ನಿವೃತ್ತಿ ಅಂದರೆ ವೃತ್ತಿಬದುಕಿಗೆ ಬೀಳುವ ಪೂರ್ಣವಿರಾಮ ಎಂಬ ಪರಿಕಲ್ಪನೆ ಬದಲಾಗುತ್ತಿದೆ. ನಿವೃತ್ತಿ ಅಂದರೆ ವೈಯಕ್ತಿಕ ಸ್ವಾತಂತ್ರ್ಯದ ಅವಧಿ ಎಂಬ ಆಲೋಚನೆ ಅರಳುತ್ತಿದೆ. ಅದರಲ್ಲೂ ಮುಖ್ಯವಾಗಿ, ತಮ್ಮ ಖರ್ಚು–ವೆಚ್ಚಗಳಲ್ಲಿ ರಾಜಿ ಮಾಡಿಕೊಳ್ಳಲು ಬಯಸದ ಶ್ರೀಮಂತರಿಗೆ ನಿವೃತ್ತಿಯು ಹೊಸದೊಂದರ ಆರಂಭದಂತೆ ಇರುತ್ತದೆ.
ಕೆಲವರಿಗಷ್ಟೇ ಸೀಮಿತವಾಗಿದ್ದ ‘ಅವಧಿಪೂರ್ವ ನಿವೃತ್ತಿ’ಯ ಪರಿಕಲ್ಪನೆಯು ಈಗ ಹೆಚ್ಚು ವ್ಯಾಪಕವಾಗು ತ್ತಿದೆ. ಶ್ರೀಮಂತಿಕೆಯೊಂದಿಗೆ ಆರೋಗ್ಯ ಕಾಪಾಡಿಕೊಂಡು, ಬೇಗನೆ ನಿವೃತ್ತರಾಗಿರಿ ಎಂಬ ಪರಿಕಲ್ಪನೆಯು ಹೆಚ್ಚೆಚ್ಚು ಜನಪ್ರಿಯ ಆಗುತ್ತಿದೆ. ಸಾಂಪ್ರದಾಯಿಕವಾಗಿ ಭಾರತದಲ್ಲಿ ನಿವೃತ್ತಿಯು 60 ವರ್ಷ ವಯಸ್ಸಿನವರಿಗೆ ಸಂಬಂಧಿ ಸಿದ್ದಾಗಿತ್ತು. ನಿವೃತ್ತಿಯ ನಂತರದಲ್ಲಿ ಪಿಂಚಣಿ ಹಾಗೂ ಪಿ.ಎಫ್. ಮಾತ್ರವೇ ಅವರಿಗೆ ಇರುವ ಆಸರೆ ಆಗಿತ್ತು.
ಆದರೆ ನಿವೃತ್ತಿಯು ಈಗ ಜೀವನಶೈಲಿಯ ಒಂದು ಆಯ್ಕೆಯಂತೆ ಆಗಿದೆ. ‘ಫೈರ್’ (ಹಣಕಾಸಿನ ಸ್ವಾತಂತ್ರ್ಯ, ಬೇಗನೆ ನಿವೃತ್ತಿ) ಪರಿಕಲ್ಪನೆ ಸಹ ಇದಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಈಗ ಯುವ ವೃತ್ತಿಪರರು ಹಣಕಾಸಿನ ಸ್ವಾತಂತ್ರ್ಯವನ್ನು ಸಾಧಿಸಿ, ಬೇಗನೆ ನಿವೃತ್ತಿ ಪಡೆಯಲು ಬಯಸುತ್ತಿದ್ದಾರೆ. ಬೇಗನೆ ನಿವೃತ್ತಿ ಪಡೆದು ಒಂದು ಉದ್ದೇಶಕ್ಕಾಗಿ ಕೆಲಸ ಮಾಡಲು ಅವರು ಬಯಸುತ್ತಿದ್ದಾರೆ.
ಕೆಲವು ಅಂಶಗಳು ಈ ಬದಲಾವಣೆಗೆ ಆಧಾರಸ್ತಂಭವಾಗಿ ನಿಂತಿವೆ. ಅವು ಹೀಗಿವೆ:
1) ಹಣಕಾಸಿನ ಯೋಜನೆ
2) ಆರೋಗ್ಯದ ಮೇಲೆ ಗಮನ
ಹಣಕಾಸಿನ ಭದ್ರ ಬುನಾದಿ ಹೇಗೆ?
