ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗಳಿಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 27 ಮೇ 2025, 23:18 IST
Last Updated 27 ಮೇ 2025, 23:18 IST
   

ಅರುಣ್, ಕೆಂಗೇರಿ.

ಪ್ರಶ್ನೆ: ನಾನು ಮತ್ತು ನನ್ನ ಪತ್ನಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದೇವೆ. ಸುಮಾರು ₹90 ಲಕ್ಷ ಮೌಲ್ಯದ ಫ್ಲ್ಯಾಟ್ ಖರೀದಿಸುವ ಉದ್ದೇಶ ಹೊಂದಿದ್ದೇವೆ. ಈ ಖರೀದಿಗೆ ನಮ್ಮ ಉಳಿತಾಯದ ಭಾಗವೊಂದರ ಜೊತೆಗೆ ಬ್ಯಾಂಕ್ ಸಾಲ ತೆಗೆದುಕೊಳ್ಳುವ ಯೋಜನೆ ಹೊಂದಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನೋಂದಣಿ ಶುಲ್ಕ, ಸ್ಟ್ಯಾಂಪ್ ಡ್ಯೂಟಿ ಮತ್ತು ಇತರೆ ಖರ್ಚು ಪ್ರತ್ಯೇಕವಾಗಿರಲಿದ್ದು, ಅವುಗಳನ್ನು ಹೊರತಾಗಿ ಪಾವತಿಸಬೇಕಾಗುತ್ತದೆ.

ನಾವು ಇತ್ತೀಚಿನ ವರ್ಷಗಳಲ್ಲಿ ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ರಿಟರ್ನ್ಸ್‌ ಸಲ್ಲಿಸುತ್ತಿದ್ದೇವೆ. ಆದರೆ, ನಾವು ಮನೆ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ಗೃಹ ಸಾಲದ ಮೇಲಿನ ಬಡ್ಡಿ ಪಾವತಿ ಪರಿಗಣಿಸಿದಾಗ ಹಳೆಯ ತೆರಿಗೆ ಪದ್ಧತಿಗೆ ಮರಳುವುದು ಅನಿವಾರ್ಯವಾಗಿದೆ ಎಂದು ನಾವು ಊಹಿಸುತ್ತಿದ್ದೇವೆ. ಹಳೆಯ ಪದ್ಧತಿಗೆ ಮರಳದಿದ್ದರೆ ಈ ಬಡ್ಡಿ ಮತ್ತು ಇತರೆ ಪಾವತಿಗಳ ಮೇಲೆ ಲಭಿಸಬಹುದಾದ ತೆರಿಗೆ ವಿನಾಯಿತಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬುದು ಇದಕ್ಕೆ ಮೂಲ ಕಾರಣವಾಗಿದೆ.

ADVERTISEMENT

ನಮ್ಮ ಪ್ರಶ್ನೆ ಇಂತಿದೆ; ನಾನು ಒಬ್ಬನೇ ಸಾಲ ಪಡೆಯಬೇಕೆ ಅಥವಾ ನನ್ನ ಪತ್ನಿ ಹೆಸರನ್ನೂ ಸಾಲದ ಪಾಲುದಾರಳನ್ನಾಗಿ ಸೇರಿಸಬೇಕೆ? ಈ ಸಾಲದ ಪಾವತಿಯನ್ನು ನಾವಿಬ್ಬರೂ  ಮಾಡಬೇಕೆ? ಈ ಸಾಲದ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿ ನಮಗೆ ಎಷ್ಟು ಮೊತ್ತದ ತೆರಿಗೆ ವಿನಾಯಿತಿ ಲಭ್ಯವಾಗಬಹುದು?

ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಕೇವಲ ನನ್ನ ಹೆಸರಿನಲ್ಲಿ ಇಟ್ಟುಕೊಂಡು  ಸಾಲ ಪಾವತಿ ಉದ್ದೇಶಕ್ಕಾಗಿ ನನ್ನ ಪತ್ನಿಯ ಹೆಸರನ್ನೂ ಸೇರಿಸಿ ನಾವು ಇಬ್ಬರೂ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದೇ ಎಂಬ ಬಗ್ಗೆ ತಿಳಿಸಿ.

