ADVERTISEMENT

ಪ್ರಶ್ನೋತ್ತರ: ಸಾಂಪ್ರದಾಯಿಕ ಅಥವಾ ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ ಬಗ್ಗೆ ತಿಳಿಸಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:31 IST
Last Updated 25 ಜನವರಿ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀರಾಮ ಪೂಜಾರಿ, ಊರುಬೇಡ

l ಪ್ರಶ್ನೆ:ನನಗೆ ಎರಡೂವರೆ ವರ್ಷ ವಯಸ್ಸಿನ ಮಗಳು ಇದ್ದಾಳೆ. ಅವಳ ಓದು, ಮದುವೆಗೆ ಅನುಕೂಲ ಆಗುವಂತೆ ಸಾಂಪ್ರದಾಯಿಕ ಉಳಿತಾಯ ಯೋಜನೆ ಹಾಗೂ ಈಕ್ವಿಟಿ ಆಧಾರಿತ ಉಳಿತಾಯ ಯೋಜನೆ ತಿಳಿಸಿ.

ಉತ್ತರ: ಮಗಳ ಉಜ್ವಲ ಭವಿಷ್ಯದ ಉದ್ದೇಶದಿಂದ ದಿರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಉತ್ತಮ ವಿಚಾರ. ಉಳಿತಾಯದ ಮೊದಲ ಹೆಜ್ಜೆಯಾಗಿ ನೀವು ಕೇಂದ್ರ ಸರ್ಕಾರದ ‘ಸುಕನ್ಯಾ ಸಮೃದ್ಧಿ ಯೋಜನೆ’ಯಲ್ಲಿ ತೊಡಗಿಸಿ. ಇದರಲ್ಲಿ ಕನಿಷ್ಠ ₹ 250ರಿಂದ ಗರಿಷ್ಠ ₹ 1.50 ಲಕ್ಷದವರೆಗೆ 15 ವರ್ಷ ಹೂಡಿಕೆಗೆ ಅವಕಾಶವಿದೆ. ಈ ಯೋಜನೆಯ ಅಡಿ ಖಾತೆಯನ್ನು ನಿಮ್ಮ ಸಮೀಪದ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ತೆರೆಯಬಹುದು. ನಿಮ್ಮ ಮಗಳು 18 ವರ್ಷ ಪೂರೈಸಿದ ನಂತರ ಮದುವೆ ಅಥವಾ ಓದಿಗಾಗಿ ಇದರಿಂದ ಹಣ ಹಿಂಪಡೆಯಬಹುದು. ಇದು ಖಾತೆ ತೆರೆದ ನಂತರ 21 ವರ್ಷಗಳ ಒಟ್ಟು ಅವಧಿ ಹೊಂದಿದೆ. ಪ್ರಸ್ತುತ ಶೇಕಡ 7.6ರಷ್ಟು ಬಡ್ಡಿ ಸಿಗುತ್ತದೆ ಹಾಗೂ ಇದು ತೆರಿಗೆಯಿಂದ ಮುಕ್ತವಾಗಿದೆ. ಇಷ್ಟೇ ಅಲ್ಲದೆ, ನೀವು ಜಮಾ ಮಾಡುವ ಮೊತ್ತದ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿ ವಿನಾಯಿತಿಯೂ ಇದೆ.

