ADVERTISEMENT

ಹಣಕಾಸು ಸಾಕ್ಷರತೆ: ಸಾಲ ಪಡೆಯುವಾಗ ಈ ನಿಯಮಗಳನ್ನು ಮರೆಯದಿರಿ

ಪ್ರಮೋದ್
Published 13 ಡಿಸೆಂಬರ್ 2021, 5:03 IST
Last Updated 13 ಡಿಸೆಂಬರ್ 2021, 5:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಲ ಎಂದಾಕ್ಷಣ ‘ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ, ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂಬ ಸರ್ವಜ್ಞನ ಮಾತು ನೆನಪಿಗೆ ಬರುತ್ತದೆ. ಆದರೆ, ಮನೆ-ವಾಹನ ಖರೀದಿ, ಬಿಸಿನೆಸ್, ವೈದ್ಯಕೀಯ ತುರ್ತು ಹೀಗೆ ಅನೇಕ ಕಾರಣಗಳಿಗೆ ಸಾಲ ಪಡೆಯುವುದು ಅಗತ್ಯ. ಸಾಲ ಮಾಡುವುದು ತಪ್ಪಲ್ಲ. ಆದರೆ, ಸರಿಯಾದ ಮಾಹಿತಿ ಇಲ್ಲದೆ, ಅಳತೆ ಅಂದಾಜಿಲ್ಲದೆ ಸಾಲ ತೆಗೆದುಕೊಂಡರೆ ಅದು ಮುಳುವಾಗುತ್ತದೆ. ಸಾಲ ಪಡೆಯುವಾಗ ನಾವು ಅನುಸರಿಸಬೇಕಾದ ನಿಮಯಗಳು ಯಾವುವು? ಆ ಬಗ್ಗೆ ಒಂದು ನೋಟ ಇಲ್ಲಿದೆ.

ಯಾವ ಉದ್ದೇಶಕ್ಕೆ ಸಾಲ?: ಎಲ್ಲದಕ್ಕೂ ಸುಲಭದಲ್ಲಿ ಸಾಲ ಸಿಗುವ ಕಾಲವಿದು. ಆದರೆ, ಸಾಲ ಸಿಗುತ್ತದೆ ಎಂದುಎಲ್ಲವನ್ನೂ ಸಾಲದಲ್ಲೇ ಖರೀದಿ ಮಾಡುವ ಗೋಜಿಗೆ ಹೋಗಬೇಡಿ. ನೀವು ಮಾಡುವ ಸಾಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದಾದರೆ ತೊಂದರೆ ಇಲ್ಲ. ಮದುವೆ, ವಿದೇಶ ಪ್ರಯಾಣದಂತಹ ಉದ್ದೇಶಗಳಿಗೆ ಅನುತ್ಪಾದಕ ಸಾಲ ಮಾಡಿದರೆ ಅದು ನಿಮ್ಮನ್ನು ಕಾಡುತ್ತದೆ. ಸಾಲದ ವಿಚಾರಕ್ಕೆ ಬಂದರೆ ‘ಹಾಸಿಗೆ ಇರುವುದಕ್ಕಿಂದ ಕಡಿಮೆ ಕಾಲು ಚಾಚಬೇಕು’. ನಿಮ್ಮ ಒಟ್ಟಾರೆ ಸಾಲದ ಕಂತುಗಳ ಮೊತ್ತವು ಮಾಸಿಕ ನಿವ್ವಳ ಆದಾಯದ ಶೇಕಡ 50ಕ್ಕಿಂತ ಹೆಚ್ಚಿಗೆ ಇರಬಾರದು.

ಯಾವುದಕ್ಕೆ ಎಷ್ಟು ಸಾಲ ಮಾಡಬೇಕು?: ನಿಮ್ಮ ಎಲ್ಲ ಸಾಲಗಳ ಮಾಸಿಕ ಕಂತಿನ ಮೊತ್ತ (ಇಎಂಐ) ನಿಮ್ಮ ತಿಂಗಳ ಆದಾಯದ ಶೇ 50ಕ್ಕಿಂತ ಹೆಚ್ಚಿಗೆ ಇರಬಾರದು. ಅಂದರೆ ನಿಮ್ಮ ಸಂಬಳ ಒಂದು ಲಕ್ಷ ರೂಪಾಯಿ ಆಗಿದ್ದರೆ ನಿಮ್ಮ ಎಲ್ಲ ಸಾಲಗಳ ಒಟ್ಟು ಮಾಸಿಕ ಕಂತಿನ (ಇಎಂಐ) ಮೊತ್ತ ₹ 50 ಸಾವಿರ ಮೀರಬಾರದು.

