ADVERTISEMENT

ಪ್ರಶ್ನೋತ್ತರ ಅಂಕಣ: ಬಾಕಿ ಪರ್ಸನಲ್ ಲೋನ್‌ ಅನ್ನು ಬೇಗ ತೀರಿಸಲೇ?

ಪ್ರಮೋದ ಶ್ರೀಕಾಂತ ದೈತೋಟ
Published 26 ನವೆಂಬರ್ 2025, 0:34 IST
Last Updated 26 ನವೆಂಬರ್ 2025, 0:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜೀವ್ ರಂಜನ್, ಹುಬ್ಬಳ್ಳಿ ಅವರ ಪ್ರಶ್ನೆ: ನಾನು ಕಾಲೇಜು ವಿದ್ಯಾರ್ಥಿ, ಬಿ.ಕಾಂ ಓದುತ್ತಿದ್ದೇನೆ. ನನಗೆ ಆದಾಯ ಇಲ್ಲ, ಕೆಲವೊಮ್ಮೆ ನನ್ನ ಮಿತ್ರನ ಅಂಗಡಿಯಲ್ಲಿ ಲೆಕ್ಕಪತ್ರ ಬರೆಯಲು ನೆರವಾಗುತ್ತೇನೆ. ನನ್ನ ಶಿಕ್ಷಣಕ್ಕೆಂದು ತಿಂಗಳಿಗೆ ಎರಡು ಸಾವಿರ ಪಾವತಿಸುತ್ತಾರೆ. ಈ ಹಣವನ್ನು ನಾನು ನನ್ನ ಕಾಲೇಜು ವೆಚ್ಚಕ್ಕೆ ಭರಿಸಲೇ ಅಥವಾ ಉಳಿತಾಯ ಮಾಡಲೇ? ಈ ಬಗ್ಗೆ ಮಾರ್ಗದರ್ಶನ ಮಾಡಿ.

ಉತ್ತರ: ನೀವು ನಿಮ್ಮ ಶಿಕ್ಷಣದ ಜೊತೆಗೆ ಲೆಕ್ಕಪತ್ರ ನಿರ್ವಹಿಸುವ ಕೆಲಸ ಮಾಡಿ ಆದಾಯ ಗಳಿಸುತ್ತಿರುವುದು ಪ್ರಶಂಸನೀಯ. ಇದು ನಿಮ್ಮಲ್ಲಿನ ಹೊಣೆಗಾರಿಕೆಯ ಜೊತೆಗೆ ಬದುಕಿನಲ್ಲಿರಬೇಕಾದ ಆರ್ಥಿಕ ಗುರಿಯನ್ನು ತೋರಿಸುತ್ತದೆ.

ನಿಮ್ಮ ಮನೆಯ ಆರ್ಥಿಕ ಸ್ಥಿತಿ ಪರಿಗಣಿಸಿ, ತಿಂಗಳಿಗೆ ದೊರಕುವ ಎರಡು ಸಾವಿರ ರೂಪಾಯಿಯ ಒಂದು ಭಾಗವನ್ನು ಕಾಲೇಜು ವೆಚ್ಚಕ್ಕೆ ಬಳಸಬಹುದು. ಕನಿಷ್ಠ ₹500ನ್ನು ನಿಯಮಿತವಾಗಿ ಉಳಿತಾಯ ಮಾಡಿ. ನೂರು ರೂಪಾಯಿ ಬಳಸಿಯೂ ಮ್ಯೂಚುವಲ್‌ ಫಂಡ್‌ ಎಸ್‌ಐಪಿ ಆರಂಭಿಸಬಹುದು. ಇದು ನಿಮ್ಮ ಒಟ್ಟಾರೆ ಹೂಡಿಕೆಯ ದಿಕ್ಕನ್ನು ನಿರ್ಧರಿಸುತ್ತದೆ. ಆರಂಭದ ಹಂತದಲ್ಲೇ ಉಳಿತಾಯದ ಅನುಭವ ಪಡೆಯಿರಿ. ಇಷ್ಟು ಚಿಕ್ಕ ಮೊತ್ತವನ್ನು ಎಸ್‌ಐಪಿ ಮೂಲಕ ಹೂಡಿಕೆ ಮಾಡುವುದರಿಂದ ಮುಂದೆ ಅದರ ವೃದ್ಧಿ ಹೇಗಾಗುತ್ತದೆ ಎಂಬುದನ್ನು ನೀವು ಸೂಕ್ಷ್ಮವಾಗಿ ಗಮನಿಸಿ. ನೀವು ವಾಣಿಜ್ಯ ಪದವಿಯಲ್ಲಿ ಇರುವುದರಿಂದ ಈ ಮಾಹಿತಿ ನಿಮ್ಮ ಶಿಕ್ಷಣಕ್ಕೂ ಪೂರಕ. ಇದು ನಿಮಗೆ ತರಬೇತಿ ಎಂಬುದಾಗಿಯೇ ತಿಳಿದುಕೊಳ್ಳಿ. ಅದರಿಂದಾಗುವ ಲಾಭ–ನಷ್ಟ ಸಣ್ಣ ಪ್ರಮಾಣದ್ದೇ ಆಗಿರಲಿ, ಅದರ ಅನುಭವ ನಿಮ್ಮಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡುವಂತೆ ಮಾಡುತ್ತದೆ.

