ADVERTISEMENT

ಪ್ರಶ್ನೋತ್ತರ ಅಂಕಣ: ಪರ್ಸನಲ್ ಲೋನ್‌ಗಳ ಬಡ್ಡಿ ಕಡಿಮೆ ಮಾಡಿಕೊಳ್ಳುವುದು ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 12 ಜುಲೈ 2023, 0:13 IST
Last Updated 12 ಜುಲೈ 2023, 0:13 IST
   

–ಉಮೇಶ ಆರ್, ಊರು ತಿಳಿಸಿಲ್ಲ

ಪ್ರಶ್ನೆ: ನಾನು ಇಂಡಿಯನ್ ಬ್ಯಾಂಕ್‌ನಲ್ಲಿ ವೈಯಕ್ತಿಕ ಸಾಲ ₹6.40 ಲಕ್ಷ ಪಡೆದಿದ್ದು, ಅದರ ಇಎಂಐ ₹11,093. 84 ತಿಂಗಳ ಪಾವತಿಸಬೇಕು. ನಾನು ಈ ಸಾಲವನ್ನು ಬೇಗನೆ ತೀರಿಸಲು ಮತ್ತು ಬಡ್ಡಿ ಕಡಿಮೆ ಮಾಡಲು ಯಾವ ರೀತಿಯಲ್ಲಿ ಇಎಂಐ ಕಟ್ಟಬೇಕು?

ಉತ್ತರ: ವೈಯಕ್ತಿಕ ಸಾಲವನ್ನು ನಿಮ್ಮ ಆದಾಯ, ಸಿಬಿಲ್ ಅಂಕದ ಆಧಾರದ ಮೇಲೆ ನೀಡಲಾಗುತ್ತದೆ. ಇದನ್ನು ಪಡೆಯುವುದು ಇಂದಿನ ದಿನಗಳಲ್ಲಿ ಸುಲಭ. ಆಧಾರದ ಅಗತ್ಯ ಇಲ್ಲದೆ ಇದನ್ನು ನೀಡಲಾಗುತ್ತದೆ. ಹಾಗಾಗಿಯೇ ಇಂತಹ ಸಾಲಗಳ ಮೇಲಿನ ಬಡ್ಡಿಯು ಅಡಮಾನ ಸಾಲಗಳ ಬಡ್ಡಿಗಿಂತ ತುಸು ದುಬಾರಿ. ನಿಮ್ಮ ಸಾಲವನ್ನು ಅವಧಿಗೆ ಮೊದಲೇ ಪಾವತಿಸುವುದಕ್ಕೆ ಷರತ್ತುಗಳನ್ನು ವಿಧಿಸಲಾಗಿದೆಯೇ ಎನ್ನುವುದನ್ನು ತಿಳಿಯಿರಿ. ಅನಂತರ, ನಿಮ್ಮಲ್ಲಿರುವ ಹೆಚ್ಚುವರಿ ಉಳಿತಾಯದ ಮೊತ್ತವನ್ನು ಸಾಲ ಮರುಪಾವತಿಗೆ ಉಪಯೋಗಿಸಿಕೊಳ್ಳುವ ಬಗ್ಗೆ ಯೋಚಿಸಿ. ಈ ಮೇಲಿನ ಅಂಶಗಳನ್ನು ಪರಿಗಣಿಸಿದ ನಂತರ, ಕೆಳಗೆ ತಿಳಿಸಿರುವ ಯಾವುದಾದರೂ ಸೂಕ್ತ ವಿಧಾನ ಅನುಸರಿಸಿ ನಿಮ್ಮ ಸಾಲದ ಹೊರೆ ತಗ್ಗಿಸಬಹುದು.

ADVERTISEMENT

1. ಸಾಲ ಬಾಕಿ ವರ್ಗಾವಣೆ: ಕಡಿಮೆ ಬಡ್ಡಿ ನಿಗದಿ ಮಾಡಿರುವ ಇತರ ಯಾವುದಾದರೂ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸಿಕೊಳ್ಳಲು ಅವಕಾಶ ಇದೆಯೇ ಎಂಬುದನ್ನು ವಿಚಾರಿಸಿ. ಈ ನಿರ್ಧಾರ ಕೈಗೊಳ್ಳುವ ಮೊದಲು, ಒಟ್ಟಾರೆ ನಿಮ್ಮ ಪ್ರಸ್ತುತ ಬಡ್ಡಿ ಪಾವತಿಗಿಂತ ಕಡಿಮೆ ವೆಚ್ಚವಾಗುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ.

