ADVERTISEMENT

ಪ್ರಶ್ನೋತ್ತರ: ಹಣಕಾಸಿನ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 9 ಮೇ 2023, 19:40 IST
Last Updated 9 ಮೇ 2023, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಶ್ನೆ: ನಾನು ನನ್ನ ಸ್ನೇಹಿತರೊಬ್ಬರಿಗೆ ಮೌಲ್ಯಯುತವಾದ ಉತ್ಪನ್ನವೊಂದರ ಖರೀದಿಗೆ ಕ್ರೆಡಿಟ್ ಕಾರ್ಡ್ ನೀಡಿದ್ದೆ. ಅದನ್ನು ಬಳಸಿ ಅವರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಉತ್ಪನ್ನ ಖರೀದಿಸಿದ್ದಾರೆ. ನಂತರ ಅವರು ಆ ಹಣವನ್ನು ನನ್ನ ಖಾತೆಗೆ ಜಮಾ ಮಾಡಿದ್ದಾರೆ. ನಾನು ಆ ಹಣ ಬಳಸಿ ನನ್ನ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿದ್ದೇನೆ. ನನ್ನ ಪ್ರಶ್ನೆಯೆಂದರೆ, ಅವರು ನನಗೆ ಕೊಟ್ಟ ಹಣಕ್ಕೆ ನಾನು ತೆರಿಗೆ ಪಾವತಿಸಬೇಕೇ?

-ಹೆಸರು ಬೇಡ, ಊರು ಬೇಡ

ADVERTISEMENT

ಉತ್ತರ: ಆದಾಯ ತೆರಿಗೆಯ ಕಾನೂನಿನ ವ್ಯಾಖ್ಯೆಯಡಿ ಬರುವ ಆದಾಯವನ್ನಷ್ಟೇ ‘ತೆರಿಗೆಗೊಳಪಡುವ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಆದಾಯ ಪ್ರಮುಖವಾಗಿ ಐದು ಮೂಲಗಳೊಳಗೆ ಬರುವ ಲಕ್ಷಣ ಹೊಂದಿರಬೇಕು. ಉದಾಹರಣೆಗೆ: ಉದ್ಯೋಗದಿಂದ ಬರುವ ವೇತನ, ಮನೆ-ಕಟ್ಟಡಗಳಿಂದ ಬರುವ ಬಾಡಿಗೆ, ವ್ಯಾಪಾರ-ವೃತ್ತಿಯಿಂದಾಗುವ ಲಾಭ, ಬಂಡವಾಳ ಆಸ್ತಿಯ ಮಾರಾಟದಿಂದ ಬರುವ ಲಾಭ ಹಾಗೂ ಇತರ ಮೂಲಗಳಿಂದ ಬಂದ ಆದಾಯ. ಮೊದಲ ನಾಲ್ಕು ವರ್ಗಗಳ ಅಡಿ ಹೊಂದಿಕೆಯಾಗದ ಯಾವುದೇ ಆದಾಯ ಮೂಲ ಇತರ ಮೂಲದಲ್ಲಿ ಒಳಪಡುತ್ತದೆ. ಹೀಗಾಗಿ ಯಾವುದೇ ಹಣದ ಸ್ವೀಕೃತಿ ತೆರಿಗೆಗೊಳಪಡಲು ಅಂತಹ ಸ್ವೀಕೃತಿ ನಿಮ್ಮ ಆದಾಯವಾಗಿರಬೇಕು. ಹಾಗೂ ಮೇಲಿನ ಯಾವುದಾದರೂ ಒಂದು ವರ್ಗದಲ್ಲಿ ಬರುವ ಲಕ್ಷಣ ಹೊಂದಿರಬೇಕು. ವ್ಯಾಪಾರ-ವಾಣಿಜ್ಯ ವ್ಯವಹಾರದ ದೃಷ್ಟಿಯಿಂದಲ್ಲದ ಹಾಗೂ ಈಗಾಗಲೇ ತೆರಿಗೆಗೊಳಪಟ್ಟ ಆದಾಯ ಮೂಲದಿಂದ ನಡೆಸುವ ಅಪರೂಪದ ಇಂತಹ ವ್ಯವಹಾರಗಳು ಕಡಿಮೆ ತೆರಿಗೆ ಬಾಧ್ಯತೆ ಹೊಂದಿವೆ. ಆದರೆ ಇದೇ ವ್ಯವಹಾರ ಪದೇ ಪದೇ ಅಥವಾ ವಾಣಿಜ್ಯ ಉದ್ದೇಶದಿಂದ ಕೈಗೊಂಡಾಗ ನಿಖರ ದಾಖಲೆ ಹೊಂದಿ ವ್ಯವಹರಿಸುವ ಅಗತ್ಯವಿದೆ. ಹೀಗಾಗಿ ಇಂತಹ ಸಮಸ್ಯೆಗೆ ಪ್ರಸಕ್ತ ಸನ್ನಿವೇಶದಲ್ಲಿ ಸೂಕ್ತ ಪರಿಹಾರ ನಗದೇತರ ರೂಪದಲ್ಲೇ ವ್ಯವಹರಿಸುವುದು. ಒಂದು ಹಂತದ ವ್ಯವಹಾರ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಾಗೂ ಅದರ ಇನ್ನೊಂದು ಹಂತದ ವ್ಯವಹಾರ ನಗದು ರೂಪದಲ್ಲಿ ನಡೆದಾಗ ಸಮಸ್ಯೆ ಎದುರಾಗುತ್ತದೆ.

