ADVERTISEMENT

ಸರ್ಕಾರಿ ನೌಕರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇರುವ ನಿಯಮಗಳಿವು...

ಪ್ರಮೋದ ಶ್ರೀಕಾಂತ ದೈತೋಟ
Published 15 ಅಕ್ಟೋಬರ್ 2024, 23:36 IST
Last Updated 15 ಅಕ್ಟೋಬರ್ 2024, 23:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎಲ್ಲ ವರ್ಗದ ವ್ಯಕ್ತಿಗಳಿಗೆ ಮುಕ್ತ ಅವಕಾಶ ಇದ್ದರೂ ನಾಗರಿಕ ಸೇವಾ ಕಾನೂನು ಅನ್ವಯವಾಗುವ ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.

ನಾನು ರಾಜ್ಯ ಸರ್ಕಾರಿ ನೌಕರ. ಮ್ಯೂಚುವಲ್‌ ಫಂಡ್‌ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತಿಲ್ಲ ಎಂಬ ನಿಯಮವು ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲಿದೆ ಎಂಬುದನ್ನು ಕೇಳಲ್ಪಟ್ಟೆ. ಇದು ಹೌದೇ? ಒಂದು ವೇಳೆ ಹೌದಾಗಿದ್ದಲ್ಲಿ ನಮ್ಮ ಹಣವನ್ನು ಹೂಡಿಕೆ ಮಾಡಿ ಹಣ ಬೆಳೆಸದಂತೆ ನಿರ್ಬಂಧಿಸಲು ಸರ್ಕಾರಕ್ಕೆ ಯಾವ ಹಕ್ಕಿದೆ? ದಯಮಾಡಿ ಪರಿಹಾರೋಪಾಯ ತಿಳಿಸಿ‌.– ಚಂದ್ರಶೇಖರ್, ಯಾದಗಿರಿ.

ADVERTISEMENT

ನಮ್ಮ ಹಿಂದಿನ ಕೆಲವು ಸಂಚಿಕೆಗಳಲ್ಲಿ ವಿವಿಧ ಓದುಗರು ಕೇಳಿದ ಇದೇ ರೀತಿಯ ಪ್ರಶ್ನೆಗೆ ಈ ಹಿಂದೆಯೂ ಉತ್ತರಿಸಲಾಗಿದೆ. ನಾಗರಿಕ ಸೇವಾ ನಿಯಮದಲ್ಲಿ ಈ ಬಗ್ಗೆ ನಿರ್ಬಂಧ ಇದೆ. ನಿಮ್ಮ ಅಭಿಪ್ರಾಯದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎಲ್ಲ ವರ್ಗದ ವ್ಯಕ್ತಿಗಳಿಗೆ ಮುಕ್ತ ಅವಕಾಶ ಇದ್ದರೂ ನಾಗರಿಕ ಸೇವಾ ಕಾನೂನು ಅನ್ವಯವಾಗುವ ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ.

ಈ ನಿಯಮದ ಉದ್ದೇಶ ಷೇರುಪೇಟೆ ವ್ಯವಹಾರದಿಂದ ತಮ್ಮ ಕರ್ತವ್ಯ ಪಾಲನೆಯಲ್ಲಿ ಲೋಪವಾಗುವ ಅಥವಾ ಪ್ರಲೋಭನೆಗೊಳಗಾಗುವ ಸಾಧ್ಯತೆ ಇರುವುದನ್ನು ನಿಯಂತ್ರಿಸುವುದಾಗಿದೆ. ಈ ನಿರ್ಬಂಧ ಸರ್ಕಾರಿ ಉದ್ಯೋಗಿಯ ಪತಿ- ಪತ್ನಿ-ಮಕ್ಕಳಿಗೂ ಇದೆ ಎನ್ನುವುದು ಗಮನಾರ್ಹ ವಿಚಾರ.