2. ಪೂರ್ವ ಪಾವತಿ: ನಿಮ್ಮಲ್ಲಿರುವ ಯಾವುದೇ ಹೆಚ್ಚುವರಿ ಮೊತ್ತ ಬಳಸಿ ಸಾಲವನ್ನು ಅವಧಿಗೆ ಮೊದಲೇ ಪಾವತಿ ಮಾಡುವತ್ತ ಗಮನ ಹರಿಸಿ. ಇದು ನೇರವಾಗಿ ನಿಮ್ಮ ಬಡ್ಡಿ ಹಾಗೂ ಇಎಂಐ ಮೊತ್ತ ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ಕೆಲವು ಬ್ಯಾಂಕುಗಳು ಕನಿಷ್ಠ 6ರಿಂದ 12 ತಿಂಗಳ ನಂತರವಷ್ಟೇ ಇಂತಹ ಅವಧಿಪೂರ್ವ ಮರುಪಾವತಿಗೆ ಅವಕಾಶ ಕೊಡುತ್ತವೆ. ಅವಧಿಪೂರ್ವ ಪಾವತಿಗೆ ಕೆಲವು ಬ್ಯಾಂಕುಗಳು ಬಾಕಿ ಇರುವ ಸಾಲದ ಅವಧಿಯ ಆಧಾರದಲ್ಲಿ ಶೇಕಡ 4ರವರೆಗೆ ಶುಲ್ಕ ವಿಧಿಸುತ್ತವೆ. ಈ ಬಗ್ಗೆ ವಿಚಾರಿಸಿ.

3. ಕಡಿಮೆ ಬಡ್ಡಿ ದರಕ್ಕಾಗಿ ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಸಿ: ಮೇಲಿನ ಅಂಶಗಳಿಂದ ನಿಮಗೆ ಪ್ರಯೋಜನ ಆಗುವುದಿಲ್ಲ ಎಂದಾದರೆ, ತಮ್ಮ ಬ್ಯಾಂಕ್‌ನೊಂದಿಗೆ ಉತ್ತಮ ಗ್ರಾಹಕ ಸಂಬಂಧ ಹೊಂದುವ ದೃಷ್ಟಿಯಲ್ಲಿ ಪ್ರಸ್ತುತ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಲು ಅವಕಾಶ ಕಲ್ಪಿಸಬಹುದು. ಕೆಲವೊಮ್ಮೆ ಗ್ರಾಹಕರ ಬ್ರ್ಯಾಂಡ್ ನಿಷ್ಠೆ ಹೆಚ್ಚಿಸಲು ಮತ್ತು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಬ್ಯಾಂಕುಗಳು ತಮ್ಮ ಹಾಲಿ ಗ್ರಾಹಕರಿಗೆ ಅವರ ಆರ್ಥಿಕ ಗಟ್ಟಿತನ ಆಧರಿಸಿ ವಿನಾಯಿತಿ ನೀಡುವ ನಿರ್ಧಾರ ಕೈಗೊಳ್ಳುತ್ತವೆ. ನೀವು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದರೆ, ಸಿಬಿಲ್ ಅಂಕ ಉತ್ತಮವಾಗಿದ್ದರೆ ಅಂತಹ ಅವಕಾಶಗಳು ಅಧಿಕವಾಗಿರುತ್ತವೆ.  

ಕೆಂಪರಾಜ್ ಕೆ. ಗೌಡ, ಮೈಸೂರು

ಪ್ರಶ್ನೆ: ಒಂದು ಷೇರು ಬ್ರೋಕರ್‌ನಿಂದ ಮತ್ತೊಂದು ಬ್ರೋಕರ್‌ಗೆ ನನ್ನ ಎಲ್ಲ ಷೇರುಗಳನ್ನು ವರ್ಗಾಯಿಸಬಹುದೇ? ವರ್ಗಾಯಿಸಬಹುದಾದರೆ ಹೇಗೆ? ಇದಕ್ಕಾಗಿ ಪ್ರತ್ಯೇಕ ತೆರಿಗೆ ಅಥವಾ ಇನ್ಯಾವುದೇ ಶುಲ್ಕ ಕಟ್ಟಬೇಕಾಗುತ್ತದೆಯೇ?

ಪ್ರಶ್ನೆ: ನಿಮ್ಮ ಪ್ರಶ್ನೆಗೆ ಸ್ಥೂಲವಾಗಿ ಉತ್ತರಿಸುವುದಾದರೆ, ಯಾವುದೇ ಷೇರು ಹೂಡಿಕೆದಾರರು ತಮ್ಮ ಡಿಮ್ಯಾಟ್ ಖಾತೆಗಳನ್ನು ಒಂದು ಬ್ರೋಕಿಂಗ್ ಸಂಸ್ಥೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸಲು ಯಾವುದೇ ತೊಡಕುಗಳಿಲ್ಲ. ಕೆಲವೊಂದು ಬಾರಿ ಕಾರಣಾಂತರದಿಂದ ನಾವು ಅನೇಕ ಡಿಮ್ಯಾಟ್ ಖಾತೆಗಳನ್ನು ತೆರೆದಿರುತ್ತೇವೆ. ಆದರೆ ನಂತರ ಯಾವುದೋ ವ್ಯವಹಾರವನ್ನು ಸುಲಭ ಆಗಿಸಿಕೊಳ್ಳಲಿಕ್ಕಾಗಿ ಒಂದು ಬ್ರೋಕಿಂಗ್ ಕಂಪನಿಯ ಹಿಡಿತದಲ್ಲಿರುವ ನಮ್ಮ ಷೇರುಗಳನ್ನು ಇನ್ನೊಂದು ಬ್ರೋಕಿಂಗ್ ಕಂಪನಿಗೆ ವರ್ಗಾಯಿಸಬೇಕಾದಾಗ ಕೆಲವು ಅಗತ್ಯ ಪತ್ರ ವ್ಯವಹಾರ - ದಾಖಲೆಗಳ ವರ್ಗಾವಣೆ ಇತ್ಯಾದಿಗಳನ್ನು ಮಾಡುವ ಮೂಲಕ ಇದನ್ನು ವರ್ಗಾಯಿಸಿಕೊಳ್ಳಬಹುದು.