ಬೇಗನೆ ನಿವೃತ್ತಿ ಆಗಲು ಬಯಸುವವರು ಮಾಡಬೇಕಿರುವ ಮುಖ್ಯ ಕೆಲಸ ಮುಂದಿನ ಸಾಧ್ಯತೆ ಗಳನ್ನು ಊಹಿಸಿ, ಅದಕ್ಕೆ ಅನುಗುಣವಾಗಿ ಹಣಕಾಸಿನ ನಿರ್ವಹಣೆಯಲ್ಲಿ ತೊಡಗುವುದು. ಇದ್ದಕ್ಕಿದ್ದಂತೆ ಸಿಗುವ ಲಾಭಕ್ಕಿಂತ ಇಲ್ಲಿ ಹೆಚ್ಚು ಪ್ರಯೋಜನಕ್ಕೆ ಬರುವುದು ಸ್ಥಿರವಾದ, ಶಿಸ್ತುಬದ್ಧವಾದ ನಡೆಗಳು.
ಹೂಡಿಕೆಯನ್ನು ಬೇಗನೆ ಆರಂಭಿಸಬೇಕು:
ಎ) ಹೂಡಿಕೆಗಳು ಬೇಗನೆ ಆರಂಭವಾದಾಗ ತೊಡಗಿಸಿದ ಹಣದ ಮೇಲಿನ ಬಡ್ಡಿಗೆ ಸಿಗುವ ಚಕ್ರಬಡ್ಡಿಯ ಪ್ರಯೋಜನವು ಬಹಳ ಗಣನೀಯ ಮಟ್ಟದಲ್ಲಿರುತ್ತದೆ.
ಬಿ) ಜೀವನಶೈಲಿಯ ಮೇಲೆ ಗಮನ: 25ರಿಂದ 30 ವರ್ಷ ವಯಸ್ಸಿನೊಳಗಿನ, ತಿಂಗಳಿಗೆ ₹1 ಲಕ್ಷದಿಂದ ₹2 ಲಕ್ಷದವರೆಗೆ ವೆಚ್ಚ ಇರುವ ವ್ಯಕ್ತಿಯೊಬ್ಬರ ಉದಾಹರಣೆಯನ್ನು ಪರಿಗಣಿಸೋಣ. ಇವರು 45 ವರ್ಷಕ್ಕೆ ಅಥವಾ 50 ವರ್ಷ ವಯಸ್ಸಾಗುವ ಮೊದಲು ನಿವೃತ್ತಿ ಪಡೆಯಲು ಬಯಸಿದ್ದಾರೆ. ಈಗ ಇರುವ ವೆಚ್ಚಗಳು ಇವರಿಗೆ 45 ಅಥವಾ 50 ವರ್ಷ ವಯಸ್ಸಾಗುವ ವೇಳೆಗೆ ಮೂರುಪಟ್ಟು ಹೆಚ್ಚಾಗಿರುತ್ತವೆ. ಅಂದರೆ, ವಾರ್ಷಿಕ ಹಣದುಬ್ಬರ ಪ್ರಮಾಣವು ಸರಾಸರಿ ಶೇ 6ರಷ್ಟು ಇರುತ್ತದೆ ಎಂದು ಭಾವಿಸಿ ಲೆಕ್ಕಹಾಕಿದರೆ, ತಿಂಗಳ ವೆಚ್ಚಗಳು ₹3 ಲಕ್ಷದಿಂದ ₹6 ಲಕ್ಷದವರೆಗೆ ತಲುಪಿರುತ್ತವೆ.
ಈ ವ್ಯಕ್ತಿಯು ಇದೇ ಮಟ್ಟದಲ್ಲಿ ವೆಚ್ಚಗಳನ್ನು ತನ್ನ 85ನೇ ವಯಸ್ಸಿನವರೆಗೆ ಕಾಯ್ದುಕೊಳ್ಳಬೇಕು ಎಂದಾ ದರೆ, ನಿವೃತ್ತಿಯ ಬದುಕಿಗೆ ಅಗತ್ಯವಿರುವ ಇಡುಗಂಟಿನ ಮೊತ್ತ ₹4 ಕೋಟಿಯಿಂದ ₹8 ಕೋಟಿ ಆಗುತ್ತದೆ.
