ADVERTISEMENT

ಪ್ರಶ್ನೋತ್ತರ: ಹಿರಿಯ ನಾಗರಿಕರಿಗೆ ಬಂಡವಾಳ ಗಳಿಕೆ ತೆರಿಗೆ ವಿನಾಯಿತಿ ಇದೆಯೇ?

ಯು.ಪಿ.ಪುರಾಣಿಕ್
Published 6 ಏಪ್ರಿಲ್ 2021, 19:31 IST
Last Updated 6 ಏಪ್ರಿಲ್ 2021, 19:31 IST
ಪುರಾಣಿಕ್
ಪುರಾಣಿಕ್   

ಪ್ರಶ್ನೆ: ನಾನು ಐ.ಟಿ. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆ. ನನ್ನ ತಂದೆಗೆ 84 ವರ್ಷ ವಯಸ್ಸು. ಅವರು ಸ್ವಂತ ಹಣದಿಂದ ಕೊಂಡ ನಿವೇಶನ–ಮನೆ ಮಾರಾಟ ಮಾಡಿದಲ್ಲಿ ಅವರು ಅತೀ ಹಿರಿಯ ನಾಗರಿಕರಾದ್ದರಿಂದ ಅವರಿಗೆ ಬಂಡವಾಳ ಗಳಿಕೆ ತೆರಿಗೆ ವಿನಾಯಿತಿ ಇದೆಯೇ? ಮಾರಾಟ ಮಾಡಿದ ಹಣದಿಂದ ನನ್ನ ಹೆಸರಿನಲ್ಲಿ ಇನ್ನೊಂದು ಮನೆ ಕೊಳ್ಳಬಹುದೇ? ತಂದೆಯವರು 1995ರಲ್ಲಿ ₹ 5 ಲಕ್ಷಕ್ಕೆ ಕೊಂಡ ಆಸ್ತಿ ಇದು. ತೆರಿಗೆ ಬಾರದಿರುವಂತೆ ಸಲಹೆ ನೀಡಿ.

-ರಾಜಗೋಪಾಲ್, ಜೆ.ಪಿ. ನಗರ

ಉತ್ತರ: ಬಂಡವಾಳ ವೃದ್ಧಿ ತೆರಿಗೆಯಲ್ಲಿ ಹಿರಿಯ ಅಥವಾ ಅತೀ ಹಿರಿಯ ನಾಗರಿಕರಿಗೆ ವಿನಾಯಿತಿ ಇಲ್ಲ. ನಿಮ್ಮ ತಂದೆಯವರು 1995ರಲ್ಲಿ ಆಸ್ತಿ ಕೊಂಡಿದ್ದಾರೆ. ಹೀಗಾಗಿ 2020ರ ಏಪ್ರಿಲ್‌ 1ರ ಸರ್ಕಾರಿ ಬೆಲೆಯ ಮೇಲೆಆಸ್ತಿ ಬೆಲೆ ನಿರ್ಧರಿಸಿ. 2021ರ ಏಪ್ರಿಲ್‌ 1ರಿಂದ ಮಾರಾಟ ಮಾಡುವ ವರ್ಷಗಳ ಅಂತರಕ್ಕೆ ಖರೀದಿಸಿದ ಮೊತ್ತದ ಹಣದುಬ್ಬರ ಲೆಕ್ಕಹಾಕಿ, ಈಗ ಮಾರಾಟದಿಂದ ಬರುವ ಮೊತ್ತದಲ್ಲಿ ಅದನ್ನು ಕಳೆದು ಬಂಡವಾಳ ವೃದ್ಧಿ ತೆರಿಗೆ ಕೊಡಬಹುದು. ನಿಮ್ಮ ತಂದೆಯವರು ಮಾರಾಟ ಮಾಡಿ ಬರುವ ಹಣದಿಂದ ನಿಮ್ಮ ಹೆಸರಿನಲ್ಲಿ ಮನೆ ಕೊಳ್ಳಲು ಬರುವುದಿಲ್ಲ. ಅವರ ಹೆಸರಿನಲ್ಲಿಯೇ ಕೊಳ್ಳಬೇಕು. ತೆರಿಗೆ ಉಳಿಸಲು ಸೆಕ್ಷನ್‌ 54ಇಸಿ ಆಧಾರದ ಮೇಲೆ ಗರಿಷ್ಠ ₹ 50 ಲಕ್ಷ ಎನ್‌ಎಚ್‌ಐಎ–ಆರ್‌ಇಸಿ ಬಾಂಡುಗಳಲ್ಲಿ 5 ವರ್ಷಗಳ ಅವಧಿಗೆ ಇರಿಸಬಹುದು. ಏನಾದರೂ ಗೊಂದಲ ಇದ್ದರೆ ನನಗೆ ಕರೆ ಮಾಡಿರಿ.

