ADVERTISEMENT

ಹಿರಿಯ ನಾಗರಿಕನಾದ ಮೇಲೆ ತೆರಿಗೆ ಉಳಿಸುವ ವಿಧಾನ ತಿಳಿಸಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 19:30 IST
Last Updated 5 ನವೆಂಬರ್ 2019, 19:30 IST
ಪುರಾಣಿಕ್‌
ಪುರಾಣಿಕ್‌   

ನಾನು ನಿವೃತ್ತ ಶಿಕ್ಷಕಿ. ವಯಸ್ಸು 72. ನನ್ನ ಠೇವಣಿಯಲ್ಲಿ ಕೆನರಾ ಬ್ಯಾಂಕಿನವರು₹ 4,961 TDS ಮಾಡಿರುತ್ತಾರೆ. ನಾನು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಈ ಹಣ ಹೇಗೆ ವಾಪಸ್ ಪಡೆಯಲಿ.

–ಶ್ರೀಮತಿ ಜಿ.ಸಿ., ಲಿಂಗದಹಳ್ಳಿ

ಉತ್ತರ: ನೀವು ಪ್ರತೀ ವರ್ಷ ಏಪ್ರಿಲ್ 15 ರೊಳಗೆ ಫಾರಂ ನಂಬರ್ 15 ಎಚ್ ಠೇವಣಿ ಇರಿಸಿದ ಬ್ಯಾಂಕಿಗೆ ಸಲ್ಲಿಸಿದರೆ, ಅವರು ನಿಮಗೆ ಬರುವ ಠೇವಣಿ ಮೇಲಿನ ಬಡ್ಡಿಗೆ TDS ಮಾಡುವುದಿಲ್ಲ. 1–4–2019ರ ನಂತರ ಎಲ್ಲಾ ಹಿರಿಯ ನಾಗರಿಕರಿಗೆ ಸೆಕ್ಷನ್ 80TTB ಆಧಾರದ ಮೇಲೆ, ಬ್ಯಾಂಕ್ ಠೇವಣಿ ಮೇಲಿನ ಬಡ್ಡಿಗೆ TDS ಮಾಡುವುದಿಲ್ಲ. 1–4–2019ರ ನಂತರ ಎಲ್ಲಾ ಹಿರಿಯ ನಾಗರಿಕರಿಗೆ ಸೆಕ್ಷನ್80TTB ಆಧಾರದ ಮೇಲೆ, ಬ್ಯಾಂಕಿನ ಠೇವಣಿಯಲ್ಲಿ ಗರಿಷ್ಠ₹ 50,000 ತನಕ ಬರುವ ಬಡ್ಡಿಗೆ ತೆರಿಗೆ ವಿನಾಯಿತಿ ಇದೆ. ನೀವು ನಿಮ್ಮ ಠೇವಣಿಯನ್ನು ವಿಂಗಡಿಸಿ ಬೇರೆ ಬೇರೆ ಬ್ಯಾಂಕಿನಲ್ಲಿ ಇರಿಸಿರಿ. ಈಗಾಗಲೇ ಕಡಿತವಾದ₹ 4,961, I.T. Return ತುಂಬಿ ವಾಪಸ್‌ ಪಡೆಯಬಹುದು. ಈ ವಿಚಾರದಲ್ಲಿ ಫಾರಂ ನಂಬ್ರು 16A ಬ್ಯಾಂಕ್‌ನಿಂದ ಪಡೆಯಿರಿ.

ADVERTISEMENT

ನಾನು ನನ್ನ ಹೆಂಡತಿ ಇಬ್ಬರೂ ಶಿಕ್ಷಕರು. ನಮ್ಮೀಬ್ಬರ ಒಟ್ಟು ಸಂಬಳ₹ 54,401. ಮನೆ ಖರ್ಚು–ಬಾಡಿಗೆ ಸೇರಿ ಒಟ್ಟಾರೆ ವೆಚ್ಚ ₹ 18,000. ನಾವು ನಿಮ್ಮ ಅಂಕಣದಿಂದ ಪ್ರಭಾವಿತರಾಗಿ, ಹರಪನಹಳ್ಳಿ, ಕೊಟ್ಟೂರು, ಹುಬ್ಬಳ್ಳಿ, ಹಗರಿಬೊಮ್ಮನಹಳ್ಳಿ– ಹೀಗೆ 30X40 ಅಳತೆಯ 4 ನಿವೇಶನಗಳನ್ನು ಖರೀದಿಸಿದ್ದೇವೆ. ನನ್ನ ಆಪ್ತರು ಎಲ್ಲಾ ನಿವೇಶನ ಮಾರಾಟ ಮಾಡಿ ಮನೆ ಕಟ್ಟಿಕೊಳ್ಳಿ ಎನ್ನುತ್ತಾರೆ. ನಿಮ್ಮ ಸಲಹೆ ಬೇಕಾಗಿದೆ.

