ADVERTISEMENT

ಪ್ರಶ್ನೋತ್ತರ| ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಿ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ?

ಪ್ರಮೋದ ಶ್ರೀಕಾಂತ ದೈತೋಟ
Published 2 ಮೇ 2023, 18:37 IST
Last Updated 2 ಮೇ 2023, 18:37 IST
ತೆರಿಗೆ ಪ್ರಸ್ತಾವನೆಗಳು: ಸಿರಿಧಾನ್ಯಗಳಾದ ನವಣೆ, ಸಾಮೆ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ
ತೆರಿಗೆ ಪ್ರಸ್ತಾವನೆಗಳು: ಸಿರಿಧಾನ್ಯಗಳಾದ ನವಣೆ, ಸಾಮೆ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ   

ನಮ್ಮ ತಂದೆಯವರು ಒಂದು ವರ್ಷ ಹಿಂದೆ ನಮ್ಮ ಮನೆ ಮಾರಾಟ ಮಾಡಿ ಬಂದ ಹಣವನ್ನು ಬಂಡವಾಳ ವೃದ್ಧಿ ಖಾತೆಯಲ್ಲಿ (ಸುಮಾರು ₹ 50 ಲಕ್ಷ) ಹೂಡಿಕೆ ಮಾಡಿದ್ದರು. ನಂತರ ಅವರು ನಿಧನರಾದರು. ನಾವು ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನಗೆ ತಿಳಿದಂತೆ ಹೊಸ ಮನೆಯನ್ನು 3 ವರ್ಷದೊಳಗೆ ಅಥವಾ ಇನ್ನೊಂದು ಮನೆಯನ್ನು 2 ವರ್ಷದೊಳಗೆ ಖರೀದಿಸಬೇಕು. ತಂದೆಯವರ ಮರಣಾನಂತರ ಆ ಖಾತೆಯಲ್ಲಿನ ಹಣವನ್ನು ನಾವು ಈ ಮೇಲಿನಂತೆ ಹೊಸ ಮನೆಗಾಗಿ ಉಪಯೋಗಿಸಬೇಕೇ? ಈಗ ನಮ್ಮಲ್ಲಿ ಹೊಸ ಮನೆ ಹೊಂದುವ ವಿಚಾರ ಇಲ್ಲ. ಹಾಗಿದ್ದರೆ ಹಣ ಹಿಂಪಡೆಯುವಾಗ ತೆರಿಗೆ ಬರುತ್ತದೆಯೇ?

- ಮಂಜುನಾಥ, ಸಹಕಾರ ನಗರ, ಬೆಂಗಳೂರು

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಅಡಿ, ಯಾವುದೇ ಮನೆ ಮಾರಾಟ ಮಾಡಿದಾಗ ತೆರಿಗೆ ಉಳಿತಾಯ ಮಾಡಲು ಬಂಡವಾಳ ವೃದ್ಧಿ ಖಾತೆಯಲ್ಲಿ ಹಣ ಹೂಡಿಕೆ ಮಾಡಿ ತೆರಿಗೆ ತಗ್ಗಿಸುವ ಅವಕಾಶ ಮಾಡಿಕೊಡಲಾಗಿದೆ. ತೆರಿಗೆದಾರರಿಗೆ ಯಾವುದೇ ರೀತಿಯ ಖಚಿತ ನಿರ್ಧಾರ ಕೈಗೊಳ್ಳಲು ಒಂದೇ ಹಂತದಲ್ಲಿ ಸಾಧ್ಯವಾಗದಿದ್ದಾಗ ಯೋಚಿಸಿ ನಿರ್ಧಾರ ಕೈಗೊಳ್ಳಲು ಇದು ನೆರವಾಗುತ್ತದೆ. ಆದರೆ ಹೂಡಿಕೆ ಮಾಡಿದ ವ್ಯಕ್ತಿ ಕಾರಣಾಂತರದಿಂದ ತನ್ನ ನಿರ್ಧಾರ ಬದಲಿಸಿ, ಮನೆ ಕೊಳ್ಳುವ ಅಥವಾ ಕಟ್ಟಿಸುವ ಬದಲು ಖಾತೆಯಲ್ಲಿನ ಮೊತ್ತವನ್ನು ಹಿಂಪಡೆದಾಗ, ಹಿಂದೆ ಪಡೆದಿದ್ದ ವಿನಾಯಿತಿಗಳನ್ನು ತೆರಿಗೆ ನಿಯಮದನ್ವಯ ಊರ್ಜಿತಗೊಳಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಸಹಜವಾಗಿ ತೆರಿಗೆ ಕಟ್ಟಬೇಕಾಗುತ್ತದೆ.

