ರಾಜೇಶ್ ಕುಮಾರ್ ಟಿ.ಆರ್.
ರೆಪೊ ದರ ಕಡಿತಗೊಳಿಸುವ ಮೂಲಕ ಸಾಲ ಪಡೆದಿರುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿಹಿಸುದ್ದಿ ನೀಡಿದೆ. ಪ್ರಸ್ತುತ ರೆಪೊ ದರ ಶೇ 6.25ರಿಂದ ಶೇ 6ಕ್ಕೆ ಇಳಿಕೆಯಾಗಿದೆ. ಆರ್‌ಬಿಐನ ಈ ತೀರ್ಮಾನದಿಂದ ಈಗಾಗಲೇ ಸಾಲ ಪಡೆದಿರುವ ಗ್ರಾಹಕರಿಗೆ ಬಡ್ಡಿದರ ಇಳಿಕೆಯ ಲಾಭ ದೊರಕಿದರೆ, ಹೊಸದಾಗಿ ಸಾಲ ಪಡೆದುಕೊಳ್ಳುವವರಿಗೆ ಬಡ್ಡಿ ಹೊರೆ ಕೊಂಚ ತಗ್ಗಲಿದೆ.
ಆರ್‌ಬಿಐ ರೆಪೊ ದರವನ್ನು 2020ರ ಮೇ ತಿಂಗಳಿನಿಂದ 2022ರ ಏಪ್ರಿಲ್ ಅವಧಿಯಲ್ಲಿ ಶೇ 4ಕ್ಕೆ ಇಳಿಕೆ ಮಾಡಿತ್ತು. ನಂತರ 2022ರ ಏಪ್ರಿಲ್‌ನಿಂದ 2023ರ ಫೆಬ್ರುವರಿ ಅವಧಿಯಲ್ಲಿ ಹಂತ ಹಂತವಾಗಿ ಶೇ 6.5ರ ವರೆಗೆ ಏರಿಕೆ ಮಾಡಿತ್ತು. ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಶೇ 0.25ರಷ್ಟು ಮತ್ತು ಈ ತಿಂಗಳಿನಲ್ಲಿ ಶೇ 0.25ರಷ್ಟು ಬಡ್ಡಿದರ ಇಳಿಕೆ ಮಾಡಿದೆ. ಬನ್ನಿ ರೆಪೊ ದರ ಇಳಿಕೆಯಿಂದ ಸಾಲ ಪಡೆದ ಗ್ರಾಹಕರಿಗೆ ಎಷ್ಟರಮಟ್ಟಿಗೆ ಬಡ್ಡಿ ಹೊರೆ ತಗ್ಗುತ್ತದೆ ಎನ್ನುವುದನ್ನು ಪ್ರಾಯೋಗಿಕ ಉದಾಹರಣೆಗಳ ಮೂಲಕ ತಿಳಿಯೋಣ.
ರೆಪೊ ದರ ಎಂದರೇನು?: ಯಾವುದೇ ಬ್ಯಾಂಕ್‌ಗೆ ಎರಡು ರೀತಿಯಲ್ಲಿ ಬಂಡವಾಳ ಸಿಗುತ್ತದೆ. ಒಂದನೆಯದ್ದು ಗ್ರಾಹಕರು ಇಡುವ ಠೇವಣಿ ಮೂಲಕ; ಎರಡನೆಯದ್ದು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ. ಗ್ರಾಹಕರಿಂದ ಪಡೆದ ಠೇವಣಿಗಳಿಗೆ ಬ್ಯಾಂಕ್ ಕಾಲ ಕಾಲಕ್ಕೆ ನಿಗದಿತ ಬಡ್ಡಿ ನೀಡಬೇಕಾಗುತ್ತದೆ. ಅದೇ ರೀತಿ ಆರ್‌ಬಿಐನಿಂದ ಪಡೆದ ಸಾಲಕ್ಕೂ ಬ್ಯಾಂಕ್‌ಗಳು ಬಡ್ಡಿ ನೀಡಬೇಕಾಗುತ್ತದೆ.