ಕರ್ನಾಟಕ ಸಿವಿಲ್ ಸರ್ವಿಸಸ್ ರೂಲ್ಸ್ 1966ರ (ಕರ್ನಾಟಕ ನಾಗರಿಕ ಸೇವಾ ನಿಯಮಗಳು) ನಿಯಮಾವಳಿಯಂತೆ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಅನ್ವಯಿಸುವಂತೆ ಈ ನಿರ್ಬಂಧಗಳನ್ನು ಹೇರಲಾಗಿದೆ. ನಿಯಮ 21ರ ಅನ್ವಯ  ಯಾವುದೇ ಸರ್ಕಾರಿ ಉದ್ಯೋಗಿಗಳು ಷೇರು ಅಥವಾ ಇತರೆ ಹೂಡಿಕೆ ಉತ್ಪನ್ನದಲ್ಲಿ ಸ್ಪೆಕ್ಯುಲೇಟಿವ್ (ತ್ವರಿತ ದರ ಏರಿಳಿತ) ರೂಪದಲ್ಲಿರುವ ವ್ಯವಹಾರಗಳಲ್ಲಿ ತೊಡಗಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿಯಮವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಗೆ ಬರುವ ಇಲಾಖೆಗಳಲ್ಲಿ ಉದ್ಯೋಗ ಮಾಡುವ ಎಲ್ಲಾ ನೌಕರರಿಗೂ ಆಯಾ ಪ್ರಾದೇಶಿಕ ನಿಯಮಗಳಂತೆ ಅನ್ವಯಿಸುತ್ತದೆ.

ಆದರೆ, ಕೇವಲ ಹೂಡಿಕೆ ದೃಷ್ಟಿಯಿಂದ ಮಾಡುವ ವ್ಯವಹಾರ ಇದರಲ್ಲಿ ಒಳಗೊಳ್ಳುವುದಿಲ್ಲ. ಕೆಲವೊಂದು ರೀತಿಯ ಹೂಡಿಕೆಗಳಿಗೆ ರಿಯಾಯಿತಿಗಳನ್ನೂ ನೀಡಲಾಗಿದೆ. ಉದಾಹರಣೆಗೆ ಹಂತ ಹಂತವಾಗಿ ಷೇರುಗಳನ್ನು ದೀರ್ಘಾವಧಿಗಾಗಿ ಖರೀದಿಸಿ ಕೆಲವು ವರ್ಷದ ಬಳಿಕ ಮಾರಾಟ ಮಾಡಿದಾಗ ಅದು ಹೂಡಿಕೆ ಎಂದೇ ಪರಿಗಣಿಸಲ್ಪಡುತ್ತದೆ.

ನಿಷೇಧಿತ ಪರಿಮಿತಿಯಲ್ಲಿ ಅಲ್ಪಾವಧಿ ಷೇರು ಖರೀದಿ ಮಾರಾಟ, ಕರೆನ್ಸಿ ಹಾಗೂ ಕಮೋಡಿಟಿ ವಹಿವಾಟು, ಫ್ಯೂಚರ್ಸ್ ಮತ್ತು ಆಪ್ಶನ್ ವ್ಯವಹಾರ ಅಥವಾ ಇಂಟ್ರಾಡೇ ಟ್ರೇಡಿಂಗ್ ಇತ್ಯಾದಿಗಳು ಇಲ್ಲಿ ಬಹುಮುಖ್ಯವಾಗಿ ಒಳಗೊಳ್ಳುತ್ತವೆ. ನಿಯಮಾವಳಿಯಲ್ಲಿ ಎಷ್ಟು ಬಾರಿ ವ್ಯವಹರಿಸಬಹುದು ಎನ್ನುವ ನಿರ್ದಿಷ್ಟ ಮಾಹಿತಿ ನೀಡಿಲ್ಲದಿದ್ದರೂ, ಅದರರ್ಥ ಅನೇಕ ಬಾರಿ ಖರೀದಿ ಮಾರಾಟ ಮಾಡಬಹುದೆಂದಲ್ಲ. ದೀರ್ಘಾವಧಿಗೆ ಷೇರುಗಳಲ್ಲದೆ ಎಸ್‌ಐಪಿ, ಗೋಲ್ಡ್ ಬಾಂಡ್‌, ಆರ್‌ಬಿಐ ಬಾಂಡ್‌ ಮತ್ತು ಅಂತಹ ಇತರೆ ಹೂಡಿಕೆಗಳನ್ನೂ ಮಾಡಬಹುದು. ಈ ಬಗ್ಗೆ ಅಗತ್ಯ ಬಿದ್ದರೆ ಸಂಬಂಧ‍ಪಟ್ಟ ಉನ್ನತ ಅಧಿಕಾರಿಗಳಿಗೂ ನೀವು ಲಿಖಿತ ರೂಪದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ನಾನು ವಿದ್ಯಾರ್ಥಿಯಾಗಿದ್ದು, ದೀರ್ಘಾವಧಿ ಸಂಪತ್ತನ್ನು ಸೃಷ್ಟಿಸುವ ಗುರಿ ಹೊಂದಿದ್ದೇನೆ. ಸಣ್ಣ ಉಳಿತಾಯದೊಂದಿಗೆ ನಾನು ಮ್ಯೂಚುವಲ್ ಫಂಡ್‌ಗಳಲ್ಲಿ ಹೇಗೆ ಹೂಡಿಕೆ ಹೇಗೆ ಪ್ರಾರಂಭಿಸಬಹುದು ಮತ್ತು ಕಡಿಮೆ ಅಪಾಯದೊಂದಿಗೆ ಸಮತೋಲಿತ ಬೆಳವಣಿಗೆ ಹೊಂದಲು ಯಾವ ರೀತಿಯ ಫಂಡ್‌ಗಳನ್ನು ಪರಿಗಣಿಸಬೇಕು?–ಕಿರಣ್ ನೇಮಗೌಡ, ಅಥಣಿ, ಬೆಳಗಾವಿ ಜಿಲ್ಲೆ.