ADVERTISEMENT

**
ಪ್ರಶ್ನೆ: ವಿಪಿಎಫ್ ವಿಚಾರವಾಗಿ ಈ ವರ್ಷದ ಬಜೆಟ್‌ನಲ್ಲಿ ತಿಳಿಸಿದ್ದಕ್ಕೆ ಸಂಬಂಧಿಸಿದಂತೆ ನನ್ನ ಪ್ರಶ್ನೆ: ನಾನು 2020–21ರಲ್ಲಿ ₹ 3.50 ಲಕ್ಷ ವಿಪಿಎಫ್‌ಗೆ ಕಟ್ಟಿದರೆ 2021–22ರ ಆರ್ಥಿಕ ವರ್ಷದಲ್ಲಿ ₹ 1 ಲಕ್ಷಕ್ಕೆ ತೆರಿಗೆ ವಿಧಿಸುವರೇ? ಹಾಗೂ ಮುಂದಿನ ವರ್ಷಗಳಲ್ಲಿಯೂ ತೆರಿಗೆ ಕೊಡಬೇಕಾಗುತ್ತದೆಯೇ ತಿಳಿಸಿ. ಇನ್ನೊಂದು ಪ್ರಶ್ನೆ ಪಿಪಿಎಫ್‌ಗೆ ವಾರ್ಷಿಕ ಹಣ ಕಟ್ಟದಿರುವಲ್ಲಿ ಅಂದರೆ ನಾನು ಉದ್ಯೋಗ ನಿಲ್ಲಿಸಿ ಪಿಪಿಎಫ್‌ಗೆ ಹಣ ಕಟ್ಟದೇ ಹಣ ಅಲ್ಲಿಯೇ ಬಿಟ್ಟರೆ ಪಿಪಿಎಫ್‌ ಬಡ್ಡಿಗೆ ತೆರಿಗೆ ವಿಧಿಸುವರೇ ತಿಳಿಸಿ.

-ರಾಘವೇಂದ್ರ ಮಯ್ಯ ಯು. ಬೆಂಗಳೂರು

ಉತ್ತರ: ಇದುವರೆಗೆ ಸೆಕ್ಷನ್‌ 10 (II) ಆಧಾರದ ಮೇಲೆ ಪಿಎಫ್‌ ಸೌಲಭ್ಯ ಇರುವ ನೌಕರರು ಕಟ್ಟಬೇಕಾದ ಕಂತಿಗಿಂತ ಹೆಚ್ಚಿಗೆ ಹಣ ತುಂಬುತ್ತಿದ್ದಲ್ಲಿ ಅಂತಹ ಮೊತ್ತದಿಂದ ಬರುವ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇತ್ತು. ಈ ವರ್ಷದ ಬಜೆಟ್‌ನಲ್ಲಿ ತಿಳಿಸಿದಂತೆ ಇನ್ನುಮುಂದೆ ಪಿಎಫ್‌ ಖಾತೆಗೆ ನೌಕರರ ಕಡೆಯಿಂದ ಜಮಾ ಆಗುವ ವಾರ್ಷಿಕ ₹ 2.50 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ಮಾತ್ರ ತೆರಿಗೆ ವಿನಾಯಿತಿ ಇರಲಿದೆ. ಕಂಪನಿ ಕಡೆಯಿಂದ ಕೊಡುಗೆ ಇಲ್ಲದಿರುವಲ್ಲಿ ಅಂತಹ ನೌಕರರಿಂದ ಜಮಾ ಆಗುವ ₹ 5 ಲಕ್ಷದವರೆಗಿನ ಕೊಡುಗೆಯ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ನಿಮ್ಮ ಇನ್ನೊಂದು ಪ್ರಶ್ನೆ; ಪಿಪಿಎಫ್‌ಗೆ ವಾರ್ಷಿಕ ಕನಿಷ್ಠ ಕಂತು ₹ 500 ಮಾತ್ರ. ಉದ್ಯೋಗ ಇರಲಿ ಇಲ್ಲದಿರಲಿ ₹ 500 ವಾರ್ಷಿಕವಾಗಿ ತುಂಬಿ. ಇಲ್ಲಿ ಬರುವ ಬಡ್ಡಿ ಆದಾಯ ತೆರಿಗೆ ಮುಕ್ತವಾಗಿದೆ.