ADVERTISEMENT

ಜಯದೇವ, ಮೈಸೂರು ಅವರ ಪ್ರಶ್ನೆ: ನಾನು ಕಳೆದ ಕೆಲವು ವರ್ಷಗಳಿಂದ ಹೂಡಿಕೆಗಾಗಿ ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆದಿದ್ದೇನೆ. ಪ್ರಸ್ತುತ ಸುಮಾರು ₹10 ಲಕ್ಷ ಸಾಲ ಇದೆ. ಸುಮಾರು ₹25 ಸಾವಿರದ ಇಎಂಐ ಪಾವತಿ ಮಾಡುತ್ತಿದ್ದೇನೆ. ನನ್ನ ತಿಂಗಳ ವೇತನ ₹90 ಸಾವಿರ. ನಾನು ಈ ಸಂದರ್ಭದಲ್ಲಿ ಈ ಸಾಲದ ಹಣದಿಂದ ಹೂಡಿಕೆ ಹೆಚ್ಚಿಸಲೇ ಅಥವಾ ಬಾಕಿ ಸಾಲವನ್ನು ಬೇಗನೆ ತೀರಿಸಲೇ? ನಾನು ನಿರೀಕ್ಷಿಸಿದಂತೆ ಮಾರುಕಟ್ಟೆ ಏರುಗತಿಯಲ್ಲಿ ಸಾಗುತ್ತಿಲ್ಲ ಹಾಗೂ ವೈಯಕ್ತಿಕ ಸಾಲದ ಬಡ್ಡಿ ಮುಂದಿನ ನಾಲ್ಕು ವರ್ಷದಲ್ಲಿ ₹3.36 ಲಕ್ಷ ಆಗಲಿದೆ. ಸಾಲದ ಮೊತ್ತ ನನ್ನ ಉಳಿತಾಯ ಖಾತೆಯಲ್ಲಿದೆ. ಶೇ 3-4ರಷ್ಟು ಬಡ್ಡಿ ಬರುತ್ತಿದೆ. ಹೂಡಿಕೆ ಸಾಹಸ ಬೇಡವೆಂದು ತೋರುತ್ತಿದೆ. ಈ  ಬಡ್ಡಿ ಭರಿಸುವ ಮಟ್ಟಕ್ಕೆ ಮುಂದಿನ ನಾಲ್ಕು ವರ್ಷದಲ್ಲಿ ಮಾರುಕಟ್ಟೆ ಏರಿಕೆ ಆಗಬಹುದೇ?