ನೀವು ಮತ್ತು ನಿಮ್ಮ ಪತ್ನಿ ಇಬ್ಬರೂ ಉದ್ಯೋಗದಲ್ಲಿ ಇರುವುದರಿಂದ ಗೃಹ ಸಾಲವನ್ನು ಜಂಟಿಯಾಗಿ ತೆಗೆದುಕೊಳ್ಳುವುದು ಬಹುಪಾಲು ಸಂದರ್ಭಗಳಲ್ಲಿ ತೆರಿಗೆ ಉಳಿತಾಯದ ದೃಷ್ಟಿಯಿಂದ ಲಾಭದಾಯಕವಾಗಬಹುದು. ಆದರೆ, ನಿಮ್ಮ ಈ ತೆರಿಗೆ ಪದ್ಧತಿ ಆಯ್ಕೆಯ ಹಿಂದೆ ಸರಿಯಾಗಿ ಹೋಲಿಕೆ ಮಾಡಿ ನಿರ್ಧಾರ ಕೈಗೊಳ್ಳಿ.

ನೀವು ಖರೀದಿಸಲು ಉದ್ದೇಶಿಸಿರುವ ಫ್ಲ್ಯಾಟ್‌ಗಾಗಿ ಜಂಟಿ ಸಾಲದ ಮೂಲಕ ನೀವು ಇಬ್ಬರೂ ಬಡ್ಡಿ ಹಾಗೂ ಅಸಲು ಪಾವತಿ ಮೇಲೆ ಪ್ರತ್ಯೇಕವಾಗಿ ತೆರಿಗೆ ವಿನಾಯಿತಿ ಪಡೆಯಬಹುದು. ಹಳೆಯ ತೆರಿಗೆ ಪದ್ಧತಿಗೆ ಮರಳಿದಲ್ಲಿ ಪ್ರತಿ ಸಾಲಗಾರನೂ ವಾರ್ಷಿಕವಾಗಿ ಗೃಹಸಾಲದ ಬಡ್ಡಿಗೆ ₹2 ಲಕ್ಷ (ಸೆಕ್ಷನ್ 24ಬಿ ಅಡಿ) ಮತ್ತು ಅಸಲು ಪಾವತಿಗೆ ₹1.5 ಲಕ್ಷದವರೆಗೆ (ಸೆಕ್ಷನ್ 80ಸಿ ಅಡಿ) ವಿನಾಯಿತಿ ಪಡೆಯಬಹುದು. ಅಂದರೆ ಒಟ್ಟು ₹3.5 ಲಕ್ಷ ಪ್ರತಿಯೊಬ್ಬರಿಗೆ ವಿನಾಯಿತಿ ಸಿಗುತ್ತದೆ.

ಸಾಲದಲ್ಲಿ ನಿಮ್ಮಿಬ್ಬರ ಪಾಲು ಸಮಾನವಾಗಿದೆ ಎಂದು ಊಹಿಸೋಣ. ಖರೀದಿಸುವ ಮನೆ ಒಂದೇ ಆದರೂ ನಿಮ್ಮಿಬ್ಬರ ಒಡೆತನ ಅದರ ದಾಖಲೆಗಳಲ್ಲಿ ಇರುವುದು ಮುಖ್ಯ. ಆದಾಯ ತೆರಿಗೆ ಸೆಕ್ಷನ್ 26ರ ಪ್ರಕಾರ ಮನೆ ಜಂಟಿ ಹೆಸರಿನಲ್ಲಿ ಹೊಂದಿರಬೇಕು ಹಾಗೂ ಸಾಲ ಪಾವತಿಗಳು ಇಬ್ಬರಿಂದಲೂ ಆಗಿರಬೇಕು. ಜೊತೆಗೆ, ನೀವು ಇಬ್ಬರೂ ಸಾಲದ ಸಹ ಪಾಲುದಾರರಾಗಿರಬೇಕು. ಮನೆ ನೋಂದಣಿ ದಾಖಲೆಯಲ್ಲಿ ನಿಮ್ಮ ಪತ್ನಿ ಹೆಸರನ್ನು ಸೇರಿಸಿದರೆ ಮಾತ್ರ ಅವರಿಗೂ ತೆರಿಗೆ ವಿನಾಯಿತಿ ಲಭಿಸುತ್ತದೆ. ಹೀಗಾಗಿ, ನೀವು ಮನೆ ನಿಮ್ಮ ಹೆಸರಲ್ಲಿ ದಾಖಲಿಸಿಕೊಳ್ಳುವ ಮೊದಲು ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಿ. ನಂತರ ಸಾಲಪತ್ರಗಳಲ್ಲೂ ನೀವಿಬ್ಬರೂ ಜಂಟಿ ಸಾಲಗಾರರಾಗಿ ಅರ್ಜಿ ಸಲ್ಲಿಸಿ.

ನಾಗೇಶ್ ಎನ್.ಆರ್., ಕೆ.ಆರ್. ಪುರಂ, ಬೆಂಗಳೂರು.