ADVERTISEMENT

ಗೃಹ ಸಾಲ ನಿಯಮ: ನೀವು ಮನೆ ಕಟ್ಟಿಸಲು ಅಥವಾ ಮನೆ ಖರೀದಿಸಲು ಮಾಡುವ ಸಾಲದ ಮೊತ್ತವು ನಿಮ್ಮ ವಾರ್ಷಿಕ ಆದಾಯದ ಐದು ಪಟ್ಟು ಮಾತ್ರ ಇರಬೇಕು. ಇನ್ನು ಮನೆ ಕೊಳ್ಳುವಾಗ ಕನಿಷ್ಠ ಶೇ 25ರಷ್ಟು ಡೌನ್ ಪೇಮೆಂಟ್ ಮಾಡಿದರೆ ಒಳಿತು. ನಿಮ್ಮ ಮಾಸಿಕ ಆದಾಯದ ಶೇ 30ರಷ್ಟು ಮಾತ್ರ ನಿಮ್ಮ ಗೃಹ ಸಾಲದ ಇಎಂಐ ಆಗಿರಬೇಕು. ಗರಿಷ್ಠ 20 ವರ್ಷಕ್ಕಿಂತ ಹೆಚ್ಚು ಅವಧಿಗೆ ಸಾಲ ಪಡೆಯುವುದು ಬೇಡ. ಸಾಧ್ಯವಾದರೆ ಅವಧಿಗೆ ಮುನ್ನ ಸಾಲ ಮರುಪಾವತಿಗೆ ಮುಂದಾಗಬೇಕು.

ವಾಹನ ಸಾಲ ನಿಯಮ: ವಾಹನ ಸಾಲ ಪಡೆಯುವಾಗ ಕನಿಷ್ಠ ಶೇ 20ರಷ್ಟು ಡೌನ್ ಪೇಮೆಂಟ್ ಮಾಡಿ. ಗರಿಷ್ಠ ನಾಲ್ಕು ವರ್ಷಕ್ಕೆ ಸಾಲ ಪಡೆಯಿರಿ. ನಿಮ್ಮ ಮಾಸಿಕ ಆದಾಯದ ಶೇ 10ರಷ್ಟು ಮಾತ್ರ ಸಾಲದ ಇಎಂಐ ಆಗಿರಬೇಕು.

ವೈಯಕ್ತಿಕ ಸಾಲ ನಿಯಮ: ವೈಯಕ್ತಿಕ ಸಾಲದ ಇಎಂಐ ನಿಮ್ಮ ಮಾಸಿಕ ನಿವ್ವಳ ಆದಾಯದ ಶೇ 10ಕ್ಕಿಂತ ಹೆಚ್ಚಿಗೆ ಇರಬಾರದು. ವೈಯಕ್ತಿಕ ಸಾಲಕ್ಕೆ ಗರಿಷ್ಠ ಬಡ್ಡಿ ದರ ಇರುತ್ತದೆ. ಇದರ ಬಡ್ಡಿ ದರ ಕೆಲವೊಮ್ಮೆ ಶೇ 20ಕ್ಕಿಂತಲೂ ಹೆಚ್ಚಿರುತ್ತದೆ. ತುರ್ತು ಅಗತ್ಯಗಳಿಗೆ ಮಾತ್ರ ಇದನ್ನು ಪರಿಗಣಿಸಬೇಕು.

ಗೃಹ ಸಾಲ ತೀರಿಸಲು ವೈಯಕ್ತಿಕ ಸಾಲ ಬೇಡ: ವೈಯಕ್ತಿಕ ಸಾಲದ ಬಡ್ಡಿ ದರಕ್ಕೆ ಹೋಲಿಕೆ ಮಾಡಿದಾಗ ಗೃಹ ಸಾಲದ ಬಡ್ಡಿದರ ಬಹಳ ಕಡಿಮೆ. ಗೃಹ ಸಾಲದ ಬಡ್ಡಿ ದರ ಶೇ 6.25ರಿಂದ ಶೇ 8ರವರೆಗೆ ಇರಬಹುದು. ಹಾಗಾಗಿ ಶೇ 12ರಿಂದ ಶೇ 20ರಷ್ಟುಬಡ್ಡಿ ಇರುವ ವೈಯಕ್ತಿಕ ಸಾಲ ಮಾಡಿ ಗೃಹ ಸಾಲ ಪಾವತಿ ಸರಿಯಲ್ಲ.

ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬೇಡ: ಅನಿರೀಕ್ಷಿತ ಸಂದರ್ಭಗಳಲ್ಲಿ ಹಣಕಾಸಿನ ಕೊರತೆ ನೀಗಿಸಲು ಕ್ರೆಡಿಟ್ ಕಾರ್ಡ್ ಬಳಸುವುದರಲ್ಲಿ ತಪ್ಪಿಲ್ಲ. ಆದರೆ ಸಾಲ ಮಾಡಿ ಖರೀದಿ ಮಾಡುವುದಕ್ಕಾಗೇ ಕ್ರೆಡಿಟ್ ಕಾರ್ಡ್ ಪಡೆದಿದ್ದೇನೆ ಎಂಬ ಧೋರಣೆ ಹಣಕಾಸಿನ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಶಾಪಿಂಗ್ ಆಸೆಗೆ ಬಿದ್ದು ಸಿಕ್ಕಾಪಟ್ಟೆ ಖರೀದಿ ಮಾಡಿದ ಬಳಿಕ ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ಮಾಡದಿದ್ದರೆ ಬಡ್ಡಿ, ಚಕ್ರಬಡ್ಡಿ ನಿಮ್ಮ ನಿದ್ದೆಗೆಡಿಸುತ್ತದೆ.

ಪೇಡೇ ಸಾಲಗಳ ಬಗ್ಗೆ ಎಚ್ಚರ: ವರ್ಷಕ್ಕೆ ಶೇ 20ರಿಂದ ಶೇ 40ರಷ್ಟು ಬಡ್ಡಿ ಪಡೆಯುವ ಸಾಲಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ದಿನಕ್ಕೆ ಒಂದು ಪರ್ಸೆಂಟ್ಬ ಬಡ್ಡಿ, ವರ್ಷಕ್ಕೆ ಶೇ 365ರಿಂದ ಶೇ 400ರಷ್ಟು ಬಡ್ಡಿ ಪಡೆಯುವ ಸಾಲಗಳ ಬಗ್ಗೆ ನೀವು ಕೇಳಿದ್ದೀರಾ? ಆಶ್ಚರ್ಯ ಅನಿಸಿದರೂ ಇಂತಹ ಅಪಾಯಕಾರಿ ಸಾಲವು ಲೋನ್ ಆ್ಯಪ್‌ಗಳ ಮೂಲಕ ಜನಸಾಮಾನ್ಯರಿಗೆ ಸಿಗುತ್ತಿದೆ. ಹಣದ ತುರ್ತು ಅಗತ್ಯವಿರುವ ಅಮಾಯಕರು ಸರಿಯಾದ ಮಾಹಿತಿ ಇಲ್ಲದೆ ಪೇಡೇ ಸಾಲಗಳ (ಸಂಬಳದ ದಿನ ಮರುಪಾವತಿ ಮಾಡುವ ಸಾಲ) ಮೊರೆ ಹೋಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ‘ನನ್ನ ಬಳಿ ಈಗ ಹಣವಿಲ್ಲ, ಈಗ ಸಾಲ ಕೊಟ್ಟರೆ ಮುಂದಿನ ತಿಂಗಳ ಸಂಬಳದಲ್ಲಿ ಬಡ್ಡಿ ಸಮೇತ ಸಾಲ ತೀರಿಸುತ್ತೇನೆ’ ಎನ್ನುವ ಲೆಕ್ಕಾಚಾರದಲ್ಲಿ ನೀಡಲಾಗುವ ಸಾಲವೇ ಪೇಡೇ ಲೋನ್. ಏಳುದಿನಗಳಿಂದ 60 ದಿನಗಳ ಅವಧಿಗೆ ಸಿಗುವ ಈ ಅಲ್ಪಾವಧಿ ಸಾಲಕ್ಕೆ ಯಾವುದೇ ಅಡಮಾನ ಇರುವುದಿಲ್ಲ. ಆದರೆ ವಿಪರೀತಿ ಬಡ್ಡಿ ದರವನ್ನು ಈ ಸಾಲಕ್ಕೆ ತೆರಬೇಕಾಗುತ್ತದೆ.

