ಸಿಬಿಲ್ ಅಂಕಗಳನ್ನು ಆಗಾಗ ಪರಿಶೀಲಿಸಬೇಕು ಎಂದು ತಜ್ಞರು ಕೆಲವರು ಸಲಹೆ ನೀಡುತ್ತಾರೆ. ಅದರ ಪ್ರಕಾರ ನಾನು ನನ್ನ ಸಿಬಿಲ್ ಅಂಕವನ್ನು ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ಪರಿಶೀಲಿಸುತ್ತೇನೆ. ಆದರೆ ಈಗ ಬ್ಯಾಂಕಿನ ಒಬ್ಬರು ಹೇಳಿರುವ ಪ್ರಕಾರ ಸಿಬಿಲ್ ಅಂಕವನ್ನು ಪದೇ ಪದೇ ಪರಿಶೀಲಿಸುವುದು ಒಳ್ಳೆಯದಲ್ಲವಂತೆ. ಇದು ನಿಜವೇ? ಮತ್ತೆ ಮತ್ತೆ ಸಿಬಿಲ್ ವರದಿ ಪಡೆಯುತ್ತಿದ್ದರೆ ಅದು ಹಣಕಾಸು ಸಂಸ್ಥೆಗಳಿಗೆ ನಮ್ಮ ಬಗ್ಗೆ ತಪ್ಪು ಸಂದೇಶ ನೀಡುತ್ತದೆಯಂತೆ. ಈ ವ್ಯಕ್ತಿಯು ಸಾಲಕ್ಕಾಗಿ ಪರಿತಪಿಸುತ್ತ ಇದ್ದಾನೆ ಎಂಬ ಅರ್ಥವನ್ನು ಅದು ನೀಡುತ್ತದಂತೆ. ನಿಜವೇ?
ನಿಮ್ಮ ಪ್ರಶ್ನೆ ವಾಸ್ತವದಿಂದ ಕೂಡಿದೆ. ಕೆಲವೊಮ್ಮೆ ಇಂತಹ ದ್ವಂದ್ವಗಳು ನಮ್ಮನ್ನು ಸಹಜವಾಗಿ ಕಾಡುತ್ತವೆ. ಟ್ರಾನ್ಸ್‌ಯೂನಿಯನ್ ಸಿಬಿಲ್ ಲಿಮಿಟೆಡ್ ಎಂಬ ಸಂಸ್ಥೆಯು ‘ಸಿಬಿಲ್ ಸ್ಕೋರ್’ ಎಂಬ ಅಂಕ ನೀಡುತ್ತಿದೆ. ಇದು ವೈಯಕ್ತಿಕ ಆರ್ಥಿಕ ಕ್ಷಮತೆಯ ಬಗ್ಗೆ ಮಾಹಿತಿ ನೀಡುತ್ತದೆ. ಸಾಲ ನೀಡುವ ಸಂಸ್ಥೆಗಳು, ಈ ಶ್ರೇಯಾಂಕ ಹೆಚ್ಚಿರುವವರನ್ನು ಆರ್ಥಿಕವಾಗಿ ಉತ್ತಮ ಸ್ಥಿರತೆ ಹೊಂದಿದವರೆಂದು ಪರಿಗಣಿಸುತ್ತವೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಧಿಕೃತ ಮಾನ್ಯತೆಯ ಮೇರೆಗೆ ಸಾಲಗಾರರ ಮಾಹಿತಿ ಸಂಗ್ರಹಿಸುವ ಹಾಗೂ ಅಗತ್ಯ ಉಳ್ಳವರಿಗೆ ಮಾಹಿತಿ ನೀಡುವ ಅಧಿಕಾರ ಹೊಂದಿದೆ. ಇದು ಯಾವುದೇ ಸಾಲ ಪಡೆಯುವಾಗ ಸಾಲದಾತ ಕಂಪನಿಗಳು ವೈಯಕ್ತಿಕ ಸಾಲಗಾರರ ಬಳಿ ಕೇಳುವ ಮೊದಲ ಮಾಹಿತಿ.