ಸರಿಯಾದ ದಾಖಲೆಗಳಿಲ್ಲದ ನಗದು ಜಮಾ ಮೂಲವನ್ನೂ ಅನುಮಾನದ ಮೇಲೆ ಆದಾಯ ತೆರಿಗೆ ಕಾನೂನಿನ ಅನ್ವಯ ಪ್ರಶ್ನಿಸುವ ಅವಕಾಶಗಳಿವೆ. ಅಂತಹ ಸಂದರ್ಭದಲ್ಲಿ ಖಾತೆಗೆ ಜಮಾ ಆದ ಮೊತ್ತ ಯಾವ ಕಾರಣಕ್ಕೆ ನಮ್ಮ ಆದಾಯ ಆಗಿರುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಖಾತೆ ಹೊಂದಿದ ತೆರಿಗೆದಾರನದ್ದು. ಇಂದು ಬ್ಯಾಂಕುಗಳು ₹50,000ಕ್ಕೂ ಮೇಲ್ಪಟ್ಟ ನಗದು ಜಮಾಕ್ಕೆ ಪ್ಯಾನ್ ಕಡ್ಡಾಯ ಎನ್ನುವುದು ಇಂತಹ ವ್ಯವಹಾರಗಳ ಮಾಹಿತಿ ಸಂಗ್ರಹದ ಭಾಗವಾಗಿದೆ ಎನ್ನುವುದನ್ನು ಮರೆಯಬಾರದು.

ಯಾವುದೇ ವ್ಯಕ್ತಿಯು ಖಾತೆಯನ್ನು ಹೊಂದಿರುವ ಬ್ಯಾಂಕ್‌ಗೆ ಹೋಗಿ, ವ್ಯಕ್ತಿಯ ಹೆಸರು ಮತ್ತು ಖಾತೆ ಸಂಖ್ಯೆಯನ್ನು ನೀಡುವ ಮೂಲಕ ಬೇರೊಬ್ಬರ ಖಾತೆಗೆ ಹಣವನ್ನು ಹಾಕಬಹುದು. ಆದರೆ ಈ ಮೇಲಿನ ನಿಯಮಗಳ ಹೊರತಾಗಿಯೂ ಬ್ಯಾಂಕುಗಳು ಜಮಾದಾರ ಹಾಗೂ ಜಮಾ ಮೊತ್ತ ಸ್ವೀಕರಿಸುವ ಖಾತೆದಾರನ ಅನುಮತಿಪತ್ರ ಕೋರಬಹುದು. ಇದು ಗ್ರಾಹಕರ ಖಾತೆಯಲ್ಲಾಗುವ ಅನುಮಾನಾಸ್ಪದ ವ್ಯವಹಾರಗಳ ಮೇಲೆ ನಿಗಾ ಇರಿಸುವ ಭಾಗ. ನಿಮ್ಮ ವಿಚಾರದಲ್ಲಿ, ನೀವು ಅನಪೇಕ್ಷಿತವಾಗಿ ಅಪರೂಪದ ಒಂದು ವ್ಯವಹಾರ ನಡೆಸಿರಬಹುದು. ಜಮಾಗೊಂಡ ಮೊತ್ತ ನಿಮ್ಮ ಆದಾಯವಲ್ಲ ಹಾಗೂ ವಾಣಿಜ್ಯ ಉದ್ದೇಶದಿಂದ ವ್ಯವಹರಿಸಿಲ್ಲ ಎನ್ನುವುದಕ್ಕೆ ಪೂರಕವಾದ ಮಾಹಿತಿ ಹೊಂದಿ ನಿಶ್ಚಿಂತರಾಗಬಹುದು.