ಸಿ)ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಈಕ್ವಿಟಿ ಆಧಾರಿತ ಹಣಕಾಸಿನ ಉತ್ಪನ್ನಗಳಲ್ಲಿ ಪ್ರತಿ ತಿಂಗಳು ₹25 ಸಾವಿರ ಹಣ ತೊಡಗಿಸುವ ಮೂಲಕ 20 ವರ್ಷಗಳಲ್ಲಿ ₹3.3 ಕೋಟಿಯಿಂದ ₹4.2 ಕೋಟಿಯವರೆಗೆ ಹಣ ಒಗ್ಗೂಡಿಸಲು ಸಾಧ್ಯವಿದೆ. ಹೂಡಿಕೆಯ ಮೇಲೆ ಪ್ರತಿವರ್ಷ ಶೇ 15ರಿಂದ ಶೇ 17ರವರೆಗೆ ಲಾಭ ಸಿಗಬಹುದು ಎಂಬ ಅಂದಾಜು ಇರಿಸಿಕೊಂಡು ಈ ಲೆಕ್ಕ ನೀಡಲಾಗಿದೆ. ಆದರೆ ಈ ವ್ಯಕ್ತಿಯು ಎಸ್‌ಐಪಿ ಮೊತ್ತವನ್ನು ಪ್ರತಿ ವರ್ಷ ಶೇ 10ರಷ್ಟು ಹೆಚ್ಚು ಮಾಡಿದರೆ, ಇದೇ ಅವಧಿಯಲ್ಲಿ ಅಂದಾಜು ₹6.2 ಕೋಟಿಯಿಂದ ₹7.6 ಕೋಟಿಯಷ್ಟು ಮೊತ್ತವನ್ನು ಹೊಂದಿಸಿಕೊಳ್ಳಲು ಸಾಧ್ಯವಿದೆ. ಈ ಲೆಕ್ಕಾಚಾರವು ಹೂಡಿಕೆಯನ್ನು ಬೇಗನೆ ಆರಂಭಿಸುವುದರ ಮಹತ್ವವನ್ನಷ್ಟೇ ಅಲ್ಲದೆ, ಹೂಡಿಕೆ ಮೊತ್ತವನ್ನು ನಿರಂತರವಾಗಿ ಹೆಚ್ಚಿಸುವುದರ ಮಹತ್ವವನ್ನು ಕೂಡ ಹೇಳುತ್ತಿದೆ. ಹೂಡಿಕೆ ಎಷ್ಟು ಬೇಗ ಶುರುವಾಗುತ್ತದೆಯೋ ಚಕ್ರಬಡ್ಡಿಯ ಪ್ರಯೋಜನವು ಅಷ್ಟರಮಟ್ಟಿಗೆ ಹೆಚ್ಚಿರುತ್ತದೆ.
ಡಿ) ಹೂಡಿಕೆಗಳನ್ನು ಈಕ್ವಿಟಿ, ಸಾಲಪತ್ರಗಳು, ಸರಕುಗಳು, ರಿಯಲ್ ಎಸ್ಟೇಟ್, ಹೊಸ ಉತ್ಪನ್ನ ಗಳಾದ ಆರ್‌ಇಐಟಿ (ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್) ಮೇಲೆ ಇರುವಂತೆ ಖಾತರಿಪಡಿಸಿಕೊಳ್ಳಿ. ಹೂಡಿಕೆಗಳು ಈ ಬಗೆಯಲ್ಲಿ ಇದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಲಾಭ ನಿರೀಕ್ಷಿಸಬಹುದು.
ಪ್ಯಾಸಿವ್ ಆದಾಯ ಹೊಸ ಬಗೆಯ ಪಿಂಚಣಿ ಇದ್ದಂತೆ
ಸಂಪತ್ತಿನ ಸೃಷ್ಟಿಯ ಬಗ್ಗೆ ಸಲಹೆ ನೀಡುವವರು ಈಗ ಪ್ಯಾಸಿವ್ ಆದಾಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ವೇತನ ಆದಾಯಕ್ಕೆ ಪರ್ಯಾಯವಾಗಿ ಅಥವಾ ಅದಕ್ಕೆ ಪೂರಕವಾಗಿ ಈ ಆದಾಯ ಇರಬೇಕು ಎಂದು ಅವರು ಹೇಳುತ್ತಿದ್ದಾರೆ. ಏಳು ಬಗೆಯ ಆದಾಯಗಳನ್ನು ಹೊಂದಿರಬೇಕು ಎಂಬ ಸಲಹೆಯನ್ನು ಅವರು ನೀಡುತ್ತಾರೆ. ವೇತನ ಆದಾಯ, ಉದ್ಯಮ ವಹಿವಾಟಿನ ಆದಾಯ, ಬಡ್ಡಿ ಆದಾಯ, ಡಿವಿಡೆಂಡ್ ಆದಾಯ, ಬಾಡಿಗೆ ಆದಾಯ, ಬಂಡವಾಳ ವೃದ್ಧಿ ಆದಾಯ, ರಾಯಧನ ಆದಾಯ... ಇವು ಆ ಏಳು ಬಗೆಗಳು.
