ADVERTISEMENT

ಗೃಹಸಾಲ: ಈ ಐದು ತಪ್ಪುಗಳನ್ನು ಮಾಡಬೇಡಿ!

ನೀರಜ್ ಧವನ್
Published 3 ಅಕ್ಟೋಬರ್ 2021, 14:19 IST
Last Updated 3 ಅಕ್ಟೋಬರ್ 2021, 14:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮನೆಯನ್ನು ಖರೀದಿಸುವುದು, ಕಟ್ಟಿಸುವುದು ಒಂದು ಭಾವನಾತ್ಮಕ ತೀರ್ಮಾನವೂ ಹೌದು. ಮನೆಯು ನೆನಪುಗಳನ್ನು ಕಟ್ಟಿಕೊಡುತ್ತದೆ. ಆ ನೆನಪುಗಳು ಜೀವನದ ಉದ್ದಕ್ಕೂ ಉಳಿದುಕೊಳ್ಳುತ್ತವೆ. ಆದರೆ, ಗೃಹಸಾಲ ಪಡೆಯುವ ಮೊದಲು ನಾವು ಸಾಕಷ್ಟು ಯೋಚಿಸುತ್ತೇವೆಯೇ? ನಾವು ಪಡೆಯುವ ಗೃಹಸಾಲವು ಅತ್ಯುತ್ತಮವಾದುದು ಎಂಬ ಖಚಿತತೆ ನಮ್ಮಲ್ಲಿ ಇರುತ್ತದೆಯೇ? ಗೃಹಸಾಲ ತೀರಿಸಲು ಬಹಳ ದೀರ್ಘ ಅವಧಿ ಬೇಕು. ಹಾಗಾಗಿ, ಗೃಹಸಾಲ ಪಡೆಯುವ ಮೊದಲು ಸರಿಯಾದ ಪರಿಶೀಲನೆಯ ಅಗತ್ಯ ಇರುತ್ತದೆ. ಸೂಕ್ತವಾಗಿ ಅಧ್ಯಯನ ನಡೆಸದೆಯೇ ಗೃಹಸಾಲ ಪಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಆಗಬಹುದು. ತಮಗೆ ಸೂಕ್ತವಲ್ಲದ ಗೃಹಸಾಲ ಪಡೆಯದಂತೆ ಜನ ಎಚ್ಚರಿಕೆ ವಹಿಸಬೇಕು.

ಗೃಹಸಾಲ ಪಡೆಯುವಾಗ ಹಲವರು ಮಾಡುವ ತಪ್ಪುಗಳು ಇಲ್ಲಿವೆ:

1) ತಮ್ಮ ಸಾಮರ್ಥ್ಯ ಅರಿಯದಿರುವುದು: ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವುದು ಗೃಹಸಾಲ ಪಡೆಯುವುದಕ್ಕೂ ಮೊದಲು ಕಡ್ಡಾಯವಾಗಿ ಹೊಂದಬೇಕಾದ ಅರ್ಹತೆಗಳಲ್ಲಿ ಒಂದು. ಉಚಿತವಾಗಿ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ವರದಿ ನೀಡುವ ಸಂಸ್ಥೆಗಳು ಇವೆ. ಕ್ರೆಡಿಟ್ ವರದಿ ಪಡೆದುಕೊಳ್ಳುವುದು ಬಹಳ ಸುಲಭದ ಕೆಲಸ. 700 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಅಂಕವನ್ನು ನೀವು ಹೊಂದಿದ್ದರೆ ಒಳ್ಳೆಯ ಗೃಹಸಾಲ ಯೋಜನೆಗಳು ನಿಮಗೆ ದೊರೆಯುತ್ತವೆ. ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸಲು ಕೂಡ ಇದು ನಿಮಗೆ ತಾಕತ್ತು ತಂದುಕೊಡುತ್ತದೆ. ಸಾಲಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ ಸಾಲ ಪಡೆಯಲು ಎಷ್ಟು ಅರ್ಹ ಎಂಬುದನ್ನು ಬ್ಯಾಂಕ್‌ಗಳು ಪರಿಶೀಲಿಸುತ್ತವೆ. ಹಿಂದೆ ಮಾಡಿದ್ದ ಸಾಲಗಳ ಮರುಪಾವತಿ ಸರಿಯಾಗಿ ಆಗಿಲ್ಲದೆ ಇದ್ದರೆ, ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ವ್ಯಕ್ತಿಗೆ ಒಳ್ಳೆಯ ಗೃಹಸಾಲ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ADVERTISEMENT