ನೀವು ವಿದ್ಯಾರ್ಥಿ ಜೀವನದ ಹಂತದಲ್ಲೇ ದೀರ್ಘಾವಧಿ ಹೂಡಿಕೆ ಮಾಡಲು ಮನಸ್ಸು ಮಾಡಿರುವುದು ದೊಡ್ಡ ವಿಚಾರ. ಮ್ಯೂಚುವಲ್ ಫಂಡ್‌ಗಳ ಮೂಲ ಉದ್ದೇಶ ಹೂಡಿಕೆಯಲ್ಲಿ ಆಸಕ್ತಿ ಇರುವ ವರ್ಗದಿಂದ ಹಣ ಸಂಗ್ರಹಿಸಿ, ಅವರಿಗೆ ನಿರ್ದಿಷ್ಟ ಗುರಿಯ ಸೂಚ್ಯಂಕಕ್ಕಿಂತ ಅಥವಾ ಅದೇ ವರ್ಗದ ಇತರೆ ಫಂಡ್‌ಗಳ ಸರಾಸರಿ ಲಾಭಕ್ಕಿಂತ ತುಸು ಹೆಚ್ಚಿನ ಲಾಭ ಮಾಡಿ ಕೊಡುವುದಾಗಿದೆ. ಇದರಿಂದ ಫಂಡ್ ನಿರ್ವಹಿಸುವ ವ್ಯಕ್ತಿಗಳ ಕ್ಷಮತೆ ಅರಿವಿಗೆ ಬರುತ್ತದೆ.

ಉದಾಹರಣೆಗೆ ನಿಫ್ಟಿ ಸೂಚ್ಯಂಕವನ್ನು ಮಾನದಂಡವಾಗಿ ಪರಿಗಣಿಸುವ ವಿವಿಧ ಇಂಡೆಕ್ಸ್ ಫಂಡ್‌ಗಳನ್ನು ಪರಿಗಣಿಸುವುದಾದರೆ ಮಾಸಿಕವಾಗಿ ಸೂಚ್ಯಂಕ ಶೇ 5ರಷ್ಟು  ಏರಿಕೆ ಕಂಡಾಗ ಅದಕ್ಕಿಂತ ಅಧಿಕ ಲಾಭ ಗಳಿಸಿಕೊಡುವ ಫಂಡ್ ಅಥವಾ ಕುಸಿಯುತ್ತಿರುವಾಗ ಅದೇ ಸೂಚ್ಯ೦ಕಕ್ಕಿಂತ ಕಡಿಮೆ ಕುಸಿತಕ್ಕೊಳಗಾಗುವಂತೆ ನಿರ್ವಹಿಸುವುದು ಫಂಡ್ ಮ್ಯಾನೇಜರ್‌ನ ನಿಪುಣತೆ ತೋರಿಸುತ್ತದೆ. ಹೂಡಿಕೆಯ ಆಯ್ಕೆಯಲ್ಲಿ ಈ ವಿಚಾರವನ್ನು ಗಮನದಲ್ಲಿ ಇರಲಿ. ಫಂಡ್‌ಗಳ ತುಲನೆಯನ್ನು ಇಂಡೆಕ್ಸ್ ಜೊತೆ ಸೂಕ್ಷ್ಮವಾಗಿ ಮಾಡಿ.