ಎರಡನೇ ವಾರ ಗಳಿಕೆ ಕಂಡ ಸೂಚ್ಯಂಕಗಳು
ಅನಿಶ್ಚಿತ ಪರಿಸ್ಥಿತಿಯ ನಡುವೆ ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಗಳಿಕೆ ಕಂಡಿವೆ. ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಕಾರಾತ್ಮಕವಾಗಿ ಕಂಡುಬಂದಿವೆ. 58,786 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.88ರಷ್ಟು ಹೆಚ್ಚಳವಾಗಿದೆ. 17,511 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.82ರಷ್ಟು ಜಿಗಿದಿದೆ.

ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟಿರುವುದು, ಕೊರೊನಾದ ಓಮೈಕ್ರಾನ್ ತಳಿಯ ಆತಂಕದಿಂದ ಹೂಡಿಕೆದಾರರು ಹೊರಬಂದಿರುವುದು, ಏಷ್ಯಾದ ಮಾರುಕಟ್ಟೆಗಳಲ್ಲೂ ಸಕಾರಾತ್ಮಕತೆ ಕಂಡುಬಂದಿರುವುದು ಸೇರಿ ಹಲವು ಅಂಶಗಳು ಜಿಗಿತಕ್ಕೆ ಕಾರಣ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 9ರಷ್ಟು ಗಳಿಕೆ ಕಂಡಿದ್ದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 6ರಷ್ಟು ಮತ್ತು ಲೋಹ ಸೂಚ್ಯಂಕ ಶೇ 5ರಷ್ಟು ಹೆಚ್ಚಳವಾಗಿವೆ. ಉಳಿದಂತೆ ಎಲ್ಲಾ ಸೂಚ್ಯಂಕಗಳುಸಕಾರಾತ್ಮಕವಾಗಿ ಕಂಡುಬಂದಿವೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೋ ಶೇ 7.5ರಷ್ಟು, ಐಟಿಸಿ ಶೇ 7ರಷ್ಟು, ಏಷ್ಯನ್ ಪೇಂಟ್ಸ್ ಶೇ 5.5ರಷ್ಟು, ಐಸಿಐಸಿಐ ಶೇ 5.5ರಷ್ಟು, ಟಾಟಾ ಸ್ಟೀಲ್ ಶೇ 5ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 5ರಷ್ಟು ಮತ್ತು ಬಜಾಜ್ ಫೈನಾನ್ಸ್ ಶೇ 5ರಷ್ಟು ಗಳಿಸಿಕೊಂಡಿವೆ. ಡಿವಿಸ್ ಲ್ಯಾಬ್ಸ್ ಶೇ 5ರಷ್ಟು, ಐಒಸಿ ಶೇ 2ರಷ್ಟು ಮತ್ತು ಸಿಪ್ಲಾ ಶೇ 2ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ದೇಶಿ ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ. ಸಾಕಷ್ಟು ಐಪಿಒಗಳು ಸಹ ಜರುಗುತ್ತಿದ್ದು, ಅಳೆದು ತೂಗಿ ಒಳ್ಳೆಯ ಕಂಪನಿಗಳನ್ನು ಮಾತ್ರ ಹೂಡಿಕೆದಾರರು ಆಯ್ಕೆ ಮಾಡಿಕೊಳ್ಳಬೇಕು. ಹೊಸದಾಗಿ ಷೇರು ಮಾರುಕಟ್ಟೆ ಪ್ರವೇಶಿಸುವವರು ಅತಿಯಾಗಿ ಮೌಲ್ಯಮಾಪನ (ಓವರ್ ವ್ಯಾಲ್ಯೂಡ್) ಹೊಂದಿರುವ ಷೇರುಗಳ ಬಗ್ಗೆ ಎಚ್ಚರದಿಂದಿರಬೇಕು. ಉತ್ತಮ ಕಂಪನಿಗಳ ಷೇರುಗಳನ್ನು ಮಾತ್ರ ಸರಿಯಾದ ಬೆಲೆಯಲ್ಲಿ ಖರೀದಿಸುವ ಬಗ್ಗೆ ಚಿಂತಿಸಬೇಕು.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.