2) ಸರಿಯಾಗಿ ಪರಿಶೀಲನೆ ಮಾಡದೆ ಇರುವುದು: ಗೃಹಸಾಲ ಪಡೆಯುವುದು ಇಂದು ಸಾಮಾನ್ಯವಾಗುತ್ತಿದೆ. ಗೃಹಸಾಲ ಸುಲಭವಾಗಿ ಸಿಗುತ್ತಿದೆ ಕೂಡ. ಗೃಹಸಾಲಕ್ಕೆ ಬೇಡಿಕೆ ಹೆಚ್ಚುತ್ತ ಸಾಗಿದಂತೆಲ್ಲ, ಪ್ರತಿ ಗ್ರಾಹಕನ ಅಗತ್ಯಕ್ಕೆ ತಕ್ಕಂತಹ ಸಾಲವನ್ನು ಹಣಕಾಸು ಸಂಸ್ಥೆಗಳು ರೂಪಿಸುತ್ತಿವೆ. ಹಾಗಾಗಿ, ನಿರ್ದಿಷ್ಟ ಸಂಸ್ಥೆಯೊಂದರಿಂದ ಗೃಹಸಾಲ ಪಡೆಯುವ ಮುನ್ನ ಸೂಕ್ತವಾದ ಅಧ್ಯಯನ ನಡೆಸುವುದು ಬಹಳ ಮುಖ್ಯ. ತಮ್ಮ ಅಗತ್ಯಗಳು ಏನು, ತಮ್ಮ ಹಣಕಾಸಿನ ಸ್ಥಿತಿಗತಿ ಏನು, ಸಾಲದ ಜೊತೆಯಲ್ಲೇ ಬರುವ ಷರತ್ತುಗಳು ಏನು, ಸಾಲಕ್ಕೆ ಸಂಬಂಧಿಸಿದ ಶುಲ್ಕಗಳು ಯಾವುವು, ಮರುಪಾವತಿ ಆಯ್ಕೆಗಳು ತಮಗೆ ಸರಿಹೊಂದುವಂತೆ ಇವೆಯೇ ಎಂಬುದನ್ನೆಲ್ಲ ಎರಡೆರಡು ಬಾರಿ ಪರಿಶೀಲನೆ ಮಾಡಿಕೊಳ್ಳುವುದು ಒಳಿತು. ಇವನ್ನೆಲ್ಲ ಪರಿಶೀಲನೆ ಮಾಡಿದ ನಂತರವೇ ಗ್ರಾಹಕರು ತಮಗೆ ಸೂಕ್ತವೆನಿಸಿದ ಬ್ಯಾಂಕ್ ಮತ್ತು ಸೂಕ್ತ ಯೋಜನೆಯ ಅಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು. ಬೇರೆ ಬೇರೆ ಬ್ಯಾಂಕ್‌ಗಳು ನೀಡುವ ಗೃಹಸಾಲವನ್ನು ಹೋಲಿಸಿ ನೋಡಲು ನೆರವಾಗುವ ವೆಬ್‌ಸೈಟ್‌ಗಳು ಹಲವಿವೆ. ಸರಿಯಾದ ಪರಿಶೀಲನೆ ಇಲ್ಲದೆ ಗೃಹಸಾಲ ಪಡೆದರೆ ಅನಗತ್ಯವಾಗಿ ದುಬಾರಿ ವೆಚ್ಚ ಭರಿಸಬೇಕಾಗಬಹುದು.

3) ಅಲ್ಪ ಅವಧಿ, ಹೆಚ್ಚು ರಿಸ್ಕ್‌: ಗೃಹಸಾಲದ ಮರುಪಾವತಿ ಅವಧಿಯು ಅಲ್ಪಾವಧಿಯದ್ದು ಆಗದೆ ಇರುವಂತೆ ನೋಡಿಕೊಳ್ಳುವುದು ಒಳಿತು. ಅವಧಿ ಕಿರಿದಾಗಿದ್ದರೆ ಸಾಲದ ಮೊತ್ತ ಕಡಿಮೆ ಸಿಗುತ್ತದೆ. ಹಾಗೆಯೇ, ಪ್ರತಿ ತಿಂಗಳು ಬ್ಯಾಂಕ್‌ಗೆ ಕಟ್ಟಬೇಕಿರುವ ಇಎಂಐ ಮೊತ್ತವು ಹೆಚ್ಚಿರುತ್ತದೆ. ವ್ಯಕ್ತಿಗೆ ಸಿಗಬಹುದಾದ ಗೃಹಸಾಲದ ಮೊತ್ತವು ವ್ಯಕ್ತಿಯ ವಯಸ್ಸು, ಆತನ ಸಾಲ ಮರುಪಾವತಿ ಇತಿಹಾಸ, ಸಾಲ ಮರುಪಾವತಿ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳನ್ನು ಆಧರಿಸಿ ಇರುತ್ತದೆ. ಹೆಚ್ಚಿನ ಮೊತ್ತದ ಸಾಲ ಸಿಗಬೇಕು ಎಂದಾದಲ್ಲಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇರಬೇಕು, ಮರುಪಾವತಿ ವಿಚಾರದಲ್ಲಿ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇರಬೇಕು. ಗೃಹಸಾಲದ ಅವಧಿ ಹೆಚ್ಚಿದ್ದರೆ ಇಎಂಐ ಮೊತ್ತ ಕಡಿಮೆ ಇರುತ್ತದೆ. ಆಗ ನಿಮ್ಮ ಇತರ ಹಣಕಾಸಿನ ಗುರಿಗಳನ್ನು ಈಡೇರಿಸಿಕೊಳ್ಳಲು ಕೂಡ ಸಹಾಯ ಆಗುತ್ತದೆ.