ನಾನು ಇತ್ತೀಚೆಗೆ ನನ್ನ ಬ್ಯಾಂಕ್ ಖಾತೆ ಇರುವ ಶಾಖೆಗೆ ಎಫ್‌ಡಿ ಬಗ್ಗೆ ಮಾಹಿತಿ ಪಡೆಯಲು ತೆರಳಿದ್ದೆ. ಅದು ಖಾಸಗಿ ಬ್ಯಾಂಕ್ ಆಗಿದ್ದರಿಂದ ಸಹಜವಾಗಿ ಅಲ್ಲಿನ ಉದ್ಯೋಗಿಗಳು ನನ್ನನ್ನು ಎಪ್‌ಡಿ ಜೊತೆಗೆ ಇನ್ಶೂರೆನ್ಸ್ ಸಹಿತ ಇರುವ ಎಫ್‌ಡಿ ತೆರೆಯಲು ಅವಕಾಶ ಇರುವ ಬಗ್ಗೆ ತಿಳಿಸಿದರು. ಅದರ ಕೆಲವು ಅಂಶಗಳು ಈ ರೀತಿ ಇವೆ.

ಟರ್ಮ್ ಇನ್ಶೂರೆನ್ಸ್  ಹೊಣೆಗಾರಿಕೆಯು ಒಂದು ವರ್ಷದ ಮಾನ್ಯತೆ ಹೊಂದಿದೆ. ನಂತರ ಅನ್ವಯವಾಗುವ ಪ್ರೀಮಿಯಂ ಮೊತ್ತ ಪಾವತಿಸುವುದರ ಮೂಲಕ ಅದನ್ನು ನವೀಕರಿಸಬೇಕು. ಅಂದರೆ ಎರಡನೇ ವರ್ಷದ ಪ್ರಾರಂಭದಿಂದ ನಿಯಮಿತವಾಗಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಜೀವ ವಿಮಾ ಹೊಣೆಗಾರಿಕೆ ಮುಂದುವರಿಯಲು ಠೇವಣಿ ಕನಿಷ್ಠ 12 ತಿಂಗಳವರೆಗೆ ನಿರಂತರವಾಗಿ ಇಡಬೇಕು. ಮಧ್ಯಂತರವಾಗಿ ಠೇವಣಿ ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ಜೀವ ವಿಮಾ ಲಾಭವು ಸ್ಥಗಿತಗೊಳ್ಳುತ್ತದೆ. ವಿಮೆಯ ಮೊತ್ತವು ಠೇವಣಿಯ ಮೊತ್ತಕ್ಕೆ ಸಮನಾಗಿರುತ್ತದೆ.

ಇಲ್ಲಿ ನನಗಿರುವ ಸಂದೇಹವೆಂದರೆ ನಾನು ಇಂತಹ ಉಚಿತ ಯೋಜನೆಗಳನ್ನು ಪಡೆದುಕೊಳ್ಳಬೇಕೇ? ನಿಜಕ್ಕೂ ಯಾವುದಾದರೂ ಸಮಸ್ಯೆ ಬಂದಾಗ ಇಂತಹ ವಿಮೆಯ ಪ್ರಯೋಜನ ಸಿಗಬಹುದೇ?

ಇತ್ತೀಚೆಗೆ ಹಲವು ಬ್ಯಾಂಕ್‌ಗಳು ಎಫ್‌ಡಿ ಸಹಿತ ಇನ್ಶೂರೆನ್ಸ್ ಎಂಬ ಸಂಯೋಜಿತ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಠೇವಣಿದಾರರಿಗೆ ಉಚಿತ ಜೀವ ವಿಮೆ ಮೂಲಕ ಹೆಚ್ಚಿನ ಠೇವಣಿಗಳನ್ನು ಆಕರ್ಷಿಸುವುದು ಇದರ ಉದ್ದೇಶ. ಆದರೆ, ಗ್ರಾಹಕರಾಗಿ ನಾವು ಇದನ್ನು ಸಮಗ್ರವಾಗಿ ಪರಿಶೀಲಿಸುವ ಜವಾಬ್ದಾರಿ, ಮಾಹಿತಿ ಹೊಂದಿರಬೇಕು.