ಇನ್ನೂ ಒಂದು ಮಾಹಿತಿ ಗಮನದಲ್ಲಿರಲಿ. ಆದಾಯ ತೆರಿಗೆಯ ನಿಯಮ 114ಇ ಪ್ರಕಾರ ಯಾವುದೇ ಉಳಿತಾಯ ಖಾತೆಗೆ ವರ್ಷದಲ್ಲಿ ₹ 10 ಲಕ್ಷ ನಗದು ಜಮಾ ಮಾಡಿದಾಗ ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗಾಗಿ ವಾರ್ಷಿಕವಾಗಿ ಪಾವತಿಸುವ ₹ 2 ಲಕ್ಷಕ್ಕೂ ಹೆಚ್ಚಿನ  ಮೊತ್ತ ಯಾವುದೇ ರೂಪದಲ್ಲಿ (ನಗದು, ಚೆಕ್, ನೆಫ್ಟ್ ಇತ್ಯಾದಿ) ಬಂದಾಗ ಬ್ಯಾಂಕುಗಳು ಆದಾಯ ತೆರಿಗೆ ಇಲಾಖೆಗೆ ಆ ವಿವರವನ್ನು ವಿನಿಮಯ ಮಾಡಬೇಕಾಗಿರುತ್ತದೆ.

ಪ್ರಶ್ನೆ: ನನ್ನ ವಯಸ್ಸು 85 ವರ್ಷ. ನಾನು ರಾಜ್ಯ ಸರ್ಕಾರದಿಂದ ಪಿಂಚಣಿ ‍ಪಡೆಯುವವ. 2023-24ನೇ ಸಾಲಿನಲ್ಲಿ ನನ್ನ ಆದಾಯ ₹7.20 ಲಕ್ಷ ಆಗುತ್ತದೆ. ಈ ವರ್ಷದಲ್ಲಿ ಮಧ್ಯಾವಧಿ ಪರಿಹಾರ ನೀಡಿದರೆ ಆದಾಯ ಇನ್ನೂ ಹೆಚ್ಚಾಗುತ್ತದೆ. ಬ್ಯಾಂಕಿನವರು ತೆರಿಗೆ ಕಡಿತಗೊಳಿಸಲು ಹಳೆ ತೆರಿಗೆ ವ್ಯವಸ್ಥೆ ಬೇಕೇ, ಹೊಸ ತೆರಿಗೆ ವ್ಯವಸ್ಥೆ ಬೇಕೇ ಎಂಬುದನ್ನು ತಿಳಿಸಲು ಸೂಚಿಸಿದ್ದಾರೆ. ನನ್ನ ಆಯ್ಕೆ ಏನಿರಬೇಕು?

