯ ಪ್ಲಸ್ ಪಾಯಿಂಟ್.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ (ಪಿಒಎಂಐಎಸ್) ಕೇಂದ್ರ ಸರ್ಕಾರದ ಖಾತರಿ ಇದೆ. ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಕನಿಷ್ಠ ₹1 ಸಾವಿರದಿಂದಲೂ ಹೂಡಿಕೆ ಸಾಧ್ಯ. ಒಂಟಿ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ ಗರಿಷ್ಠ ₹15 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಸದ್ಯ ಬಡ್ಡಿ ಶೇ 7.4ರಷ್ಟಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗುತ್ತದೆ. ಪಿಒಎಂಐಎಸ್‌ನಲ್ಲಿ ಹಣ ಹಾಕಿದವರಿಗೆ ಪ್ರತಿ ತಿಂಗಳು ನಿಶ್ಚಿತ ಆದಾಯ ದೊರಕುತ್ತದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ₹15 ಲಕ್ಷ ತೊಡಗಿಸಿದರೆ ಮಾಸಿಕ ₹9250 ದೊರಕುತ್ತದೆ. ಅಂಚೆ ಕಚೇರಿಗಳಲ್ಲಿ ಈ ಯೋಜನೆ ಮಾಡಿಸಬಹುದು. ಅಗತ್ಯವಿದೆ ಎಂದಾಗ ಹೂಡಿಕೆ ನಗದೀಕರಣ ಮಾಡಬಹುದು. ಆದರೆ ಅದಕ್ಕೆ ದಂಡ ಶುಲ್ಕ ಅನ್ವಯಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.