ನಿಮ್ಮ ಆಯ್ಕೆಯ ಹೊಸ ಷೇರು ಬ್ರೋಕರ್‌ನೊಂದಿಗೆ ವರ್ಗಾವಣೆಗೆ ಸಂಬಂಧಿಸಿದ ಫಾರ್ಮ್ ಭರ್ತಿ ಮಾಡುವ ಮೂಲಕ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಬ್ರೋಕರ್‌ನಿಂದ ಡೆಲಿವರಿ ಇನ್‌ಸ್ಟ್ರಕ್ಷನ್ ಸ್ಲಿಪ್ (DIS) ಪಡೆದುಕೊಳ್ಳಿ, ಅಗತ್ಯವಿರುವಂತೆ ಪ್ರಸ್ತುತ ಡಿಮ್ಯಾಟ್ ಖಾತೆಯ ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ವರ್ಗಾಯಿಸುವ ಷೇರುಗಳ ಮಾಹಿತಿಯೊಂದಿಗೆ ಅವರಿಗೆ ಸಲ್ಲಿಸಿ. ಕೆಲವು ಷೇರು ಬ್ರೋಕರ್‌ಗಳು ತಮ್ಮ ವೆಬ್‌ಸೈಟ್‌ನಲ್ಲಿಯೇ ಈ ವರ್ಗಾವಣೆ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿರುತ್ತಾರೆ. ಅಂತಹ ಸುಲಭ ಅವಕಾಶದ ಬಗ್ಗೆ ವಿಚಾರಿಸಿ. ಈ ಸಂಪೂರ್ಣ ಪ್ರಕ್ರಿಯೆಯನ್ನು ಕೈಗೊಳ್ಳಲು, ನಿಮ್ಮ ಹಳೆಯ ಬ್ರೋಕರ್ ವರ್ಗಾವಣೆ ಶುಲ್ಕ ವಿಧಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಖಾತೆ ಅಥವಾ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಿ. ಇಲ್ಲವಾದರೆ, ಅದು ವರ್ಗಾವಣೆ ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸಬಹುದು.

ಇನ್ನು ತೆರಿಗೆಯ ವಿಚಾರ. ನಿಮ್ಮದೇ ಖಾತೆಯಲ್ಲಿರುವ ಷೇರುಗಳನ್ನು ಹೊಸ ಬ್ರೋಕರ್ ಸಂಸ್ಥೆಗೆ ವರ್ಗಾವಣೆ ಮಾಡಿದಾಗ ತೆರಿಗೆ ಕಟ್ಟಬೇಕಾಗಿಲ್ಲ. ಕಾರಣ ನೀವು ಯಾವುದೇ ಅನ್ಯ ವ್ಯಕ್ತಿಗೆ ಮಾರಾಟ ಮಾಡುತ್ತಿಲ್ಲ. ಇಲ್ಲಿ ನಿಮ್ಮ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಷೇರುಗಳ ವರ್ಗಾವಣೆ ಆಗುತ್ತದಷ್ಟೆ. ಇನ್ನೂ ಒಂದು ಅಂಶ ಇಲ್ಲಿ ಗಮನಿಸಬೇಕಾದುದೆಂದರೆ, ಮೂಲತಃ ಎಲ್ಲ ಬ್ರೋಕರ್‌ಗಳು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ಅಥವಾ ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ ಲಿಮಿಟೆಡ್‌ನಲ್ಲಿ (ಸಿಡಿಎಸ್‌ಎಲ್) ನಮ್ಮ ಖಾತೆ ತೆರೆಯಲು ನೆರವಾಗುವ ಮಧ್ಯವರ್ತಿಗಳಷ್ಟೇ. ನಮ್ಮ ಎಲ್ಲ ಹಣದ ವ್ಯವಹಾರ ಷೇರು ಬ್ರೋಕರ್‌ಗಳ ಮುಖಾಂತರ ನಡೆಯುತ್ತದಷ್ಟೆ. ಹೀಗಾಗಿ ಮೇಲಿನ ಡಿಪಾಸಿಟರಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಇದು ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಿದಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಬ್ರೋಕಿಂಗ್ ಸಂಸ್ಥೆಯೊಡನೆ ವಿಚಾರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.