ಉತ್ತರ: ನೀವು ಹೇಳುತ್ತಿರುವ ಪರಿಸ್ಥಿತಿಯಲ್ಲಿ ಬಹಳಷ್ಟು ಮಂದಿ ಇದ್ದಿರಬಹುದು. ಆದರೆ ಹೂಡಿಕೆಗಾಗಿ ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ಆಕರ್ಷಕವಾಗಿ ಕಂಡರೂ, ಅದರ ಹಿಂದೆ ಇರುವ ಅಪಾಯ–ಫಲಿತಾಂಶಗಳ ಪೂರ್ವ ನಿರ್ಣಯ ಅಷ್ಟು ಸುಲಭವಲ್ಲ. ಮಾರುಕಟ್ಟೆಯ ದಿಕ್ಕು ಯಾವತ್ತೂ ಅಸ್ಥಿರವಾಗಿರುವ ಸಂದರ್ಭಗಳಲ್ಲಿ ಇದು ಇನ್ನೂ ಸಂಕೀರ್ಣವಾಗುತ್ತದೆ.

ಈಗ ಸುಮಾರು ₹10 ಲಕ್ಷ ಸಾಲ ಬಾಕಿ ಇದೆ, ತಿಂಗಳಿಗೆ ಸುಮಾರು ₹25 ಸಾವಿರ ಇಎಂಐ ಪಾವತಿಸುತ್ತಿದ್ದೀರಿ ಮತ್ತು ನಿಮ್ಮ ಮಾಸಿಕ ವೇತನ ₹90 ಸಾವಿರ. ಈ ಸಂದರ್ಭದಲ್ಲಿ ಹೂಡಿಕೆ ಮುಂದುವರಿಸುವುದು ಮತ್ತು ಸಾಲ ತೀರಿಸುವುದು – ಎರಡರಲ್ಲಿ ಯಾವುದು ಸರಿಯಾದ ದಾರಿ ಎಂದು ಪ್ರಶ್ನೆ ಸಹಜ.

ಹೂಡಿಕೆಗಾಗಿ ತೆಗೆದುಕೊಂಡ ಸಾಲ ಮತ್ತು ಮಾರುಕಟ್ಟೆಯ ಅಸ್ಥಿರತೆ ಒತ್ತಡದ ನಿರ್ಧಾರಕ್ಕೆ ಕಾರಣವಾಗಬಹುದು. ಮಾರುಕಟ್ಟೆ ಮುಂದಿನ ನಾಲ್ಕು ವರ್ಷಗಳಲ್ಲಿ ಏರಿಕೆಯಾಗುತ್ತದೆಯೇ ಎಂಬುದನ್ನು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇದು ಹಲವು ಅಂಶಗಳನ್ನು ಆಧರಿಸಿರುತ್ತದೆ. ನಿಮ್ಮ ಸಾಲದ ಬಡ್ಡಿ ಮುಂದಿನ ನಾಲ್ಕು ವರ್ಷಗಳಲ್ಲಿ ₹3.36 ಲಕ್ಷ ಆಗಲಿದೆ ಎಂದಿದ್ದೀರಿ. ಆದರೆ ಅದೇ ಹಣಕ್ಕೆ, ಉಳಿತಾಯ ಖಾತೆಯಲ್ಲಿ ಶೇ 3–4ರಷ್ಟು ಬಡ್ಡಿ ಬರುವುದರಿಂದ ನಿಮ್ಮ ವೈಯಕ್ತಿಕ ಸಾಲಕ್ಕಿರಬಹುದಾದ ಶೇ 14-15ರ ಬಡ್ಡಿ ಶೇ 11-12ಕ್ಕೆ ಇಳಿದಂತಾಗುತ್ತದೆ. ಇದು ಸ್ಪಷ್ಟವಾಗಿ ನಷ್ಟದ ವ್ಯವಹಾರವೆಂದೇ ತಿಳಿಯಬೇಕಾಗುತ್ತದೆ.