ನಮ್ಮ ಸಿಬಿಲ್ ಅಂಕವನ್ನು ನಾವೇ ಪರಿಶೀಲಿಸುವ ಅವಕಾಶ ಇದೆ. ಇದನ್ನು ‘ಸಾಫ್ಟ್ ಎನ್‌ಕ್ವೈರಿ’ ಎಂದು ಕರೆಯುತ್ತಾರೆ. ಯಾವುದೇ ಸಾಲದಾತ ಕಂಪನಿ ಅಥವಾ ಬ್ಯಾಂಕ್ ಮಾಡುವ ಇದೇ ಅಂಕ ಪರಿಶೀಲನೆಯನ್ನು ‘ಹಾರ್ಡ್ ಎನ್‌ಕ್ವೈರಿ’ ಎಂದು ಕರೆಯಲಾಗುತ್ತದೆ. ನಾವೇ ನಮ್ಮ ಶ್ರೇಯಾಂಕ ಪರಿಶೀಲನೆ ಮಾಡುವುದರಿಂದ ಅಂಕಗಳಿಗೆ ಧಕ್ಕೆ ಆಗುವುದಿಲ್ಲ. ಆದರೆ, ನಾವು ಸಾಲಕ್ಕಾಗಿ ವಿವಿಧ ಸಂಸ್ಥೆಗಳ ಮುಂದೆ ಪದೇ ಪದೇ ಅರ್ಜಿ ಸಲ್ಲಿಸುತ್ತಾ ಹೋದರೆ, ಸಾಲ ನೀಡುವ ಸಂಸ್ಥೆಗಳು ಮಾಡುವ ಮೌಲ್ಯಾಂಕ ಪರಿಶೀಲನೆಯಿಂದ ಅಂಕದ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಉಂಟಾಗುತ್ತದೆ. ಇದು ಸಾಲದ ತೀವ್ರ ಅಗತ್ಯ ವ್ಯಕ್ತಿಗೆ ಇದೆ ಎಂಬ ಚಿತ್ರಣವನ್ನು ನೀಡುತ್ತದೆ.
ಆದರೆ, ಸಾಲದ ಮರುಪಾವತಿ ಕಂತುಗಳನ್ನು ಸಕಾಲದಲ್ಲಿ ಪಾವತಿಸಿ, ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಸರಿಯಾಗಿ ಮಾಡಿ ಸಿಬಿಲ್ ಅಂಕಗಳಲ್ಲಿ ಸುಧಾರಣೆ ತಂದುಕೊಳ್ಳಲು ಅವಕಾಶ ಇರುತ್ತದೆ. ಹೀಗಾಗಿ ನೀವೇ ಸಿಬಿಲ್ ಅಂಕ ಪರಿಶೀಲಿಸಿದರೆ ತೊಂದರೆ ಆದೀತೆಂಬ ಭಯ ಬೇಡ. ಸಾಲ ನೀಡುವ ಅನೇಕ ಸಂಸ್ಥೆಗಳು ಅದನ್ನು ಪರಿಶೀಲಿಸಿದಾಗ ಮಾತ್ರ ಅಲ್ಪ ಪ್ರಮಾಣದಲ್ಲಿ ಈ ಸಮಸ್ಯೆ ಆಗುತ್ತದೆ.
ನಾನು ಮತ್ತು ನನ್ನ ಪತ್ನಿ ಈಗ ಮಂಗಳೂರಿನಲ್ಲಿ ವಾಸವಾಗಿದ್ದೇವೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನೆಲಸಿದ್ದೆವು. ಆಗ ಅಲ್ಲಿ ನಮ್ಮ ಮಗ ಒಂದು ಫ್ಲ್ಯಾಟ್ ಖರೀದಿಸಿದ್ದ. ಆಗ ಆತ ಬೆಂಗಳೂರಿನಲ್ಲೇ ಇದ್ದು ಉದ್ಯೋಗ ಮಾಡುತ್ತಿದ್ದ. ಕೋವಿಡ್ ನಂತರ ವಿದೇಶಕ್ಕೆ ಉದ್ಯೋಗದ ನಿಮಿತ್ತ ಹೋಗಿದ್ದಾನೆ, ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ಸಂಸಾರದೊಂದಿಗೆ ನೆಲಸಿದ್ದಾನೆ.