ADVERTISEMENT

ಈಕ್ವಿಟಿ ಆಧಾರಿತ ಹೂಡಿಕೆಯು ದೀರ್ಘಾವಧಿಯಲ್ಲಿ ಸಾಂಪ್ರದಾಯಿಕ ಹೂಡಿಕೆಗಳಿಗಿಂತ ಅಧಿಕ ಲಾಭ ನೀಡಬಲ್ಲದು. ಉತ್ತಮ ಕಂಪನಿಗಳ ಷೇರುಗಳಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ವಿನಿಯೋಗಿಸುವ ಮೂಲಕ ನಿಮ್ಮ ಉದ್ದೇಶ ಈಡೇರಿಸಿಕೊಳ್ಳಬಹುದು. ಇದಕ್ಕಾಗಿ ಸ್ಥಳೀಯ ಷೇರು ದಲ್ಲಾಳಿ ಸಂಸ್ಥೆಗಳನ್ನು ಸಂಪರ್ಕಿಸಿ. ಇಲ್ಲಿ ಗಳಿಸಿದ ಲಾಭದ ಮೇಲೆ ತೆರಿಗೆ ಇದೆ ಎಂಬುದನ್ನು ಮರೆಯದಿರಿ. ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಒಟ್ಟು ಹೂಡಿಕೆಯ ಮೊತ್ತವನ್ನು ಇವುಗಳಲ್ಲಿ ಸಮನಾಗಿ ಹಂಚಿ ಹೂಡಿಕೆ ಮುಂದುವರಿಸಿ. ಈಕ್ವಿಟಿ ಆಧಾರಿತ ಹೂಡಿಕೆಯಾದುದರಿಂದ ನಿರಂತರವಾಗಿ ನಿಮ್ಮ ಹೂಡಿಕೆ ಮೇಲ್ಮುಖವಾಗಿ ಸಾಗುತ್ತಿದೆಯೇ ಎಂಬುದನ್ನು ಗಮನಿಸುತ್ತ ಇರಿ, ಪರಿಣತರ ಮಾರ್ಗದರ್ಶನ ತೆಗೆದುಕೊಳ್ಳಿ.

***

ವಿ.ಬಿ.ಮಲ್ಲಪ್ಪ, ಸಿಂಧನೂರ

l ಪ್ರಶ್ನೆ: ನಾನು ಹಿರಿಯ ನಾಗರಿಕ. ನನಗೆ ಅಂಚೆ ಕಚೇರಿಯಿಂದ ವರ್ಷಕ್ಕೆ ₹ 96,000 ಬಡ್ಡಿ ಬರುತ್ತದೆ. ಸಿಂಧನೂರಿನಲ್ಲಿ ಒಂದು ಮನೆ ಇದೆ. ನಾನು ಈಗ ಅದನ್ನು ಮಾರಬೇಕೆಂದಿದ್ದೇನೆ. ನನಗೆ ಅದರಿಂದ ₹ 35 ಲಕ್ಷ ಬರಬಹುದು. ನಾನು 1990ರಲ್ಲಿ ಭೂ ಅಂತಸ್ತಿನ ಹಂತ ಮತ್ತು 1992ರಲ್ಲಿ ಒಂದನೆಯ ಮಹಡಿ ಕಟ್ಟಿಸಿರುತ್ತೇನೆ. ಬಂದ ಹಣದಿಂದ ನಾನು ಸುಮಾರು ₹ 10 ಲಕ್ಷದಿಂದ ₹ 12 ಲಕ್ಷದೊಳಗಿನ ನಿವೇಶನ ಖರೀದಿಸಬೇಕೆಂದಿದ್ದೇನೆ. ಇದಕ್ಕೆ ನನಗೆ ಬಂಡವಾಳ ವೃದ್ಧಿ ತೆರಿಗೆ ಬರಬಹುದೇ? ನಿವೇಶನ ಖರೀದಿಸುವುದು ತಪ್ಪಿದಲ್ಲಿ ನಾನು 500 ಚದರ ಅಡಿಯ ಮನೆ ಕಟ್ಟಿಸಬೇಕೆಂದಿದ್ದೇನೆ. ಇದರಲ್ಲಿ ಯಾವುದು ಉತ್ತಮ? ಇದಕ್ಕಾಗಿ ₹ 6 ಲಕ್ಷದವರೆಗೆ ಖರ್ಚು ಬರಬಹುದು.