ಸರಳವಾಗಿ ಹೇಳುವುದಾದರೆ ಆರ್‌ಬಿಐನಿಂದ ಬ್ಯಾಂಕ್‌ಗಳು ಪಡೆದುಕೊಳ್ಳುವ ಸಾಲಕ್ಕೆ ನಿಗದಿ ಮಾಡುವ ಬಡ್ಡಿದರವೇ ರೆಪೊ ದರ. ದೇಶದ ಅರ್ಥ ವ್ಯವಸ್ಥೆಯ ಸ್ಥಿತಿಗತಿಗೆ ಅನುಗುಣವಾಗಿ ಆರ್‌ಬಿಐ, ರೆಪೊ ದರ ಏರಿಸುವ ಅಥವಾ ಇಳಿಸುವ ನಿರ್ಧಾರ ತೆಗೆದುಕೊಳ್ಳುತ್ತದೆ. ರೆಪೊ ದರ ತಗ್ಗಿದರೆ ಗೃಹ, ವಾಹನ, ವೈಯಕ್ತಿಕ ಸಾಲ ಸೇರಿ ಪ್ರಮುಖ ಸಾಲಗಳ ಬಡ್ಡಿದರ ಇಳಿಕೆಯಾಗುತ್ತದೆ.
ಗೃಹ ಸಾಲದ ಇಎಂಐ ಎಷ್ಟು ತಗ್ಗಲಿದೆ?:
ಉದಾಹರಣೆಗೆ ವ್ಯಕ್ತಿಯೊಬ್ಬರು ₹50 ಲಕ್ಷ ಸಾಲವನ್ನು 20 ವರ್ಷದ ಅವಧಿಗೆ ಶೇ 9ರ ಬಡ್ಡಿದರದಲ್ಲಿ ಪಡೆದಿದ್ದು, ಅವರ ತಿಂಗಳ ಇಎಂಐ ಮೊತ್ತ ₹44,986 ಅಂದುಕೊಳ್ಳೊಣ. ಇದೀಗ ಆರ್‌ಬಿಐ ಎರಡು ಬಾರಿ (25+25= 50) ಬಡ್ಡಿ ಇಳಿಕೆ ಮಾಡಿರುವ ಕಾರಣ ಗೃಹ ಸಾಲದ ಬಡ್ಡಿದರ ಶೇ 8.5ಕ್ಕೆ ಇಳಿಕೆಯಾಗುತ್ತದೆ ಎಂದು ಭಾವಿಸೋಣ. ಅದರಂತೆ ಇಎಂಐ ಮೊತ್ತ ₹44,986ರಿಂದ ₹43,391ಕ್ಕೆ ಇಳಿಕೆಯಾಗುತ್ತದೆ. ಅಂದರೆ ತಿಂಗಳ ಇಎಂಐ ಮೊತ್ತದಲ್ಲಿ ₹1,595 ತಗ್ಗಲಿದೆ. ವರ್ಷಕ್ಕೆ ₹19,140 ಉಳಿತಾಯವಾದರೆ, ಸಂಪೂರ್ಣ ಸಾಲದ ಅವಧಿಗೆ ಈ ಬಡ್ಡಿದರ ಮುಂದುವರಿದರೆ ಸುಮಾರು ₹3.8 ಲಕ್ಷ ಉಳಿತಾಯವಾಗುತ್ತದೆ.