ಮೊದಲನೆಯದಾಗಿ ಈ ರೀತಿ ನೀಡಲಾಗುವ ವಿಮಾ ಪ್ಲಾನ್ ಸಾಮಾನ್ಯವಾಗಿ ಟರ್ಮ್ ಇನ್ಶೂರೆನ್ಸ್ ಆಗಿದ್ದು, ಅದು ಒಂದು ವರ್ಷದ ಮಾನ್ಯತೆ ಹೊಂದಿರುತ್ತದೆ. ನಂತರದ ವರ್ಷಗಳಲ್ಲಿ ವಿಮೆ ಮುಂದುವರಿಸಲು ಪ್ರೀಮಿಯಂ ಪಾವತಿ ಗ್ರಾಹಕನ ಕಡೆಯಿಂದ ಅಗತ್ಯವಾಗಿರುತ್ತದೆ. ಕೆಲವೊಮ್ಮೆ ಮೊದಲ ವರ್ಷದ ನಂತರ ವಿಮೆ ನವೀಕರಿಸುವ ನಿಯಮಗಳು ಸ್ಪಷ್ಟವಾಗಿಲ್ಲದೆಯೂ ಇರಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಗಾಗಿ ಸ್ಪಷ್ಟತೆ ಕೋರಿ. ಅಲ್ಲದೆ, ಮಧ್ಯಂತರದಲ್ಲಿ ಎಫ್‌ಡಿ ಹಿಂಪಡೆದರೆ ಜೀವ ವಿಮಾ ಲಾಭ ರದ್ದಾಗುತ್ತದೆ. ಹೆಚ್ಚಿನ ಗ್ರಾಹಕರು ಈ ನಿಯಮವನ್ನು ಓದದೇ ಇಂತಹ ಠೇವಣಿಗಳನ್ನು ತೆಗೆದುಕೊಳ್ಳುತ್ತಾರೆ. ‘ಠೇವಣಿ ಮೊತ್ತಕ್ಕೆ ಸಮಾನ ಜೀವ ವಿಮೆ’ ಎಂಬ ವಿಚಾರ ಹೊರನೋಟಕ್ಕೆ ಆಕರ್ಷಕವಾಗಿದ್ದರೂ ಅದರ ಹಿಂದೆ ಇರುವ ಷರತ್ತುಗಳನ್ನು ಇಂತಹ ಸೌಲಭ್ಯ ಪಡೆಯುವ ಮೊದಲೇ ಓದಿ ತಿಳಿಯುವುದು ಅಗತ್ಯವಾಗಿದೆ. ಈ ಉತ್ಪನ್ನಗಳು ಮಾರ್ಕೆಟಿಂಗ್ ತಂತ್ರದ ಭಾಗವಾಗಿವೆ. ಇದರಿಂದ ಗ್ರಾಹಕರಾಗಿ ನಾವು ವ್ಯಾಜ್ಯ ಸಮಯದಲ್ಲಿ ನಿಜವಾಗಿಯೂ ಲಾಭ ಸಿಗುತ್ತದೆಯೇ ಎಂಬುದನ್ನು ತಿಳಿಯಲು ಅವರ ಎಲ್ಲಾ ಸೂಕ್ಷ್ಮ ಷರತ್ತುಗಳು ಮತ್ತು ಇನ್ಶೂರೆನ್ಸ್ ಮಿತಿಯೊಳಗೆ ಬರದ ವಿಚಾರಗಳ ಬಗ್ಗೆ ಮೊದಲೇ ವಿಚಾರಿಸಬೇಕು. ಯಾವತ್ತೂ ಉಚಿತವಾಗಿ ಸಿಗುವ ಯಾವುದೇ ಯೋಜನೆಗೂ ಅದರದ್ದೇ ಆದ ಸೀಮಿತ ವ್ಯಾಪ್ತಿ ಇರುತ್ತದೆ. ಅದು ನಮ್ಮ ಪ್ರಯೋಜನಕ್ಕಿಂತ ಅಂತಹ ಉತ್ಪನ್ನ ಗ್ರಾಹಕರಿಗೆ ಒದಗಿಸುವ ಸಂಸ್ಥೆಗಳ ಅಗತ್ಯಕ್ಕಾಗಿ ಅಥವಾ ಲಾಭಕ್ಕಾಗಿ ಸಂಯೋಜಿಸಲಾಗಿರುತ್ತದೆ ಎಂಬುದು ನೆನಪಿರಲಿ.

ಇಂತಹ ಸಂಯೋಜಿತ ಯೋಜನೆಗಳು ಮೂಲ ವಿಮಾ ಯೋಜನೆಗಳಿಗೆ ಪರ್ಯಾಯವಲ್ಲ. ನೀವು ನಿಮ್ಮ ನಿಜವಾದ ಅಗತ್ಯ ತಿಳಿದು ಪ್ರತ್ಯೇಕ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಯಾವತ್ತಿಗೂ ಒಳ್ಳೆಯದು.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.