ಉತ್ತರ: ನೀವು ಮನೆ ಮಾರಾಟ ಮಾಡುವುದರಿಂದ ಬರುವ ಲಾಭದ ಮೇಲೆ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸುತ್ತದೆ. ನಿಮ್ಮ ಎರಡುಹಂತಗಳ ಮನೆಯ ಒಟ್ಟು ನಿರ್ಮಾಣದ ಮೊತ್ತವನ್ನು ಆಯಾ ವರ್ಷದ ಹಣದುಬ್ಬರ ಸೂಚ್ಯಂಕವನ್ನಾಧರಿಸಿ ಮಾರಾಟ ಮಾಡುವ ಮನೆಯ ಪ್ರಸ್ತುತ ಬೆಲೆಯನ್ನು ಮರು ಅಂದಾಜಿಸಲಾಗುತ್ತದೆ. ಮಾರಾಟದ ಬೆಲೆ ಇದಕ್ಕಿಂತ ಅಧಿಕವಾಗಿದ್ದರೆ, ಆ ವ್ಯತ್ಯಾಸವನ್ನು ದೀರ್ಘಾವಧಿ ಬಂಡವಾಳ ವೃದ್ಧಿ ಎಂದೂ, ಮಾರಾಟ ಮಾಡಿದ ಬೆಲೆ ಅದಕ್ಕಿಂತ ಕಡಿಮೆಯಾಗಿದ್ದರೆ, ದೀರ್ಘಾವಧಿ ಬಂಡವಾಳ ನಷ್ಟ ಎಂದೂ ಲೆಕ್ಕಹಾಕಲಾಗುತ್ತದೆ. ಲಾಭವಾದ ಪಕ್ಷದಲ್ಲಿ ಶೇ 20ರ ತೆರಿಗೆ ಬರುತ್ತದೆ. ನಷ್ಟವಾದ ಪಕ್ಷದಲ್ಲಿ ಮುಂದಿನ ಎಂಟು ವರ್ಷಗಳ ತನಕ ನಷ್ಟ ಮುಂದೂಡುವ ಹಾಗೂ ಮುಂಬರುವ ವರ್ಷಗಳಲ್ಲಾಗಬಹುದಾದ ಬಂಡವಾಳ ವೃದ್ದಿ ಲಾಭದೊಡನೆ ವಜಾ ಮಾಡುವ ಅವಕಾಶವಿದೆ.

ಹೊಸ ನಿವೇಶನ ಖರೀದಿಗೆ ಯಾವುದೇ ತೆರಿಗೆ ವಿನಾಯಿತಿ ಇಲ್ಲವಾದರೂ, ಹೂಡಿಕೆಯ ದೃಷ್ಟಿಯಿಂದ ನಿವೇಶನ ಖರೀದಿಗೆ ಅಡ್ಡಿಯಿಲ್ಲ. ಆದಾಯ ತೆರಿಗೆಯ ನಿಯಮ 54ರ ಪ್ರಕಾರ ಹೊಸ ಮನೆಯ ಖರೀದಿ ಅಥವಾ ನಿರ್ಮಾಣಕ್ಕೆ ಮಾರಾಟದಿಂದ ಬರುವ ಬಂಡವಾಳ ವೃದ್ಧಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ನಿಮ್ಮ ಪ್ರಶ್ನೆಯಂತೆ, ದೀರ್ಘಾವಧಿ ಬಂಡವಾಳ ವೃದ್ಧಿಯ ಮೊತ್ತ ₹ 10 ಲಕ್ಷ ಎಂದು ಊಹಿಸಿದರೆ, ಹೂಡಿಕೆಯಾಗದೆ ಉಳಿದ ಮೊತ್ತ ₹ 4 ಲಕ್ಷದಿಂದ ₹ 5 ಲಕ್ಷದ ಮೇಲೆ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಅದೇ, ನಿಮ್ಮ ಹೊಸ ಮನೆಯ ಮೇಲಣ ಹೂಡಿಕೆ ₹ 10 ಲಕ್ಷಕ್ಕಿಂತ ಕಡಿಮೆಯಾಗದಂತೆ ಇದ್ದರೆ, ಸಂಪೂರ್ಣ ತೆರಿಗೆ ವಿನಾಯ್ತಿ ಸಿಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.