**
ಪ್ರಶ್ನೆ: ನಾನು ನಿವೃತ್ತ ನೌಕರ. ನನ್ನ ಮಗ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದಾನೆ. ನನ್ನ ಮೊಮ್ಮಗ ದ್ವಿತೀಯ ಪಿಯು ಓದುತ್ತಿದ್ದು, ಈ ವರ್ಷ ಎಂಬಿಬಿಎಸ್‌ ಓದಲು ಬಯಸಿದ್ದಾನೆ. ಮೊಮ್ಮಗನ ಸಲುವಾಗಿ ಬ್ಯಾಂಕ್‌ನಲ್ಲಿ ಶಿಕ್ಷಣ ಸಾಲ ಪಡೆಯುವುದಾದರೆ ನಮಗೆ ಸದ್ಯ ಸಾಲದ ಕಂತು ಕಟ್ಟುವ ಸಾಮರ್ಥ್ಯವಿಲ್ಲ. ಈ ವಿಚಾರದಲ್ಲಿ ಮಾರ್ಗದರ್ಶನ ಮಾಡಿ.

-ಹೆಸರು ಬೇಡ, ಹೊಸಪೇಟೆ

ಉತ್ತರ: ಸಾಲ ಪಡೆದ ತಕ್ಷಣ ಶಿಕ್ಷಣ ಸಾಲದ ಕಂತು ತುಂಬುವ ಅವಶ್ಯವಿಲ್ಲ. ವಿದ್ಯಾರ್ಥಿಯ ಅಧ್ಯಯನದ ಕೋರ್ಸಿನ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳು, ಇವುಗಳಲ್ಲಿ ಯಾವುದು ಮೊದಲೋ ಅದನ್ನು ಆರಿಸಿಕೊಳ್ಳಬೇಕು. ಕೇಂದ್ರ ಸರ್ಕಾರ 2009ರ ಏಪ್ರಿಲ್‌ 1ರಿಂದ ಬಡ್ಡಿ ಅನುದಾನಿತ ಶಿಕ್ಷಣ ಸಾಲವನ್ನು (Interest subsidy education *oan) ಜಾತಿ, ಪಂಗಡ ಅಥವಾ ಇನ್ನಿತರ ನಿರ್ಬಂಧಗಳಿಲ್ಲದೇ ನೀಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಮಕ್ಕಳ ಹೆತ್ತವರ ವಾರ್ಷಿಕ ಆದಾಯ ₹ 4.50 ಲಕ್ಷದೊಳಗೆ ಇದ್ದರೆ ಬ್ಯಾಂಕುಗಳಲ್ಲಿ ಈ ಸಾಲ ದೊರೆಯಲಿದೆ. ಈ ಸಾಲ ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರ ಸೀಮಿತ. ನಿಮ್ಮ ಮೊಮ್ಮಗ ದ್ವಿತೀಯ ಪಿಯು ಪಾಸಾಗಿ ನೀಟ್‌ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಪಡೆದು ಎಂಬಿಬಿಎಸ್‌ ಸೇರಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.