ಸಾಮಾನ್ಯವಾಗಿ ಇಂತಹ ಹಣಕಾಸು ನಿರ್ಧಾರ ಕೈಗೊಳ್ಳುವಾಗ ಅಥವಾ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಅದರ ಉದ್ದೇಶ ಹಾಗೂ ಅದರ ಪರಿಣಾಮಕಾರಿ ಉಪಯೋಗದ ಬಗ್ಗೆ ಗಮನಿಸಬೇಕು. ಹೂಡಿಕೆ ಮಾಡಲು ಸಾಲ ಬಳಸುವುದಿದ್ದರೂ, ಅದರ ಅಪಾಯ, ಪ್ರಯೋಜನ ಮತ್ತು ದೂರಗಾಮಿ ವಿಶ್ಲೇಷಣೆ ಅಗತ್ಯ. ವಾಸ್ತವದಲ್ಲಿ, ಹೂಡಿಕೆಗಳಿಗೆ ನಮ್ಮದೇ ಹಣ ಬಳಸುವುದು ಹೆಚ್ಚು ಸುರಕ್ಷಿತ. ಕಾರಣ, ಹೂಡಿಕೆಯಲ್ಲಿ ಏನಾದರೂ ನಷ್ಟವಾದರೆ ಅಸಲನ್ನೂ ಕೆಲವೊಮ್ಮೆ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಅಂತಹ ನಷ್ಟ ಭರಿಸುವ ಸಾಮರ್ಥ್ಯ ಇದ್ದಾಗ ಮಾತ್ರ ಸಾಹಸಕ್ಕೆ ಕೈ ಹಾಕಬಹುದು.

ನೀವು ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನಿಮ್ಮ ಉಳಿತಾಯ ಖಾತೆಯ ಹಣವನ್ನು ಇನ್ನೂ ಹೆಚ್ಚಿನ ಲಾಭ ನೀಡುವ (ಶೇ 6-7) ಡೆಟ್ ಫಂಡ್ ಅಥವಾ ಈಕ್ವಿಟಿ ಸೇವಿಂಗ್ಸ್ ಫಂಡ್‌ನಲ್ಲಿ (ಶೇ 6-10) ತೊಡಗಿಸಬಹುದು. ಇದರಿಂದ ತುಸು ಬಡ್ಡಿ ನಷ್ಟ ತಗ್ಗಿಸಬಹುದು. ತದನಂತರ ಸೂಕ್ತ ನಿರ್ಧಾರ ಕೈಗೊಳ್ಳಿ. ಸಾಲವನ್ನು ಮುಂಗಡ ಪಾವತಿಸಲು ಯೋಚಿಸುತ್ತಿದ್ದರೆ, ಸಾಲದ ಒಪ್ಪಂದದಲ್ಲಿ ಇರಬಹುದಾದ ಶೇ 2–5 ಪ್ರತಿಶತ ಪೂರ್ವಪಾವತಿ ಶುಲ್ಕ ಭರಿಸುವ ಬಗ್ಗೆಯೂ ಗಮನಿಸಿ. ನಿಧಾನವಾಗಿ ಅವಧಿಪೂರ್ವ ಪಾವತಿ ಮಾಡಿ ಹಾಗೂ ಸಾಲದಿಂದ ಹೊರಬನ್ನಿ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮುಂದುವರಿಸಬೇಕೆಂದೇ ನಿಮ್ಮ ನಿರ್ಧಾರ ಇದ್ದರೆ, ವೈಯಕ್ತಿಕ ಸಾಲಕ್ಕಿಂತ ನಿಮ್ಮ ಡಿ-ಮ್ಯಾಟ್‌ ಖಾತೆಯಲ್ಲಿ ಇರುವ ಷೇರು ಅಡವಿಟ್ಟು ಅದರ ಮೌಲ್ಯಕ್ಕೆ ಹೊಂದಿಕೊಂಡು ಸಾಲ ನೀಡುವ ‘ಮಾರ್ಜಿನ್ ಟ್ರೇಡಿಂಗ್’ ವ್ಯವಸ್ಥೆಯನ್ನು ಪಡೆಯಬಹುದು. ಇದರಿಂದ ಅನಗತ್ಯವಾಗಿ ಸಾಲ ಉಪಯೋಗಿಸದೆ, ಹೆಚ್ಚಿನ ಬಡ್ಡಿ ಕಟ್ಟುವ ಪ್ರಮೇಯ ನಿವಾರಿಸಬಹುದು. ಮಾರ್ಜಿನ್‌ ಟ್ರೇಡಿಂಟ್‌ ಸೌಲಭ್ಯ ಬಳಸಿದಾಗ ಹೂಡಿಕೆಗಳ ಮೌಲ್ಯ, ಅದರ ಗುಣಮಟ್ಟ ಆಧರಿಸಿ ಸಾಲ ಸಿಗುತ್ತದೆ.