ನಮಗೆ ಇತರ ಅಗತ್ಯಗಳಿಗಾಗಿ ಹಣ ಬೇಕಿದೆ. ಬೆಂಗಳೂರಿನಲ್ಲಿ ಮಗ ಖರೀದಿಸಿದ ಮನೆ ಮಾರಾಟ ಮಾಡುವ ಯೋಜನೆಯಲ್ಲಿದ್ದೇವೆ. ಆತ ಅನಿವಾಸಿ ಭಾರತೀಯನಾಗಿರುವುದರಿಂದ ಈ ಮನೆಯನ್ನು ಮಾರಾಟ ಮಾಡಿದರೆ ಅನ್ವಯವಾಗುವ ತೆರಿಗೆ ಎಷ್ಟು? ನಿವಾಸಿ ಭಾರತೀಯರೊಂದಿಗೆ ತುಲನೆ ಮಾಡಿದರೆ ವ್ಯತ್ಯಸ್ಥ ರೀತಿಯಲ್ಲಿ ಆಗುತ್ತದೆಯೇ? ಈ ಬಗ್ಗೆ ನಮಗೆ ತುಸು ಮಾಹಿತಿಯ ಅಗತ್ಯವಿದೆ. ಆತ ಪದೇ ಪದೇ ಈ ಕಡೆಗೆ ಬರುವುದು ಅಸಾಧ್ಯ. ಉತ್ತಮ ಖರೀದಿದಾರರು ಸಿಕ್ಕಿದರೆ ಮಾರಾಟ ಕ್ರಯಪತ್ರ - ತೆರಿಗೆ ವಿಲೇವಾರಿ ಇತ್ಯಾದಿ ಒಂದೇ ಬಾರಿಗೆ ಪೂರ್ಣಗೊಳಿಸುವ ಅಂದಾಜು ನಮ್ಮದು. ಇದಲ್ಲದೆ, ತೆರಿಗೆ ಉಳಿತಾಯಕ್ಕೆ ಅವಕಾಶ ಇದೆಯೇ?
ನಿಮ್ಮ ಮಗ ‘ಅನಿವಾಸಿ ಭಾರತೀಯ’ ಆಗಿರುವುದರಿಂದ, ಆಸ್ತಿ ಮಾರಾಟದ ಮೇಲೆ ಅನ್ವಯವಾಗುವ ತೆರಿಗೆಯು ನಿವಾಸಿ ಭಾರತೀಯರಿಗೆ ಅನ್ವಯಿಸುವ ತೆರಿಗೆಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಅನಿವಾಸಿ ಭಾರತೀಯರ ವಿಚಾರದಲ್ಲಿ, ಫ್ಲ್ಯಾಟ್ ಮಾರಾಟದ ಸಮಯದಲ್ಲಿ ಖರೀದಿದಾರನಿಂದ ಮಾಲೀಕನಿಗೆ ಕೊಡುವ ಯಾವುದೇ ಪ್ರಮಾಣದ ಮೊತ್ತದ ಮೇಲೆ ತೆರಿಗೆ ಕಡಿತ ಮಾಡಬೇಕಾಗುತ್ತದೆ. ನಿವಾಸಿ ಭಾರತೀಯರು, ಆಸ್ತಿ ಮಾರಾಟದ ಮೇಲೆ ಸಾಮಾನ್ಯವಾಗಿ ₹ 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ-ಮಾರಾಟ ಆದಾಗ ಮಾತ್ರ ತೆರಿಗೆ ಕಡಿತದ ಪರಿಧಿಗೊಳಪಡುತ್ತಾರೆ.