ADVERTISEMENT

ಆದರೆ ನಿಮ್ಮ ವಿಚಾರದಲ್ಲಿ ಬಂದಿರುವ ಪ್ರಶ್ನೆ ತುಸು ಭಿನ್ನವಾದುದು. ನಿಮ್ಮ ತಂದೆಯವರು ಹೊಸ ಮನೆ ಖರೀದಿಸಲು ಉದ್ದೇಶಿಸಿ ಸುಮಾರು ₹ 50 ಲಕ್ಷವನ್ನು ಬಂಡವಾಳ ವೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಿದ್ದರು. ಆ ಬಳಿಕ ಅವರು ನಿಧನರಾದರು. ಈಗ ಆ ಮೊತ್ತದ ವಾರಾಸುದಾರರು ನೀವು. ಖಾತೆಯ ನಿಯಮಾವಳಿಯ ಪ್ರಕಾರ ನೀವು ಫಾರಂ-ಎಚ್ ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಹಣ ಹಿಂಪಡೆಯಬಹುದು.

ಈ ಸಂದರ್ಭದಲ್ಲಿ ಉದ್ಭವಿಸುವ ಸಹಜ ಪ್ರಶ್ನೆ ಎಂದರೆ, ಮೃತರ ಉತ್ತರಾಧಿಕಾರಿಗಳು ಖಾತೆಯಲ್ಲಿದ್ದ ಹಣವನ್ನು ಪಡೆದಾಗ ತೆರಿಗೆ ಪಾವತಿಸಬೇಕೆ ಎಂಬುದು. ಆದಾಯ ತೆರಿಗೆಯ ಸುತ್ತೋಲೆ ಸಂಖ್ಯೆ 743, (ದಿನಾಂಕ 6-5-1996) ಅನ್ವಯ ಇಂತಹ ಮೊತ್ತ ಕಾನೂನುಬದ್ಧ ಉತ್ತರಾಧಿಕಾರಿಗಳ ಕೈಗೆ ಹಸ್ತಾಂತರ ಆದಾಗ ತೆರಿಗೆಗೆ ಒಳಪಡುವುದಿಲ್ಲ. ಈ ಹಿನ್ನೆಲೆಯಲ್ಲಿ, ನೀವು ನಿಮ್ಮ ತಂದೆಯವರು ಬಂಡವಾಳ ವೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆದಾಗ ತೆರಿಗೆ ಕಟ್ಟುವ ಅಗತ್ಯವಿಲ್ಲ. ಹೀಗಾಗಿ ಹೊಸ ಮನೆಯ ಮೇಲೆ ಹೂಡಿಕೆ ಮಾಡುವ ವಿಚಾರವನ್ನು ನಿಮ್ಮ ಸಮಯ, ಅನುಕೂಲದ ಪ್ರಕಾರ ಮಾಡಬಹುದು.

ನಾನು ನನ್ನ ಪೋಷಕರಿಗೆ ಆರೋಗ್ಯ ವಿಮೆ ಮಾಡಿದ್ದೇನೆ. ಪ್ರೀಮಿಯಂ ಮೊತ್ತವನ್ನು ನಾನು ಪಾವತಿ ಮಾಡಿದ್ದೇನೆ. ನನ್ನ ತಂದೆ ನಿವೃತ್ತ ಸರ್ಕಾರಿ ಉದ್ಯೋಗಿ ಮತ್ತು ತಾಯಿ ಗೃಹಿಣಿ. ಸೆಕ್ಷನ್ 80ಡಿ ಅಡಿಯಲ್ಲಿ ನಾನು ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದೇ?

-ಸಂಜೀವಕುಮಾರ್ ಶಿವನಗೌಡರ್

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ಪ್ರಕಾರ, ತೆರಿಗೆದಾರರು ವಿಮಾ ಕಂತುಗಳ ಪಾವತಿಗೆ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದು. ಪತಿ-ಪತ್ನಿ, ತಂದೆ–ತಾಯಿ ಹಾಗೂ ತಮ್ಮ ಮೇಲೆ ಅವಲಂಬಿತರಾಗಿರುವ ಮಕ್ಕಳ ಹೆಸರಲ್ಲಿ ಪಾವತಿಸುವ ಆರೋಗ್ಯ ವಿಮಾ ಪ್ರೀಮಿಯಂ ಮೊತ್ತಕ್ಕೆ ವಿನಾಯಿತಿ ಇದೆ.