ಈ ಅಂಶಗಳು ಗೊತ್ತಿರಲಿ?:
ರೆಪೊ ದರದಲ್ಲಿ ಸಾಲ ಪಡೆದವರಿಗೆ ಬಡ್ಡಿದರ ಇಳಿಕೆಯ ಅನುಕೂಲ ಸಿಗಲಿದೆ. ಯಾವಾಗ ಬಡ್ಡಿದರ ತಗ್ಗಿಸಬೇಕು ಎನ್ನುವುದನ್ನು ಬ್ಯಾಂಕ್‌ಗಳು ಆರ್‌ಬಿಐ ನಿಯಮಗಳಿಗೆ ಅನುಗುಣವಾಗಿ ತೀರ್ಮಾನಿಸುತ್ತವೆ. ಎಂಸಿಎಲ್‌ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್) ಅಡಿ ಸಾಲ ಪಡೆದಿದ್ದರೆ ಬಡ್ಡಿದರ ಇಳಿಕೆಯ ವರ್ಗಾವಣೆಗೆ ಕೊಂಚ ಸಮಯ ಹಿಡಿಯಲಿದೆ.
ರೆಪೊ ದರ ಇಳಿಕೆ ಮಾಡಿದಾಗ ಗ್ರಾಹಕನಿಗೆ ಎರಡು ಆಯ್ಕೆ ಸಿಗುತ್ತವೆ. ಒಂದನೆಯದ್ದು ಬಡ್ಡಿದರ ಇಳಿಕೆಗೆ ಅನುಗುಣವಾಗಿ ಸಾಲದ ಮಾಸಿಕ ಕಂತು (ಇಎಂಐ) ತಗ್ಗಿಸಿಕೊಳ್ಳುವುದು. ಎರಡನೆಯದ್ದು ಇಎಂಐ ಮೊತ್ತ ತಗ್ಗಿಸದೆ ಸಾಲದ ಅವಧಿಯಲ್ಲಿ ತಗ್ಗಿಸುವುದು. ಆದರೆ, ನಿಮಗೆ ತಿಳಿದಿರಲಿ. ಇಎಂಐ ಮೊತ್ತ ಎಂದಿನಂತೆ ಮುಂದುವರಿಸಿದರೆ ಸಾಲದ ಅವಧಿ ಇಳಿಕೆಯಾಗಿ ಬೇಗ ಸಾಲ ತೀರಿಸಲು ಅನುಕೂಲವಾಗಲಿದೆ. ಹಾಗಾಗಿ, ಸಾಲದ ಅವಧಿ ಕಡಿಮೆ ಮಾಡಿಕೊಳ್ಳುವುದೇ ಒಳ್ಳೆಯ ಆಯ್ಕೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಚೇತರಿಕೆ ಕಂಡ ಷೇರುಪೇಟೆ
ಏಪ್ರಿಲ್ 11ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಅಲ್ಪ ಪ್ರಮಾಣದಲ್ಲಿ ಕುಸಿತ ದಾಖಲಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕ ಜಾರಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವುರಿಂದ ಶುಕ್ರವಾರ ಮಾರುಕಟ್ಟೆ ಭಾರಿ ಚೇತರಿಕೆ ಕಂಡಿತು. ಆದರೆ ವಾರದ ಗಳಿಕೆ ಅಂತ ನೋಡಿದಾಗ ಮಾರುಕಟ್ಟೆ ಸೂಚ್ಯಂಕಗಳು ಕೊಂಚ ಹಿನ್ನಡೆ ಅನುಭವಿಸಿವೆ. 75157 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.28ರಷ್ಟು ಕುಸಿತ ದಾಖಲಿಸಿದ್ದರೆ 22828 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.33ರಷ್ಟು ಕುಸಿದಿದೆ. ಇನ್ನು ಮಿಡ್‌ಕ್ಯಾಪ್ ಸೂಚ್ಯಂಕ ಶೇ 0.29ರಷ್ಟು ಇಳಿಕೆ ಕಂಡಿದ್ದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಮಾತ್ರ ಶೇ 0.13ರಷ್ಟು ಗಳಿಸಿಕೊಂಡಿದೆ.