–ಐ.ಯು. ಇಟಗಿ, ಹುಬ್ಬಳ್ಳಿ

ಉತ್ತರ: ನಿರ್ದಿಷ್ಟ ತೆರಿಗೆ ವ್ಯವಸ್ಥೆಯನ್ನು ಲಿಖಿತ ರೂಪದಲ್ಲಿ ಆಯ್ಕೆಮಾಡದ ಸಂದರ್ಭದಲ್ಲಿ ಹೊಸ ತೆರಿಗೆ ವ್ಯವಸ್ಥೆಯನ್ನು ಮೊದಲ ಆಯ್ಕೆಯನ್ನಾಗಿ ತೆರಿಗೆ ನಿರ್ಧರಿಸಲು ಹಾಗೂ ತೆರಿಗೆ ಕಡಿತ ಮಾಡಲು ಪರಿಗಣಿಸಬೇಕೆನ್ನುವುದು ಈಗಿನ ನಿಯಮ. ಆರ್ಥಿಕ ವರ್ಷ 2023-24ಕ್ಕೆ ಅನ್ವಯವಾಗುವಂತೆ, ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡುವ ತೆರಿಗೆದಾರರಿಗೆ, ವಿನಾಯಿತಿ (ಸೆಕ್ಷನ್ 87ಎ) ಸಹಿತ ₹7 ಲಕ್ಷದ ತೆರಿಗೆಗೊಳಪಡುವ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಸಂಬಳ ಅಥವಾ ಪಿಂಚಣಿ ಇದ್ದಾಗ ₹50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಇರುವ ಕಾರಣ ₹7.50 ಲಕ್ಷ ಆದಾಯ ಇದ್ದಾಗಲೂ ತೆರಿಗೆ ಅನ್ವಯವಾಗದ ಅವಕಾಶವಿದೆ.

ನಿಮಗೆ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಆದಾಯ ₹8 ಲಕ್ಷಕ್ಕೆ ವೃದ್ದಿಯಾಗಬಹುದೆಂದು ಊಹಿಸಿದರೂ, ಯಾವುದೇ ಹೂಡಿಕೆ ಇಲ್ಲದ ಸಂದರ್ಭದಲ್ಲಿ ಹೊಸ ತೆರಿಗೆ ವ್ಯವಸ್ಥೆ ಸೂಕ್ತ. ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ತೆರಿಗೆ ಉಳಿತಾಯದ ಎಫ್‌.ಡಿ ಇತ್ಯಾದಿಗಳಲ್ಲಿ ಒಟ್ಟು ₹1.50 ಲಕ್ಷದವರೆಗೆ ಹೂಡಿಕೆ ಮಾಡಿದರೆ ಮುಂದೆ ತೆರಿಗೆ ಪ್ರಮಾಣ ಕಡಿಮೆ ಮಾಡಬಹುದು. ಆಗ ಹಳೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಪ್ರಶ್ನೆಗೆ ಪೂರಕವಾಗಿ ಇನ್ನೂ ಒಂದು ಮಾಹಿತಿ. ನೀವು ಅತಿ ಹಿರಿಯ ನಾಗರಿಕರ (80 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು) ವರ್ಗಕ್ಕೆ ಸೇರಿದವರು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194ಪಿ ಅಡಿ, 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ನಿವಾಸಿ ಭಾರತೀಯ ತೆರಿಗೆದಾರರಿಗೆ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಖುದ್ದಾಗಿ ತೆರಿಗೆ ವಿವರ ಸಲ್ಲಿಸುವುದು ಕಡ್ಡಾಯವಲ್ಲ. ಅದಕ್ಕೆ ತೆರಿಗೆದಾರರು ಪಿಂಚಣಿ ಆದಾಯ ಹಾಗೂ ಬಡ್ಡಿ ಆದಾಯ ಮಾತ್ರ ಹೊಂದಿರಬೇಕು. ಇಂತಹ ಬಡ್ಡಿ, ಪಿಂಚಣಿ ಮೊತ್ತ ಜಮಾ ಆಗುತ್ತಿರುವ ಬ್ಯಾಂಕಿನಿಂದ ಬಂದಿರಬೇಕು. ತೆರಿಗೆ ನಿಯಮಾನುಸಾರ ಅಗತ್ಯ ಫಾರಂಗಳನ್ನು ಬ್ಯಾಂಕ್, ತೆರಿಗೆದಾರರಿಂದ ಪಡೆದು ಅನ್ವಯವಾಗುವ ತೆರಿಗೆಯನ್ನು ಸೆಕ್ಷನ್ 194ಪಿ ಅಡಿ ಕಡಿತಗೊಳಿಸಿರಬೇಕು. ಇಂತಹ ಸಂದರ್ಭದಲ್ಲಿ ನೀವು ವಿವರ ಸಲ್ಲಿಸುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.