–ಹೆಸರು, ಊರು ಬೇಡ

ಉತ್ತರ: ನೀವು ಹಣ ಉಳಿಸಿ 4 ನಿವೇಶನಗಳನ್ನು ಖರೀದಿಸಿರುವುದಕ್ಕೆ ಅಭಿನಂದಿಸುತ್ತೇನೆ. ಸ್ಥಿರ ಆಸ್ತಿ ಹೂಡಿಕೆ ನಿಜವಾಗಿ ಸ್ಥಿರವಾದದ್ದು, ಇವುಗಳ ಬೆಲೆ ಯಾವುದೇ ಹೂಡಿಕೆಗಳಿಗಿಂತ ಹೆಚ್ಚಿನ ವರಮಾನ ತರುತ್ತದೆ. ನಿಮ್ಮ ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಂಭವವಿಲ್ಲವಾದಲ್ಲಿ, ಈ ನಿವೇಶನ ಮಾರಾಟ ಮಾಡಿ ಮನೆ ಕಟ್ಟಿಸಿರಿ. ವರ್ಗಾವಣೆಗೆ ಒಳಗಾಗುವಲ್ಲಿ ನಿವೃತ್ತಿಗೆ ಸಮೀಪಿಸುತ್ತಿರುವಾಗ ಮನೆ ಕಟ್ಟುವುದೇ ಲೇಸು. ನಿಮಗೀರ್ವರಿಗೂ ಆದಾಯ ತೆರಿಗೆ ವಾರ್ಷಿಕ ಮಿತಿ₹ 5 ಲಕ್ಷ, ಸ್ಟ್ಯಾಂಡರ್ಡ್ ಡಿಡಕ್ಷನ್₹ 50,000 ಇದ್ದು, ಮನೆ ಸಾಲ ಪಡೆದಲ್ಲಿ, ತೆರಿಗೆಯಿಂದ ಏನೂ ಲಾಭವಿರುವುದಿಲ್ಲ. ಮನೆ ಕಟ್ಟುವ ಖರ್ಚು ಮುಂದೆ ಹೆಚ್ಚಾಗಬಹುದು. ಆದರೆ ನಿವೇಶನದ ಬೆಲೆ ಕೂಡಾ ಹೆಚ್ಚಾಗುತ್ತದೆ. ನೀವು ನಿವೃತ್ತಿಯಾಗುವಾಗ ಮುಂದಿನ ದಿನಗಳಿಗೆ ಸರಿಯಾಗಿ ಮನೆ ಕಟ್ಟಿಸಿಕೊಂಡರೆ ಮನಸ್ಸಿಗೆ ಸಮಾಧಾನವಾಗುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮನೆ ಬೇಕು ಎಂದಾದರೆ ನಿವೇಶನ ಮಾರಾಟ ಮಾಡಿ. ಇದೇ ವೇಳೆ ಒಂದೆರಡು ನಿವೇಶನ ಉಳಿಸಿಕೊಂಡು, ಬ್ಯಾಂಕ್ ಸಾಲ ಪಡೆದು ಮನೆ ಕಟ್ಟಿಸುವ ಸಾಧ್ಯತೆ ಇದ್ದರೆ ಅದನ್ನೂ ಆಲೋಚಿಸಿರಿ.

ತಿಂಗಳ ನಿವೃತ್ತಿ ವೇತನ ಸುಮಾರು₹ 68,000. ಎರಡು ವರ್ಷಗಳಲ್ಲಿ ಹಿರಿಯ ನಾಗರಿಕನಾಗುತ್ತೇನೆ. ತೆರಿಗೆ ಉಳಿಸಲು ವಿಧಾನ ತಿಳಿಸಿರಿ.

–ಎಚ್.ಕೆ. ಜಯದೇವ, ಬೆಂಗಳೂರು

ಉತ್ತರ: ನೀವು ಸ್ವಯಂ ನಿವೃತ್ತಿ ಹೊಂದಿರಬೇಕು. ನೀವು ದೊಡ್ಡ ಮೊತ್ತದ ಪಿಂಚಣಿದಾರರಾದ್ದರಿಂದ ನಿಮಗೆ ತೆರಿಗೆ ಬರುತ್ತದೆ.₹ 5 ಲಕ್ಷದ ಮಿತಿ ನಿಮಗೆ ಉಪಯೋಗವಾಗಲಾರದು. 60 ವರ್ಷ ತುಂಬಿದರೂ ಲಾಭವಿರುವುದಿಲ್ಲ. ತೆರಿಗೆ ಉಳಿಸಲು ಸೆಕ್ಷನ್ 80C ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಿರಿ. ಆರೋಗ್ಯ ವಿಮೆ ಮಾಡಿಸಿ ವಿಮಾ ಕಂತು ಬರುವ ಮೊತ್ತ ಒಟ್ಟು ಆದಾಯದಿಂದ ಕಳೆಯಬಹುದು. ಈ ಎರಡೂ ಮಾರ್ಗ ಬಿಟ್ಟರೆ ತೆರಿಗೆ ಉಳಿಸಲು ಬೇರೆ ಉತ್ತಮ ಮಾರ್ಗ ನಿಮಗಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.