ವಾರದ ಅವಧಿಯಲ್ಲಿ ವಲಯವಾರು ನೋಡಿದಾಗ ಎಫ್‌ಎಂಸಿಜಿ ಶೇ 3.55 ಮಾಧ್ಯಮ ಶೇ 1.03 ಮತ್ತು ಎನರ್ಜಿ ಶೇ 0.32ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಲೋಹ ವಲಯ ಶೇ 2.93 ಮಾಹಿತಿ ತಂತ್ರಜ್ಞಾನ ಶೇ 2.3 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.53 ಬ್ಯಾಂಕ್ ನಿಫ್ಟಿ ಸೂಚ್ಯಂಕ ಶೇ 0.97 ಫೈನಾನ್ಸ್ ಶೇ 0.88 ಸೇವಾ ವಲಯ ಶೇ 0.65 ಫಾರ್ಮಾ ಶೇ 0.48 ಮತ್ತು ಆಟೊ ವಲಯ ಶೇ 0.28ರಷ್ಟು ಕುಸಿದಿವೆ. ಗಳಿಕೆ–ಇಳಿಕೆ: ವಾರದ ಲೆಕ್ಕಾಚಾರದಲ್ಲಿ ನೋಡಿದರೆ ನಿಫ್ಟಿಯಲ್ಲಿ ಹಿಂದೂಸ್ಥಾನ್ ಯುನಿಲಿವರ್ ಶೇ 5.44 ಟೈಟನ್ ಶೇ 4.99 ನೆಸ್ಲೆ ಇಂಡಿಯಾ ಶೇ 4.23 ಪವರ್ ಗ್ರಿಡ್ ಕಾರ್ಪೊರೇಷನ್ ಶೇ 3.54 ಜಿಯೊ ಫೈನಾನ್ಶಿಯಲ್ ಶೇ 3.51 ಸಿಪ್ಲಾ ಶೇ 3.28 ಎಟರ್ನಲ್ ಲಿಮಿಟೆಡ್ ಶೇ 3.06 ಐಟಿಸಿ ಶೇ 2.99 ಎನ್‌ಟಿಪಿಸಿ ಶೇ 2.64 ಬಜಾಜ್ ಫೈನಾನ್ಸ್ ಶೇ 2.36 ಐಷರ್ ಮೋಟರ್ಸ್ ಶೇ 2.18 ಒಎನ್‌ಜಿಸಿ ಶೇ 1.92ರಷ್ಟು ಗಳಿಸಿಕೊಂಡಿವೆ. ಟ್ರೆಂಟ್ ಶೇ 14.05 ಟಾಟಾ ಸ್ಟೀಲ್ ಶೇ 4.98 ಎಲ್ ಆ್ಯಂಡ್ ಟಿ ಶೇ 4.36 ಟಾಟಾ ಮೋಟರ್ಸ್ ಶೇ 3.06 ಟೆಕ್ ಮಹೀಂದ್ರ ಶೇ 2.99 ಇನ್ಫೊಸಿಸ್ ಶೇ 2.87 ವಿಪ್ರೊ ಶೇ 2.62 ಶ್ರೀರಾಮ್ ಫೈನಾನ್ಸ್ ಶೇ 2.55 ಜೆಎಸ್‌ಡಬ್ಲ್ಯು ಸ್ಟೀಲ್ ಶೇ 2.33 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 2.14 ಟಿಸಿಎಸ್ ಶೇ 2.04 ಮತ್ತು ಎಕ್ಸಿಸ್ ಬ್ಯಾಂಕ್ ಶೇ 1.83ರಷ್ಟು ಕುಸಿದಿವೆ.
ಮುನ್ನೋಟ: ಈ ವಾರ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ ವಿಪ್ರೊ ಏಂಜಲ್ ಒನ್ ಇನ್ಫೊಸಿಸ್ ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಎಚ್‌ಡಿಎಫ್‌ಸಿ ಎಎಂಸಿ ಎಚ್‌ಡಿಎಫ್‌ಸಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಯೆಸ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಪ್ರತಿ ಸುಂಕ ಜಾರಿಗೆ ನೀಡಿರುವ ವಿರಾಮದ ಬೆಳವಣಿಗೆ ಇನ್ನಿತರ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.