1. ತೆರಿಗೆದಾರ ಹಾಗೂ ಕುಟುಂಬ: 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ತೆರಿಗೆದಾರರಿಗೆ ಇದರ ಗರಿಷ್ಠ ವಿನಾಯಿತಿ ಮೊತ್ತ ₹ 25,000. ಅದೇ ರೀತಿ 60 ವರ್ಷ ಮೇಲ್ಪಟ್ಟ ತೆರಿಗೆದಾರರಾಗಿದ್ದರೆ ಮಿತಿ ₹ 50,000. ಕುಟುಂಬ ವರ್ಗದಲ್ಲಿ ತೆರಿಗೆದಾರ, ಪತಿ ಅಥವಾ ಪತ್ನಿ ಹಾಗೂ ಅವಲಂಬಿತರಾಗಿರುವ ಮಕ್ಕಳು ಒಳಪಡುತ್ತಾರೆ.

2. ತೆರಿಗೆದಾರನ 60 ವರ್ಷ ಮೀರಿರದ ಪೋಷಕರು: ಈ ವರ್ಗದಲ್ಲಿ ಪೋಷಕರ ಹೆಸರಲ್ಲಿ ಪಡೆಯುವ ವಿಮೆಗೆ ₹ 25,000ದವರೆಗೆ ವಿನಾಯಿತಿ ಲಭ್ಯವಿದೆ.

3. ತೆರಿಗೆದಾರನ 60 ವರ್ಷ ಮೀರಿದ ಪೋಷಕರು: ಒಂದು ವೇಳೆ ಪೋಷಕರ ವಯಸ್ಸು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ₹ 50,000ದವರೆಗೆ ವಿನಾಯಿತಿ ಪಡೆದುಕೊಳ್ಳಲು ಅವಕಾಶ ಇದೆ.

4. ವೈದ್ಯಕೀಯ ವೆಚ್ಚ: ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, 60 ವರ್ಷ ಮೀರಿದ ತೆರಿಗೆದಾರರು ಅಥವಾ ಅವರ ಪೋಷಕರು ಒಂದು ವೇಳೆ ಯಾವುದೇ ವಿಮಾ ಕಂಪನಿಯಿಂದ ವಿಮೆ ಪಡೆಯದಿದ್ದಲ್ಲಿ, ಸ್ವಂತ ಹಣದಿಂದ ವೈದ್ಯಕೀಯ ವೆಚ್ಚ ಭರಿಸಬೇಕಾಗುತ್ತದೆ. ಅಂತಹ ಮೊತ್ತಕ್ಕೂ ತೆರಿಗೆದಾರು ವಿನಾಯಿತಿ ಪಡೆಯಬಹುದು. ಇದರ ಮಿತಿ ತೆರಿಗೆದಾರನಿಗೆ ₹ 50,000 ಹಾಗೂ ಆತನ ಪೋಷಕರಿಗೆ ಸಂಬಂಧಿಸಿದ ವಿನಾಯಿತಿ ₹ 50,000.

ತೆರಿಗೆ ವಿನಾಯಿತಿ ಪಡೆಯಲು, ಈ ಮೇಲಿನ ವೈದ್ಯಕೀಯ ವೆಚ್ಚ ಅಥವಾ ಪ್ರಿಮಿಯಂ ಪಾವತಿ, ನಗದು ಮೂಲಕ ಆಗಿರಬಾರದು ಎಂಬ ನಿಯಮ ಇದೆ. ನೀವು ಹೊಸ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡಿಕೊಳ್ಳುವವರಾದರೆ ಈ ವಿನಾಯಿತಿ ಸಿಗಲಾರದು. ಹಳೆಯ ತೆರಿಗೆ ಪದ್ದತಿ ಅನುಸರಿಸುವವರಿಗಷ್ಟೇ ಈ ರೀತಿಯ ವಿನಾಯಿತಿಗಳು ಲಭ್ಯ. ನಿಮ್ಮ ತಂದೆ 60 ವರ್ಷ ಮೀರಿರುವ ಕಾರಣ ₹ 50,000ದವರೆಗೆ ಪೋಷಕರ ವರ್ಗದ ಅಡಿ ವಿನಾಯಿತಿ ಇದೆ. ತೆರಿಗೆದಾರರಾಗಿ ನಿಮಗೆ ಸಿಗುವ ₹ 25,000 ವಿನಾಯಿತಿ ಪ್ರತ್ಯೇಕ. ಹೀಗಾಗಿ  ಎರಡೂ ತೆರಿಗೆ ಪದ್ದತಿಯಡಿ ತೆರಿಗೆ ಎಷ್ಟು ತೆರಿಗೆ ಬರುತ್ತದೆ ಎಂಬುದನ್ನು ಲೆಕ್ಕ ಹಾಕಿ ನಿರ್ಧಾರ ಕೈಗೊಳ್ಳಿ. ನೇರವಾಗಿ ತೆರಿಗೆ ಲಾಭ ಇಲ್ಲದಿದ್ದರೂ, ವಿಮಾ ಪ್ರಯೋಜನ ಪಡೆಯಲು ಪ್ರಿಮಿಯಂ ಮುಂದುವರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.