ಆಸ್ತಿಗಳಲ್ಲಿ, ಚೆನ್ನಾಗಿ ಡಿವಿಡೆಂಡ್ ನೀಡುವ ಷೇರುಗಳಲ್ಲಿ, ಆರ್‌ಇಐಟಿಗಳಲ್ಲಿ ಹೂಡಿಕೆ ಮೂಲಕ, ಕೌಶಲಗಳನ್ನು ಬೆಳೆಸಿಕೊಳ್ಳುವ ಮೂಲಕ, ಆನ್‌ಲೈನ್ ಮೂಲಕ ಕೆಲವು ಸಣ್ಣಪುಟ್ಟ ವಹಿವಾಟುಗಳನ್ನು ನಡೆಸುವ ಮೂಲಕ ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬಹುದು.
ಬಜೆಟ್ ಮಾಡುವುದು ಹಾಗೂ ಹೊಣೆಗಾರಿಕೆಯಿಂದ ಖರ್ಚು ಮಾಡುವುದು
ಅಗತ್ಯಕ್ಕೆ ಸಾಕಾಗುವಷ್ಟು ವಸ್ತುಗಳನ್ನು ಮಾತ್ರವೇ ಇರಿಸಿಕೊಳ್ಳುವುದು, ಬೇಕಾಗುವಷ್ಟು ಮಾತ್ರವೇ ಖರೀದಿಸುವುದು ಈಗ ಜೀವನಶೈಲಿಗೆ ಸಂಬಂಧಿಸಿದ ಒಂದು ಟ್ರೆಂಡ್. ಅಷ್ಟೇ ಅಲ್ಲ ಅದು ಈಗ ಹಣಕಾಸಿನ ತತ್ವವೂ ಹೌದು. ಕಂಡಿದ್ದನ್ನೆಲ್ಲ ಖರೀದಿಸುವ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳುವುದರಿಂದ ನಮಗೆ ಹೆಚ್ಚಿನ ಸಂಪನ್ಮೂಲವನ್ನು ಸಂಪತ್ತು ಸೃಷ್ಟಿಗೆ ವಿನಿಯೋಗಿಸಲು ಆಗುತ್ತದೆ. ಹಣಕಾಸಿನ ಸ್ವಾವಲಂಬನೆಯನ್ನು ಸಾಧಿಸುವುದು ಅಂದರೆ ಹೆಚ್ಚೆಚ್ಚು ಸಂಪಾದಿಸುವುದು ಮಾತ್ರವೇ ಅಲ್ಲ; ಅದು ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು, ಹೆಚ್ಚಿನ ಹಣವನ್ನು ಹೂಡಿಕೆ ಮಾಡುವುದೂ ಹೌದು.
ಅವಧಿಪೂರ್ವ ನಿವೃತ್ತಿ ಅಂದರೆ ಸಾಕಷ್ಟು ಹಣ ಹೊಂದಿರುವುದಷ್ಟೇ ಅಲ್ಲ. ಅದು ಹಣದ ಜೊತೆ ಆ ಹಣವನ್ನು ಅನುಭವಿಸಲು ಒಂದಿಷ್ಟು ಜೀವನವನ್ನೂ ಉಳಿಸಿಟ್ಟುಕೊಳ್ಳುವುದು. ಹಣಕಾಸಿನ ಕಾರ್ಯತಂತ್ರಗಳನ್ನು ಆರೋಗ್ಯವರ್ಧಕ ಅಭ್ಯಾಸಗಳ ಜೊತೆ ಹೊಂದಿಸಿಕೊಳ್ಳುವ ಮೂಲಕ, ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಂಪತ್ತು, ಆರೋಗ್ಯ ಮತ್ತು ಸ್ವಾತಂತ್ರ್ಯವನ್ನು ಸಾಧಿಸಬಹುದು ಎಂಬುದನ್ನು ಇಂದಿನ ವೃತ್ತಿಪರರು ತೋರಿಸಿಕೊಡುತ್ತಿದ್ದಾರೆ.