ನೀವು ಮಾರಾಟ ಮಾಡಲು ಉದ್ದೇಶಿಸಿರುವ ಆಸ್ತಿಯು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ನಿಮ್ಮಲ್ಲಿ ಇದ್ದಿದ್ದಾಗಿದ್ದರೆ, ಅದರಿಂದ ಬರುವ ಲಾಭವು ದೀರ್ಘಾವಧಿ ಬಂಡವಾಳ ಲಾಭವಾಗುತ್ತದೆ. 2024ರ ಜುಲೈ 23ರಿಂದ ಅನಿವಾಸಿ ಭಾರತೀಯರು ಮಾರಾಟ ಮಾಡುವ ಸ್ಥಿರ ಆಸ್ತಿಗಳ ಲಾಭದ ಮೇಲೆ ಶೇ 12.5ರಷ್ಟು ತೆರಿಗೆ ಅನ್ವಯಿಸುತ್ತದೆ. ಆದರೆ ನಿವಾಸಿ ಭಾರತೀಯರಿಗೆ ಸಿಗುವ ಇಂಡೆಕ್ಸೇಶನ್ (ಹಣದುಬ್ಬರದ ಪ್ರಮಾಣದೊಂದಿಗೆ ಸರಿಹೊಂದಿಸುವುದು) ಸಹಿತ ಶೇ 20ರ ತೆರಿಗೆ ಅಥವಾ ಇಂಡೆಕ್ಸೇಶನ್ ರಹಿತ ಶೇ 12.5ರ ತೆರಿಗೆ ದರಗಳ ಲಾಭದಾಯಕ ಆಯ್ಕೆ ಅವರಿಗಿಲ್ಲ ಎಂಬುದು ಪ್ರಮುಖ ವ್ಯತ್ಯಾಸ.
ನೀವು ಕೇಳಿದಂತೆ ಈ ಆಸ್ತಿ ಮಾರಾಟದಿಂದ ಬರುವ ಲಾಭದ ಮೇಲಿನ ತೆರಿಗೆ ಉಳಿತಾಯಕ್ಕೆ ಅವಕಾಶಗಳೂ ಇವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಅನ್ವಯ, ಬಂದ ಲಾಭದ ಹಣವನ್ನು ಭಾರತದಲ್ಲೇ ಮತ್ತೊಂದು ವಾಸದ ಮನೆಗಾಗಿ ಹೂಡಿಕೆ ಮಾಡಿದರೆ, ಲಾಭದ ಮೇಲೆ ಅನ್ವಯಿಸುವ ತೆರಿಗೆಗೆ ವಿನಾಯಿತಿ ಸಿಗುತ್ತದೆ. ಅದಲ್ಲದೆ, ಮಾರಾಟ ಮಾಡಿದ ಆರು ತಿಂಗಳೊಳಗೆ, ಸೆಕ್ಷನ್ 54 ಇ.ಸಿ ಅಡಿ ಉಲ್ಲೇಖಿತ ಬಾಂಡ್‌ಗಳಲ್ಲಿ ₹ 50 ಲಕ್ಷದವರೆಗೆ ಹೂಡಿಕೆ ಮಾಡಿದರೆ, ಲಾಭದ ಮೇಲಿನ ತೆರಿಗೆಗೆ ವಿನಾಯಿತಿ ಲಭಿಸುತ್ತದೆ. ನೀವು ಹೆಚ್ಚಿನ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ. ಅವರ ಒಟ್ಟಾರೆ ಆದಾಯ ಎಷ್ಟಾಗಬಹುದು ಎಂಬ ಬಗ್ಗೆಯೂ ಯೋಜಿಸಿ. ಅಗತ್ಯ ಬಿದ್ದರೆ ಕಡಿಮೆ ಪ್ರಮಾಣದ ತೆರಿಗೆ ಕಡಿತಕ್ಕಿರುವ ಫಾರ್ಮ್ 13 ಸಲ್ಲಿಸಲು ಸೂಕ್ತ ಮಾರ್ಗದರ್ಶನ ಪಡೆಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.