4) ಮರುಪಾವತಿ ಸಾಮರ್ಥ್ಯ: ಸಾಲ ಮರುಪಾವತಿ ಸಾಮರ್ಥ್ಯ ತಮಗೆ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕುವಾಗ ಜನ ದೊಡ್ಡ ತಪ್ಪೊಂದನ್ನು ಮಾಡುವುದು ಇದೆ. ಅದು ತಮ್ಮ ತಿಂಗಳ ಖರ್ಚುಗಳು ಎಷ್ಟು ಎಂಬುದನ್ನು ಸರಿಯಾಗಿ ಪರಿಗಣಿಸದೆಯೇ, ಇಎಂಐ ಪಾವತಿಸುವ ಸಾಮರ್ಥ್ಯವನ್ನು ಲೆಕ್ಕಹಾಕುವುದು. ಬ್ಯಾಂಕುಗಳು ಸಾಮಾನ್ಯವಾಗಿ, ಸಾಲ ಕೊಡುವ ಸಂದರ್ಭದಲ್ಲಿ, ಸಾಲ ಬಯಸಿದವರ ಇತರ ಸಾಲಗಳು ಎಷ್ಟಿವೆ ಎಂಬುದನ್ನು ಪರಿಗಣಿಸುತ್ತವೆ. ನಿಮ್ಮ ತಿಂಗಳ ಖರ್ಚು ದೊಡ್ಡ ಮಟ್ಟದಲ್ಲಿ ಇದೆ ಎಂದಾದರೆ, ಹೆಚ್ಚಿನ ಇಎಂಐ ಇರುವ ಸಾಲ ಪಡೆದರೆ ನೀವು ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಬಹುದು. ಇಎಂಐ ಮೂಲಕ ನೀವು ಪಾವತಿ ಮಾಡಬೇಕಿರುವ ಮೊತ್ತವು ನಿಮ್ಮ ತಿಂಗಳ ಒಟ್ಟು ಆದಾಯದ ಶೇಕಡ 30 ಅಥವಾ ಶೇ 40ಕ್ಕಿಂತ ಹೆಚ್ಚು ಆಗಬಾರದು. ಹೆಚ್ಚಿನ ಮೊತ್ತದ ಸಾಲವನ್ನು ಪಡೆಯುವ ಸಂದರ್ಭದಲ್ಲಿ, ಮುಂದೆ ಸಿಗಬಹುದಾದ ವೇತನ ಹೆಚ್ಚಳನ್ನು ‍ಪರಿಗಣಿಸಿ, ಸಾಲದ ಮೊತ್ತವನ್ನು ತೀರ್ಮಾನಿಸಬಾರದು. ಅದರ ಬದಲಿಗೆ, ಈಗಿನ ಆದಾಯವನ್ನು ಮಾತ್ರವೇ ಪರಿಗಣಿಸಿ ಸಾಲದ ಮೊತ್ತ ಲೆಕ್ಕಹಾಕಬೇಕು. ಈಗಿನ ಸಂದರ್ಭದಲ್ಲಿ ಹೇಳುವುದಾದರೆ, ನಿಮ್ಮ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ, ಸಾಲದ ಮೊತ್ತ ಎಷ್ಟಿರಬೇಕು ಎಂಬ ಲೆಕ್ಕ ಹಾಕಬೇಕು.

5) ವಿಮಾ ಸುರಕ್ಷತೆ ಪಡೆಯದಿರುವುದು: ತಮ್ಮ ಕುಟುಂಬದವರು ಹಣಕಾಸಿನ ಸಂಕಷ್ಟಕ್ಕೆ ಸಿಲುಕಬಾರದು ಎಂದಾದರೆ ಗೃಹಸಾಲ ಪಡೆಯುವವರು ಸೂಕ್ತವಾದ ವಿಮಾ ಸುರಕ್ಷೆಯನ್ನು ಪಡೆದಿರಬೇಕು. ಕುಟುಂಬಕ್ಕೆ ಅನಿರೀಕ್ಷಿತ ಆಘಾತ ಎದುರಾದರೆ, ಗೃಹಸಾಲಕ್ಕೆ ಇರುವ ವಿಮಾ ಸುರಕ್ಷೆಯು, ಸಾಲದ ಬಾಕಿ ಮೊತ್ತವನ್ನು ತೀರಿಸಲು ಕುಟುಂಬಕ್ಕೆ ಸಹಾಯ ಮಾಡುತ್ತದೆ. ಹಲವು ವಿಮಾ ಉತ್ಪನ್ನಗಳು ಗೃಹಸಾಲಕ್ಕೆ ಸುರಕ್ಷೆ ಒದಗಿಸುತ್ತವೆ. ಸಾಲಕ್ಕೆ ವಿಮೆಯ ಸುರಕ್ಷೆ ಪಡೆದುಕೊಳ್ಳದಿರುವುದು ಹಲವು ಜನ ಮಾಡುವ ತಪ್ಪುಗಳಲ್ಲಿ ಒಂದು.

ಲೇಖಕ ಎಕ್ಸ್‌ಪೀರಿಯನ್‌ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.