ನಿವೃತ್ತಿ ಅಂದರೆ ಅಂತ್ಯವಲ್ಲ, ಅದು ಹೊಸದೊಂದರ ಆರಂಭ...
ನಿವೃತ್ತಿ ಮತ್ತು ಆರೋಗ್ಯ
ರಕ್ಷಣೆ ಮೊದಲು, ಸಮೃದ್ಧಿ ಆಮೇಲೆ ಎಂಬ ಮಾತೊಂದು ಇದೆ. ಆರೋಗ್ಯವನ್ನು ಉಪೇಕ್ಷೆ ಮಾಡದೆಯೇ ಸಂಪತ್ತು ಸೃಷ್ಟಿಸಿಕೊಳ್ಳಬೇಕು ಎಂಬುದನ್ನು ಇದು ಹೇಳುತ್ತದೆ.
ರೋಗ ಬಾರದಂತೆ ಕಾಳಜಿ: ಒಳ್ಳೆಯ ಆಹಾರ, ನಿಯಮಿತವಾದ ವ್ಯಾಯಾಮ, ಮುನ್ನೆಚ್ಚರಿಕೆಯಿಂದ ವೈದ್ಯಕೀಯ ತಪಾಸಣೆಗಳನ್ನು ಕೈಗೊಳ್ಳುವುದು ದೀರ್ಘಾಯಸ್ಸಿಗೆ ಕೊಡುಗೆ ನೀಡುತ್ತವೆ. ಇವೇನೇ ಇದ್ದರೂ ಆರೋಗ್ಯದ ವಿಚಾರದಲ್ಲಿ ಒಂದಿಷ್ಟು ಅನಿಶ್ಚಿತತೆಗಳೂ ಇರುತ್ತವೆಯಾದ ಕಾರಣಕ್ಕೆ ಸೂಕ್ತವಾದ ಆರೋಗ್ಯ ವಿಮೆಯೊಂದನ್ನು ಹೊಂದಿರಬೇಕು.
ನಿವೃತ್ತಿ ಬದುಕಿಗೊಂದು ಉದ್ದೇಶ: ಅವಧಿಗೆ ಮೊದಲೇ ನಿವೃತ್ತರಾಗಲು ಮಾನಸಿಕ ಸಿದ್ಧತೆಯೂ ಅಗತ್ಯ. ಉದ್ದೇಶ ಇಲ್ಲದೆ ನಿವೃತ್ತಿ ಪಡೆದವರಲ್ಲಿ ಹಲವರು ಅಸ್ಮಿತೆಯ ಸಮಸ್ಯೆಯನ್ನು ಎದುರಿಸಬಹುದು, ಭಾವನಾತ್ಮಕ ಆರೋಗ್ಯ ಹಾಳುಮಾಡಿಕೊಳ್ಳಬಹುದು. ನಿರ್ದಿಷ್ಟ ಉದ್ದೇಶದೊಂದಿಗೆ ನಿವೃತ್ತರಾಗಿ, ಹವ್ಯಾಸಗಳನ್ನು ಹೊಂದಿದ್ದರೆ ಮಾನಸಿಕವಾಗಿ ತೃಪ್ತರಾಗಿ ಬದುಕು ಸಾಗಿಸಬಹುದು.
ಸಂಪತ್ತನ್ನು ಸೃಷ್ಟಿಸುತ್ತಿರುವ ಹೊಸ ತಲೆಮಾರಿನ ಹಲವರು ನಿವೃತ್ತಿ ಕುರಿತ ಸಂಕಥನಗಳನ್ನು ಬದಲಿಸುತ್ತಿದ್ದಾರೆ. ಈಗ ಒಂದು ಸಂಗತಿಯಂತೂ ಸ್ಪಷ್ಟ. ಅವಧಿಪೂರ್ವ ನಿವೃತ್ತಿ ಎಂಬುದು ಕನಸು ಮಾತ್ರವೇ ಅಲ್ಲ, ವಿವೇಕಯುತವಾಗಿ ಆಲೋಚಿಸಿ ಹೂಡಿಕೆ ಮಾಡುವವರಿಗೆ ಇದು ನನಸು ಮಾಡಿಕೊಳ್ಳಬಹುದಾದ ಕನಸು.
ಲೇಖಕ: ಈಕ್ವೆಂಟಿಸ್ ವೆಲ್ತ್ ಅಡ್ವೈಸರಿ ಸರ್ವಿಸಸ್‌ನ ,ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.