ನೀವು ಹೂಡಿಕೆ ಆರಂಭಿಸುವುದಿದ್ದರೆ, ಇಂಡೆಕ್ಸ್ ಸೂಚ್ಯಂಕ ಆಧಾರಿತ ಫಂಡ್‌ಗಳನ್ನು ಮೊದಲು ಆಯ್ಕೆ ಮಾಡಿ. ಇದು ನಿಮಗೆ ವಿವಿಧ ಸನ್ನಿವೇಶದಲ್ಲಿ ಮಾರುಕಟ್ಟೆ ಏರಿಳಿತಗಳ ಅನುಭವ ಮಾಡಿಕೊಡುತ್ತದೆ. ಅಲ್ಲದೆ, ಇಂಡೆಕ್ಸ್ ಫಂಡ್‌ಗಳು ಯಾವತ್ತೂ ಆಯ್ಕೆ ಮಾಡಿದ ಇಂಡೆಕ್ಸ್‌ನ ತೂಕಕ್ಕೆ ಸಮನಾಗಿ ಇರುವುದರಿಂದ ಅದರಂತೆಯೇ ವ್ಯವಹರಿಸುತ್ತದೆ. ಇವು ವಿಪರೀತ ಕುಸಿತ ಕಾಣುವ ಸನ್ನಿವೇಶಗಳು ತೀರಾ ವಿರಳ.

ಕಳೆದ ಕೆಲವು ವರ್ಷದಿಂದ ಯಾವುದೇ ಇಂಡೆಕ್ಸ್ ಆಗಿರಲಿ, ದೀರ್ಘಾವಧಿಯಲ್ಲಿ ನಿಧಾನವಾಗಿಯಾದರೂ ಏರುಗತಿಯನ್ನೇ ಕಂಡಿದೆ.  ಹೀಗಾಗಿ, ಮೊದಲ ಹಂತದ ಅನುಭವಕ್ಕೆ ಇಂಡೆಕ್ಸ್ ಮ್ಯೂಚುವಲ್ ಫಂಡ್ ಉತ್ತಮವಾಗಿದೆ. ಕ್ರಮೇಣ ಉತ್ತಮ ಈಕ್ವಿಟಿ ಆಧಾರಿತ ಫಂಡ್‌ಗಳ ಬಗ್ಗೆ ಗಮನಹರಿಸಿ. ಅದಕ್ಕಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಫಂಡ್‌ಗಳ ವಿಶೇಷತೆಯನ್ನು ಅರ್ಥೈಸಿಕೊಳ್ಳಿ.

ದೀರ್ಘಾವಧಿ ಸಂಪತ್ತು ಸೃಷ್ಟಿಸುವ ಉದ್ದೇಶ ಹೊಂದಿದ್ದಾಗ ಅಲ್ಪಾವಧಿ ಸಮಯದಲ್ಲಾಗುವ ಏರುಪೇರುಗಳು ಗೌಣ. ಇಲ್ಲಿ ಯೋಜಿತ ನಿರ್ಧಾರ ಹಾಗೂ ಸರಿಯಾದ ಫಂಡ್‌ಗಳ ಸಕಾಲಿಕ ಆಯ್ಕೆಯೇ ಎಲ್ಲದಕ್ಕಿಂತ ಮುಖ್ಯ. ಒಂದಷ್ಟು ಅಪಾಯ ನಿರ್ವಹಿಸುವ ಗುಣವೂ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.